ಡಾಂಬರ್ ಕಾಣದ ಹೊನಗಡ್ಡಿ ರಸ್ತೆ

ಕುಷ್ಟಗಿ ತಾಲೂಕು ಹೊನಗಡ್ಡಿಯಿಂದ ಲಾಯದುಣಿಸಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಲ್ಲು ಮಣ್ಣಿನಿಂದ ಕೂಡಿರುವುದು.
ಕುಷ್ಟಗಿ ತಾಲೂಕು ಹೊನಗಡ್ಡಿಯಿಂದ ಲಾಯದುಣಿಸಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಲ್ಲು ಮಣ್ಣಿನಿಂದ ಕೂಡಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಕಲ್ಲು-ಮಣ್ಣಿನ ಮಾರ್ಗದಲ್ಲಿ ಸಂಚಾರ ಅನಿವಾರ್ಯ
  • ಸಮಸ್ಯೆಯತ್ತ ಚಿತ್ತ ಹರಿಸದ ಅಧಿಕಾರಿ ವರ್ಗ
ಕುಷ್ಟಗಿ: ದೇಶಕ್ಕೆ ಸ್ವಾತಂತ್ರೃ ದೊರೆತು ಏಳು ದಶಕ ಕಳೆದರೂ ತಾಲೂಕಿನ ಗಡಿ ಭಾಗದ ಹೊನಗಡ್ಡಿ-ಲಾಯದುಣಿಸಿ ಸಂಪರ್ಕ ರಸ್ತೆ ಡಾಂಬರ್ ಕಂಡಿಲ್ಲ.
ಡಾಂಬರ್ ಕಾಣದ ತಾಲೂಕಿನ ಕಟ್ಟೆ ಕಡೆಯ ರಸ್ತೆ ಇದಾಗಿದ್ದು, ಎರಡೂ ಊರಿನ ಜನರ ಸಂಪರ್ಕಕ್ಕೆ ಸಮಸ್ಯೆಯಾಗಿದೆ. ತಾಲೂಕು ಕೇಂದ್ರದಿಂದ 35 ಕಿ.ಮೀ.ದೂರದಲ್ಲಿರುವ ಹೊನಗಡ್ಡಿಯಿಂದ ಲಾಯದುಣಿಸಿ ಮಾರ್ಗವಾಗಿ ಹುಲಿಹೈದರ, ತಾವರಗೇರಾ, ಕುಷ್ಟಗಿ, ಇಳಕಲ್, ಗಂಗಾವತಿಗೆ ತೆರಳಲು ಈ ಭಾಗದ ಜನರು ಹರಸಾಹಸ ಪಡುವಂತಾಗಿದೆ. ಮಳೆಗಾಲ ಶುರುವಾದ್ರೆ ರಸ್ತೆ ಮೇಲೆ ನೀರು ಸಂಗ್ರಹಿಸಿ ವಾಹನಗಳ ಓಡಾಟ ತ್ರಾಸಾದಾಯಕವಾಗುತ್ತಿದೆ. ಆಳುದ್ದದ ರಸ್ತೆ ಗುಂಡಿಯಲ್ಲಿ ನೀರು ತುಂಬಿಕೊಳ್ಳುವ ಕಾರಣ ಅನೇಕ ಬೈಕ್ ಸವಾರರು ಆಯತಪ್ಪಿ ಬಿದ್ದು ಗಾಯ ಮಾಡಿಕೊಂಡ ಉದಾಹರಣೆಗಳಿವೆ. ರಸ್ತೆ ಹದಗೆಟ್ಟ ಕಾರಣಕ್ಕೆ ಈ ಮಾರ್ಗಕ್ಕೆ ಎರಡ್ಮೂರು ದಶಕಗಳಿಂದ ಸಾರಿಗೆ ವ್ಯವಸ್ಥೆ ಕಲ್ಪಿಸಿಲ್ಲ. ಹೊನಗಡ್ಡಿಯಿಂದ ಕೇವಲ 1 ಕಿ.ಮೀ. ಡಾಂಬರ್ ಹಾಕಿ ಕೈತೊಳೆದುಕೊಂಡಿರುವ ಜನಪ್ರತಿನಿಧಿಗಳಿಗೆ ಸಮಸ್ಯೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.
ತಾವರಗೇರಾ ಹೋಬಳಿ ಕೇಂದ್ರಕ್ಕೆ ತೆರಳಲು ಈ ಮಾರ್ಗ ಸಮೀಪ ಹಾಗೂ ಅನುಕೂಲಕರವಾಗಿದೆ. ಮುಖ್ಯವಾಗಿ ಜಿಲ್ಲಾ ಉಸ್ತುವಾರಿ ಸಚಿವರ ಕನಕಗಿರಿ ವಿಧಾನಸಭಾ ಕ್ಷೇತ್ರಕ್ಕೆ ಈ ಮಾರ್ಗದ ಹಲವು ಹಳ್ಳಿಗಳು ಒಳಪಟ್ಟಿದ್ದರೂ ದುರಸ್ತಿ ಕಾಣದಿರುವುದು ದುರಂತವೇ ಸರಿ. ರಸ್ತೆ ಇಕ್ಕೆಲಗಳಲ್ಲಿ ಜಾಲಿ ಬೆಳೆದಿದ್ದು ಸಂಚಾರಕ್ಕೆ ಸಂಚಕಾರ ತರುತ್ತಿವೆ. ಸಾರ್ವಜನಿಕರು ಹೋಬಳಿ, ತಾಲೂಕು ಕೇಂದ್ರ ತಲುಪಲು ಹಾಗೂ ರೈತರು ಜಮೀನುಗಳಿಗೆ ತೆರಳಲು ಈ ರಸ್ತೆಯೇ ಆಸರೆಯಾಗಿದ್ದು ಸಂಚಾರಕ್ಕೆ ಹರಸಾಹಸ ಪಡುವಂತಾಗಿದೆ. ಕೂಡಲೇ ಪಿಬ್ಲುೃಡಿ ಇಲಾಖೆ ಅಥಾವಾ ಕ್ಷೇತ್ರದ ಚುನಾಯಿತ ಪ್ರತಿನಿಧಿಗಳು ಇತ್ತ ಗಮನಹರಿಸಿ ತ್ವರಿತವಾಗಿ ರಸ್ತೆ ಡಾಂಬರೀಕರಣಗೊಳಿಸಬೇಕು ಎಂಬುದು ನಾಗರಿಕರ ಒತ್ತಾಸೆಯಾಗಿದೆ.
"

ಕುಷ್ಟಗಿ ತಾಲೂಕಿನ ಕಟ್ಟೆ ಕಡೆಯ ಗ್ರಾಮ ಹೊನಗಡ್ಡಿಯಿಂದ ಲಾಯದುಣಿಸಿಗೆ ಸಂಪರ್ಕ ಕಲ್ಲಿಸುವ ರಸ್ತೆ 1 ಕಿ.ಮೀ. ಮಾತ್ರ ಡಾಂಬರ್ ಕಂಡಿದ್ದು ಮಿಕ್ಕಿದೆಲ್ಲ ಕಲ್ಲು-ಮಣ್ಣಿನಿಂದ ಕೂಡಿದೆ. ಪಿಡಬ್ಲುೃಡಿ, ಜಿಲ್ಲಾ ಪಂಚಾಯಿತಿ ಅಥವಾ ಕ್ಷೇತ್ರದ ಚುನಾಯಿತ ಪ್ರತಿನಿಧಿಗಳು ಕ್ರಮಕ್ಕೆ ಮುಂದಾಗಬೇಕಿದೆ.

— ಅಮರೇಶ ಮರಕಟ್, ನೆರಸಪ್ಪ ಮ್ಯಾದ್ನೇರಿ ಹೊನಗಡ್ಡಿ ಗ್ರಾಮಸ್ಥರು
"

ಕುಷ್ಟಗಿ ತಾಲೂಕಿನ ನಾನಾ ಗ್ರಾಮಗಳ ರಸ್ತೆಗಳು ದುರಸ್ತಿಗೆ ಕಾದಿವೆ. ಹೊನಗಡ್ಡಿ-ಲಾಯದುಣಿಸಿ ರಸ್ತೆ ದುರಸ್ತಿಗೆ ಮುಂದಿನ ದಿನಗಳಲ್ಲಿ ಅನುದಾನ ತಂದು ಡಾಂಬರೀಕರಣ ಕೈಗೊಳ್ಳಲಾಗುವುದು.

— ದೊಡ್ಡನಗೌಡ ಪಾಟೀಲ್ ವಿಪ ಮುಖ್ಯ ಸಚೇತಕ ಹಾಗೂ ಶಾಸಕ, ಕುಷ್ಟಗಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net