ಅಳವಂಡಿಯಲ್ಲಿ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ಹಿಂದೂ ಸಮ್ಮೇಳನ ಕಾರ್ಯಕ್ರಮವನ್ನು ಮುರುಡೇಶ್ವರದ ವನವಾಸಿ ಕಲ್ಯಾಣ ಆಶ್ರಮದ ರಾಜ್ಯ ಶಿಕ್ಷಣ ಪ್ರಮುಖ ಶ್ರೀರಾಮಚಂದ್ರ ಉದ್ಘಾಟಿಸಿದರು. ಶ್ರೀ ಸಿದ್ದೇಶ್ವರ ಶಿವಾಚಾರ್ಯರು, ಶ್ರೀ ಮರುಳಾರಾಧ್ಯ ಶಿವಾಚಾರ್ಯರು, ಶ್ರೀ ದತ್ತಾತ್ರೇಯ ವಾಸುದೇವ ಸ್ವಾಮೀಜಿ, ಜಿಲ್ಲಾ ಸಂಚಾಲಕ ವಸಂತ ಪೂಜಾರ, ಅಧ್ಯಕ್ಷ ಡಿ.ಜಿ.ಲಕ್ಕನಗೌಡ ಇತರರಿದ್ದರು.
ಅಳವಂಡಿ: ಹಿಂದೂ ಸಮಾವೇಶ ದೇಶವನ್ನು ಒಗ್ಗೂಡಿಸುತ್ತದೆ. ದೇಶಪ್ರೇಮ ಬೆಳೆಸುತ್ತದೆ ಎಂದು ಮುರುಡೇಶ್ವರದ ವನವಾಸಿ ಕಲ್ಯಾಣ ಆಶ್ರಮದ ರಾಜ್ಯ ಶಿಕ್ಷಣ ಪ್ರಮುಖ ಶ್ರೀರಾಮಚಂದ್ರ ಹೇಳಿದರು.
ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ಹಿಂದೂ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಿಂದೂತ್ವ ಎಂದರೆ ರಾಷ್ಟ್ರಭಕ್ತಿ, ಆರೆಸ್ಸೆಸ್ ಕೂಡುವ ಲೆಕ್ಕ ಹೇಳಿಕೊಡುತ್ತದೆ ಹೊರತು ಕಳೆಯುವ ಲೆಕ್ಕ ಹೇಳುವುದಿಲ್ಲ. ಹಿಂದೂಗಳು ಒಂದಾದರೆ ಬಲಶಾಲಿ ರಾಷ್ಟ್ರವಾಗಲಿದೆ. ಹಿಂದೂಗಳು ಜಾತಿ, ಭಾಷೆ ಮೀರಿ ಹಿಂದೂತ್ವ ಬೆಳೆಸಬೇಕು.
ರಾಮ ಮಂದಿರ ನಿರ್ಮಾಣ, ಆರ್ಟಿಕಲ್ 370 ತೆರವು ಹಿಂದೂ ಶಕ್ತಿ ಜಾಗೃತವಾಗಿದೆ ಎನ್ನುವುದಕ್ಕೆ ಉದಾಹರಣೆ. ಹಿಂದೂತ್ವ ಜತೆ ಧರ್ಮ ಮತ್ತು ರಾಷ್ಟ್ರೀಯತೆ ಇರುತ್ತದೆ. ಹಿಂದೂ ಸಮಾವೇಶಗಳು ಜಗತ್ತಿಗೆ ದೊಡ್ಡ ಸಂದೇಶ ನೀಡುತ್ತವೆ. ಆದ್ದರಿಂದ ಎಲ್ಲರೂ ಒಗ್ಗಟ್ಟು ಪ್ರದರ್ಶಿಬೇಕಿದೆ ಎಂದರು.
ಕಂಪ್ಲಿಯ ರಾಮಾಂಜನೇಯ ಪೀಠಾಧಿಪತಿ ಶ್ರೀ ದತ್ತಾತ್ರೇಯ ವಾಸುದೇವ ಸ್ವಾಮೀಜಿ ಮಾತನಾಡಿ, ದೇವಾಲಯಕ್ಕೆ ತೆರಳಿ ಗುರುವಿನ ಪಾದ ಸೇವೆ ಮಾಡಿದರೆ ದೈವಿಕ ಶಕ್ತಿ ಮೂಡುತ್ತದೆ. ಮನಸ್ಸಿನಲ್ಲಿ ಅಹಂಕಾರ ನಾಶವಾಗುತ್ತದೆ. ಹಿಂದೂ ಧರ್ಮದ ಸನಾತನ ಅಲೆ ನಕ್ಷತ್ರದಂತೆ ಮಿನುಗಬೇಕು ಎಂದು ತಿಳಿಸಿದರು. ಜಿಲ್ಲಾ ಸಂಚಾಲಕ ವಸಂತ ಪೂಜಾರ ಮಾತನಾಡಿ, ಇದು ದೇಶಪ್ರೇಮ ಬೆಳೆಸುವ ಕಾರ್ಯಕ್ರಮ. 800 ವರ್ಷಗಳ ಕಾಲ ಮೊಘಲರು, ಬ್ರಿಟಿಷರು ದೇಶದಲ್ಲಿ ಆಳ್ವಿಕೆ ನಡೆಸಿದ್ದರೂ ಹಿಂದೂತ್ವ ಅಳಿಸಲು ಆಗಿಲ್ಲ ಎಂದರು.
ಮೈನಹಳ್ಳಿ ಬಿಕನಳ್ಳಿಯ ಶ್ರೀ ಸಿದ್ದೇಶ್ವರ ಶಿವಾಚಾರ್ಯರು, ಸಮ್ಮೇಳನದ ಅಧ್ಯಕ್ಷ ಡಿ.ಜಿ.ಲಕ್ಕನಗೌಡ, ಉಪಾಧ್ಯಕ್ಷ ಸಿದ್ದಣ್ಣ ಕೋರಿ ಶೆಟ್ಟರ, ಜನಪ್ರತಿನಿಧಿಗಳು ಗ್ರಾಮಸ್ಥರು ಇದ್ದರು.