ಮರ್ಯಾದೆಗೇಡು ಹತ್ಯೆ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಎಸ್‌ಎಫ್‌ಐ ಪದಾಧಿಕಾರಿಗಳು ಕಾರಟಗಿಯಲ್ಲಿ ಉಪತಹಸಿಲ್ದಾರ್ ಜಗದೀಶ ಮೂಲಕ ರಾಜ್ಯ ಸರ್ಕಾರಕ್ಕೆ ಶುಕ್ರವಾರ ಮನವಿ ಸಲ್ಲಿಸಿದರು. ಪ್ರಮುಖರಾದ ಯು.ನಾಗರಾಜ, ದರ್ಶನ್ ಹೊಸಕೇರಾ ಇದ್ದರು.
ಕಾರಟಗಿ: ಹುಬ್ಬಳ್ಳಿಯ ಇನಾಂ ವೀರಾಪುರದಲ್ಲಿ ನಡೆದ ಮರ್ಯಾದೆಗೇಡು ಹತ್ಯೆ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಎಸ್‌ಎಫ್‌ಐ ಪದಾಧಿಕಾರಿಗಳು ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಶುಕ್ರವಾರ ಮನವಿ ಸಲ್ಲಿಸಿದರು.
ಸಂಘಟನೆಯ ತಾಲೂಕಾಧ್ಯಕ್ಷ ಯು.ನಾಗರಾಜ್ ಮಾತನಾಡಿ, ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪೂರದಲ್ಲಿ ದಲಿತ ಸಮುದಾಯದ ಯುವಕ ವಿವೇಕಾನಂದ ದೊಡ್ಡಮನಿಯನ್ನು ಮದುವೆಯಾಗಿದ್ದಕ್ಕೆ ಏಳು ತಿಂಗಳು ಗರ್ಭಿಣಿ ಮಾನ್ಯಾ ಪಾಟೀಲ ಮೇಲೆ ಸ್ವತಃ ತಂದೆ ಹಾಗೂ ಕುಟುಂಬಸ್ಥರು ನಡೆಸಿದ್ದ ಮರ್ಯಾದೆಗೇಡು ಹತ್ಯೆಯು ನಾಗರಿಕ ಸಮಾಜಕ್ಕೆ ತೀವ್ರ ಆಘಾತವನ್ನುಂಟು ಮಾಡಿದೆ. ಶಿಕ್ಷಣ ಪಡೆಯುತ್ತ ಉತ್ತಮ ಭವಿಷ್ಯದ ಕನಸು ಕಟ್ಟಿಕೊಂಡಿದ್ದ ಇವರ ಜೀವನವೂ ದುರಂತಮಯವಾಗಿದೆ.
ಎಂಟು ಶತಮಾನಗಳ ಹಿಂದೆಯೇ ಬಸವಣ್ಣನವರು ಅಂತರ್ಜಾತಿ ವಿವಾಹ ಮಾಡಿ ಜಾತಿಯತೆ ಹೋಗಲಾಡಿಸಲು ಅಡಿಪಾಯ ಹಾಕಿದ್ದರು. ಸಮಾಜದಲ್ಲಿ ಇಂದಿಗೂ ಮೇಲ್ಜಾತಿಯವರ ಅಟ್ಟಹಾಸ, ಜಾತಿ ತಾರತಮ್ಯ, ಕಾತಿ ದ್ವೇಷ, ಅಸ್ಪಶ್ಯತೆ, ದಲಿತರನ್ನು ಒಪ್ಪಿಕೊಳ್ಳಲಾಗದಂತ ಮನಸ್ಥಿತಿ ಆಳವಾಗಿದೆ ಎಂಬುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಗರ್ಭಿಣಿಯಾಗಿದ್ದ ತನ್ನ ಮಗಳನ್ನೇ ಅಮಾನುಷವಾಗಿ ತಂದೆಯೇ ಕೊಲ್ಲುವ ಜಾತಿ ಪ್ರತಿಷ್ಠೆಯೂ ಘನ ಘೋರವಾಗಿದೆ. ಹೀಗಾಗಿ ಮಾರ್ಯದೆಗೇಡು ಹತ್ಯೆ ನಡೆಸುವ ಎಲ್ಲರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು.
ಮಾನ್ಯಾಳ ಪತಿ ವಿವೇಕಾನಂದ ದೊಡ್ಡಮನಿ ಹಾಗೂ ಅವರ ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸಬೇಕು. ಸರ್ಕಾರ ಅಂತರ್ಜಾತಿ ವಿವಾಹವಾಗುವ ಎಲ್ಲ ಯುವಕ ಯುವತಿಯರಿಗೆ ಸೂಕ್ತ ಕಾನೂನು ರಕ್ಷಣೆ ನೀಡಿ ಸಾಮಾಜಿಕವಾಗಿ, ಆರ್ಥಿಕವಾಗಿ ಬಲ ತುಂಬಲು ಪ್ರೋತ್ಸಾಹ ಧನ ಹೆಚ್ಚಿಸಬೇಕು. ಮೀಸಲಾತಿ ಸೌಲಭ್ಯ ಒದಗಿಸುವುದು ಸೇರಿದಂತೆ ವಿಶೇಷ ಸೌಲಭ್ಯಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.