ಕಾರ್ಖಾನೆ ಬಾಧಿತ ಗ್ರಾಮಗಳಲ್ಲಿ ಆರೋಗ್ಯ ಪರೀಕ್ಷೆ

ಕೊಪ್ಪಳದಲ್ಲಿ ಕಾರ್ಖಾನೆಗಳ ವಿಸ್ತರಣೆ ವಿರೋಧಿ ಧರಣಿಯಲ್ಲಿ ಗುರುವಾರ ಡಿಸಿ ಡಾ.ಸುರೇಶ ಬಿ.ಇಟ್ನಾಳ ಮಾತನಾಡಿದರು. ಜಿಪಂ ಸಿಇಒ ವರ್ಣಿತ್​ ನೇಗಿ, ಎಸ್ಪಿ ಡಾ.ರಾಮ್​ ಎಲ್​.ಅರಸಿದ್ದಿ, ಹೋರಾಟಗಾರರಾದ ಅಲ್ಲಮಪ್ರಭು ಬೆಟ್ಟದೂರು, ಕೆ.ಬಿ.ಗೋನಾಳ, ಮಂಜುನಾಥ ಗೊಂಡಬಾಳ ಇದ್ದರು.
ಕೊಪ್ಪಳದಲ್ಲಿ ಕಾರ್ಖಾನೆಗಳ ವಿಸ್ತರಣೆ ವಿರೋಧಿ ಧರಣಿಯಲ್ಲಿ ಗುರುವಾರ ಡಿಸಿ ಡಾ.ಸುರೇಶ ಬಿ.ಇಟ್ನಾಳ ಮಾತನಾಡಿದರು. ಜಿಪಂ ಸಿಇಒ ವರ್ಣಿತ್​ ನೇಗಿ, ಎಸ್ಪಿ ಡಾ.ರಾಮ್​ ಎಲ್​.ಅರಸಿದ್ದಿ, ಹೋರಾಟಗಾರರಾದ ಅಲ್ಲಮಪ್ರಭು ಬೆಟ್ಟದೂರು, ಕೆ.ಬಿ.ಗೋನಾಳ, ಮಂಜುನಾಥ ಗೊಂಡಬಾಳ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಕ್ಕೆ ಕೆರೆ ಬಗ್ಗೆ ಸ್ಪಷ್ಟೀಕರಣ ಕೋರಿಕೆ
  • ಡಿಸಿ ಡಾ.ಸುರೇಶ ಬಿ.ಇಟ್ನಾಳ ಭರವಸೆ
ಕೊಪ್ಪಳ: ಬಿಎಸ್​ಪಿಎಲ್​ ಕಂಪನಿಗೆ ಬಸಾಪುರ ಕೆರೆಯನ್ನು 2007ರಲ್ಲಿ ಸಚಿವ ಸಂಪುಟ ಅನುಮೋದನೆ ಅನುಸಾರ ಲೀಸ್​ ಕಂ ಸೇಲ್​ ಮಾಡಲಾಗಿದೆ. ಈ ಬಗ್ಗೆ ಸ್ಪಷ್ಟೀಕರಣ ಕೋರಿ ಸರ್ಕಾರಕ್ಕೆ ಪತ್ರ ಬರೆದಿರುವೆ. ಕಾರ್ಖಾನೆ ಬಾಧಿತ ಗ್ರಾಮಗಳಲ್ಲಿ ಆಯ್ದ ಗ್ರಾಮದಲ್ಲಿ ಆರೋಗ್ಯ ಪರೀಕ್ಷೆ ನಡೆಸಲಾಗುವುದೆಂದು ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಭರವಸೆ ನೀಡಿದರು.
ಬಿಎಸ್​ಪಿಎಲ್​ ಸೇರಿ ಇತರ ಕಾರ್ಖಾನೆ ವಿಸ್ತರಣೆ ವಿರೋಧಿಸಿ ಜಂಟಿ ಕ್ರಿಯಾ ಸಮಿತಿ ಹಮ್ಮಿಕೊಂಡಿರುವ ಧರಣಿ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಮಾತನಾಡಿದರು.
ಕಾರ್ಖಾನೆಗಳಿಂದ ಪರಿಸರ ಹಾನಿ ಆಗುತ್ತಿದೆ. ಹೊಸ ಕಾರ್ಖಾನೆಗಳಿಗೆ ಅನುಮತಿ ನೀಡದಂತೆ ಪ್ರತಿಭಟನೆ ನಡೆಸುತ್ತಿದ್ದೀರಿ. ಬಸಾಪುರ ಕೆರೆ ಜನ&ಜಾನುವಾರು ಬಳಕೆಗೆ ಮುಕ್ತಗೊಳಿಸಬೇಕೆಂಬ ಬೇಡಿಕೆಯೂ ಇದೆ. ದಾಖಲಾತಿ ಪರಿಶೀಲಿಸಲಾಗಿ ಆಗ ಸಚಿವ ಸಂಪುಟದ ಅನುಮೋದನೆ ಅನುಸಾರ ಕೆರೆಯನ್ನು ಎಂಎಸ್​ಪಿಲ್​ ಕಂಪನಿಗೆ ಪರಭಾರೆ ಮಾಡಲಾಗಿದೆ. ಕಾನೂನು ಸಲಹೆ ಪಡೆದಿದ್ದು, ನಿಯಮಾನುಸಾರ ಕಂಪನಿ ಬಳಕೆಗೆ ಕೆರೆ ನೀಡಲಾಗಿದೆ.
ಹೈಕೋರ್ಟ್​ ಹಿಂದೊಮ್ಮೆ ಆದೇಶ ನೀಡಿದ್ದರೂ ಸುಪ್ರೀಂ ಕೋರ್ಟ್​ನಲ್ಲಿ ಭೂಸ್ವಾಧಿನ ಪ್ರಕ್ರಿಯೆ ಕಂಪನಿ ಪರವಾಗಿ ಆಗಿದೆ. ಮತ್ತೊಮ್ಮೆ ಅರ್ಜಿ ಸಲ್ಲಿಸಲು ಹೈ ಕೋರ್ಟ್​ ಸೂಚಿಸಿದೆ. ಹಲವು ಗೊಂದಲಗಳಿದ್ದು ಸೂಕ್ತ ಮಾರ್ಗದರ್ಶನ ಕೋರಿ ಸರ್ಕಾರಕ್ಕೆ ವರದಿ ಸಲ್ಲಿಸಿರುವೆ. ಕಾನೂನು ವಿಭಾಗ ಪರಿಶೀಲನೆ ನಡೆಸುತ್ತಿದ್ದು ನಿರ್ದೇಶನ ಬಂದ ನಂತರ ಸೂಕ್ತ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.
ಹೋರಾಟಗಾರರಾದ ಅಲ್ಲಮಪ್ರಭು ಬೆಟ್ಟದೂರು, ಕೆ.ಬಿ.ಗೋನಾಳ, ಮಂಜುನಾಥ ಗೊಂಡಬಾಳ ಮಾತನಾಡಿ, ಕೆರೆ ಕಂಪನಿಗೆ ನೀಡಲು ಬರುವುದಿಲ್ಲ. ಜನ-ಜಾನುವಾರು ಬಳಕೆಗೆ ಮುಕ್ತವಾಗಿರಬೇಕು. ಸರ್ಕಾರ ಪರಭಾರೆ ಮಾಡಿರುವುದು ನಿಯಮಾನುಸಾರ ಇಲ್ಲ. ಈಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಿ. ಕಂಪನಿ ಅಧಿಕಾರಿಗಳು ಬೋರ್​ವೆಲ್​ ಕೊರೆದು ಅದರಲ್ಲಿ ತ್ಯಾಜ್ಯ ಹೂಳುತ್ತಿದ್ದು ಕ್ರಮವಾಗಬೇಕು ಎಂದು ಒತ್ತಾಯಿಸಿದರು.
ಜಿಪಂ ಸಿಇಒ ವರ್ಣಿತ್​ ನೇಗಿ, ಎಸ್ಪಿ ಡಾ.ರಾಮ್​ ಎಲ್​.ಅರಸಿದ್ದಿ ಹಾಗೂ ವಿವಿಧ ಹೋರಾಟಗಾರರಿದ್ದರು.

ಹೆಲ್ತ್​ ಚೆಕಪ್​

ಕಾರ್ಖಾನೆಗಳಿಂದ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪರಿಸರ ಹಾನಿಯಾಗುತ್ತಿದೆ. ಈ ಬಗ್ಗೆ ಕೇಂದ್ರ ಪರಿಸರ ಇಲಾಖೆ ಸಮಿತಿ ವರದಿ ನೀಡಿದೆ. ಅದರ ಅನುಸಾರ ಹಲವು ಶಿಾರಸ್ಸು ಮಾಡಿದೆ. ಅವುಗಳ ಅನುಷ್ಠಾನಕ್ಕೆ ಸೂಚಿಸಿದ್ದು ಕೆಲವು ಅನುಷ್ಠಾನವಾಗಿದ್ದು, ಇನ್ನು ಕೆಲವನ್ನು ಪರಿಶೀಲಿಸಲಾಗುವುದು. ಜತೆಗೆ ಕಾರ್ಖಾನೆ ಬಾಧಿತ ಬಗನಾಳ, ಕಾಸನಕಂಡಿ, ಹಾಲವರ್ತಿ, ಗಿಣಿಗೇರಾಗಳಲ್ಲಿ ಒಂದು ಗ್ರಾಮ ಹಾಗೂ ಕುಷ್ಟಗಿ, ಯಲಬುರ್ಗಾ ತಾಲೂಕಿನ ಒಂದೊಂದು ಗ್ರಾಮ ಆಯ್ಕೆ ಮಾಡಿಕೊಂಡು ಜನರ ಆರೋಗ್ಯ ಪರೀಕ್ಷೆ ಮಾಡಲಾಗುವುದು. ಅದನ್ನು ತುಲನಾತ್ಮಕ ಅಧ್ಯಯನಕ್ಕೆ ಒಳಪಡಿಸಿದಲ್ಲಿ ಕೆಲ ಮಾಹಿತಿ ಸಿಗಲಿದೆ ಎಂದು ಡಿಸಿ ತಿಳಿಸಿದರು. ಇದಕ್ಕೆ ಎಲ್ಲರೂ ಒಪ್ಪಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net