ಗಂಗಾವತಿಯ ಹಿರೇಜಂತಕಲ್ ಶ್ರೀ ಪ್ರಸನ್ನ ಪಂಪಾವಿರೂಪಾಕ್ಷೇಶ್ವರ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮವನ್ನು ಭಾರತ ಮಾತೆಗೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಲಾಯಿತು. ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು, ಅರೆಸ್ಸೆಸ್ ಬಳ್ಳಾರಿ ವಿಭಾಗದ ವ್ಯವಸ್ಥ ಪ್ರಮುಖ ಎ.ನಾಗರಾಜ್, ನಗರ ಸಂಯೋಜಕ ಡಾ.ಕೆ.ಅಮರೇಶ ಪಾಟೀಲ್ ಇತರರಿದ್ದರು.
ಅರೆಸ್ಸೆಸ್ ಬಳ್ಳಾರಿ ವಿಭಾಗದ ವ್ಯವಸ್ಥ ಪ್ರಮುಖ ಎ.ನಾಗರಾಜ್ ಹೇಳಿಕೆ
ಗಂಗಾವತಿ: ಸ್ವಾಭಿಮಾನದ ಕೊರತೆಯಿಂದ ಹಿಂದುತ್ವದಲ್ಲಿ ಸಂಘಟನೆ ಸಮಸ್ಯೆಯಾಗುತ್ತಿದ್ದು, ಸಮ್ಮೇಳನ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅರೆಸ್ಸೆಸ್ ಬಳ್ಳಾರಿ ವಿಭಾಗದ ವ್ಯವಸ್ಥ ಪ್ರಮುಖ ಎ.ನಾಗರಾಜ್ ಹೇಳಿದರು.
ನಗರದ ಹಿರೇಜಂತಕಲ್ ಶ್ರೀ ಪ್ರಸನ್ನ ಪಂಪಾವಿರೂಪಾಕ್ಷೇಶ್ವರ ದೇವಾಲಯದ ಆವರಣದಲ್ಲಿ ಹಿಂದೂ ಸಮ್ಮೇಳನ ಸಮಿತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಹಿಂದೂ ಸಮಾಜೋತ್ಸವದಲ್ಲಿ ಮಾತನಾಡಿದರು. ದೇಶದಲ್ಲಿ ಮೇಲೆ ಎಷ್ಟೇ ಅತಿಕ್ರಮಣವಾದರೂ ಇಲ್ಲಿನ ಸಂಪತ್ತು ಕಡಿಮೆಯಾಗಿಲ್ಲ. ಸೋಲಿಗೆ ನಮ್ಮವರ ಸ್ವಾಭಿಮಾನವೇ ಕಾರಣ. ಅತಿಕ್ರಮಣಕಾರರ ಶಕ್ತಿಯಿಂದಲ್ಲ. ಹಿಂದೂಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ದೇಶಾದ್ಯಂತ ಸಮಾಜೋತ್ಸವ ನಡೆಯುತ್ತಿದ್ದು, ಸಂಸ್ಕೃತಿ ಮತ್ತು ಸಂಸ್ಕಾರ ತಿಳಿಸುವ ಭಾಗವಾಗಿದೆ. ಪರಂಪರೆ ಮತ್ತು ಇತಿಹಾಸವನ್ನು ಪರಿಚಯಿಸಲು ಸಮ್ಮೇಳನ ಆಯೋಜಿಸಲಾಗುತ್ತಿದೆ ಎಂದರು.
ಸಮ್ಮೇಳನ ಸಮಿತಿ ನಗರ ಸಂಚಾಲಕ ಡಾ.ಕೆ.ಅಮರೇಶ ಪಾಟೀಲ್ ಮಾತನಾಡಿ, ಹಿಂದೂಗಳಲ್ಲಿ ಸಾಮರಸ್ಯ ಹೆಚ್ಚಿಸುವ ನಿಟ್ಟಿನಲ್ಲಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಸಮಾಜೋತ್ಸವ ಆಯೋಜಿಸಿದ್ದು, ಸಂಸ್ಕೃತಿ ಮತ್ತು ಸಂಸ್ಕಾರ ಹೆಚ್ಚಿಸುವ ಉದ್ದೇಶ ಹೋಂದಲಾಗಿದೆ ಎಂದು ತಿಳಿಸಿದರು. ಇದಕ್ಕೂ ಮುನ್ನ ಕಲಾವಿದೆ ರಾಧಿಕಾ ಮತ್ತು ಗಾಯಕ ವಿನೋದ ತಂಡದಿಂದ ಕವಿ, ಕಾವ್ಯ ಕುಂಚ ಪ್ರದರ್ಶನ ನಡೆಯಿತು. ಮಕ್ಕಳಿಂದ ಪಾಲಕರಿಗೆ ಪಾದಪೂಜೆ ಮತ್ತು ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಸ್ಫೂರ್ತಿ ಪಬ್ಲಿಕ್ ಸ್ಕೂಲ್ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು, ಸಮ್ಮೇಳನ ಸಮಿತಿ ಅಧ್ಯಕ್ಷ ಜೆ.ನಾಗರಾಜ್, ಶಾಸಕ ಗಾಲಿ ಜನಾರ್ದನರೆಡ್ಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಸಂಸದ ಎಸ್.ಶಿವರಾಮನಗೌಡ, ಕಾಡಾ ಮಾಜಿ ಅಧ್ಯಕ್ಷ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ, ಜಿಪಂ ಮಾಜಿ ಸದಸ್ಯ ಎಚ್.ಎಂ.ಸಿದ್ರಾಮಯ್ಯಸ್ವಾಮಿ ಇತರರಿದ್ದರು.