ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮವನ್ನು ಉಪತಹಶೀಲ್ದಾರ ಗವಿಸಿದ್ದಪ್ಪ ಮಣ್ಣೂರ ಉದ್ಘಾಟಿಸಿದರು. ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ, ಸಹಾಯಕ ಪ್ರಾಧ್ಯಾಪಕ ಶರಣಬಸಪ್ಪ ಬಿಳಿಎಲಿ, ಶಿಕ್ಷಕರ ಮಹಮ್ಮದ್ ಅಬ್ದುಲ್ ರಹೀಮ್ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶರಣಬಸಪ್ಪ ಬಿಳಿಎಲಿ ಹೇಳಿಕೆ
ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ
ಕೊಪ್ಪಳ : ವಚನ ಪಿತಾಮಹ ಎಂದೇ ಖ್ಯಾತರಾದ ಫ.ಗು.ಹಳಕಟ್ಟಿ 12ನೇ ಶತಮಾನದ ಬಸವಾದಿ ಶರಣರ ವಚನಗಳನ್ನು ಸಂರಕ್ಷಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟು, ವಚನಗಳಿಗೆ ಶಾಶ್ವತ ಅಸ್ತಿತ್ವ ಕೊಟ್ಟವರು ಎಂದು ಶ್ರೀ ಗವಿಸಿದ್ದೇಶ್ವರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಶರಣಬಸಪ್ಪ ಬಿಳಿಎಲಿ ಹೇಳಿದರು.
ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿ(ಪ್ರೌಢಶಾಲಾ ವಿಭಾಗ)ನಲ್ಲಿ ಗುರುವಾರ ಫ.ಗು.ಹಳಕಟ್ಟಿ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
12ನೇ ಶತಮಾನದಲ್ಲಿ ಬಸವಾದಿ ಶರಣರು ತಾಳೆಗರಿಯ ಮೇಲೆ ರಚಿಸಿದ ವಚನಗಳನ್ನು ಸಂರಕ್ಷಿಸುವ ಮಹತ್ತರ ಕಾರ್ಯವನ್ನು ಮೂಲತ: ಧಾರವಾಡ ಜಿಲ್ಲೆಯ ಫಕೀರಪ್ಪ ಗುರುಬಸಪ್ಪ ಹಳಕಟ್ಟಿಯವರು ಕೈಗೊಂಡರು. ಅವರು 18 ವರ್ಷಗಳ ಕಾಲ ರಾಜ್ಯಾದ್ಯಂತ ಸಂಚರಿಸಿ 2,209 ತಾಳೆಗರಿ ವಚನಗಳನ್ನು ಸಂಗ್ರಹಿಸಿ. ಅವುಗಳನ್ನು 250 ವಿಭಾಗಗಳಾಗಿ ವರ್ಗೀಕರಿಸಿ, 219 ಹೊಸ ವಚನಕಾರರನ್ನು ಗುರುತಿಸಿದರು. ಈ ಸಾಧನೆಗಾಗಿ ಕನ್ನಡದ ಕಣ್ವ ಬಿ.ಎಂ. ಶ್ರೀ ಅವರು ಹಳಕಟ್ಟಿಯವರಿಗೆ ವಚನ ಗುಮ್ಮಟ ಎಂಬ ಬಿರುದು ನೀಡಿದ್ದು, ಹಳಕಟ್ಟಿಯವರು ವಚನ ಪಿತಾಮಹ ಎಂದೇ ಖ್ಯಾತರಾದರು ಎಂದರು.
ಹಳಕಟ್ಟಿಯವರು 160ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ, ಸುಮಾರು 25 ಸಾವಿರ ಪುಟಗಳ ಸಾಹಿತ್ಯವನ್ನು ನೀಡಿದ್ದಾರೆ. ಶಿವಾನುಭವ ಮಾಸಪತ್ರಿಕೆಯನ್ನು 36 ವರ್ಷಗಳ ಕಾಲ ನಿರಂತರವಾಗಿ ಪ್ರಕಟಿಸಿ, ಕರ್ನಾಟಕ ಏಕೀಕರಣ ಚಳವಳಿಗೆ ಬೆಂಬಲವಾಗಿ ನವಕರ್ನಾಟಕ ವಾರಪತ್ರಿಕೆಯನ್ನೂ ಆರಂಭಿಸಿದರು. ಶಿಕ್ಷಣ ಕ್ಷೇತ್ರದಲ್ಲಿಯೂ ಅವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು. ಉಪಪ್ರಾಚಾರ್ಯ ಶರಣಬಸವಗೌಡ ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ವ್ಯಸನದಿಂದ ದೂರವಿದ್ದು ಓದುವ ಹವ್ಯಾಸ ಬೆಳೆಸಿ, ಹಳಕಟ್ಟಿಯವರ ಆದರ್ಶಗಳನ್ನು ಅನುಸರಿಸಬೇಕು ಎಂದು ಹೇಳಿದರು.
ಉಪ ತಹಸೀಲ್ದಾರ ಗವಿಸಿದ್ದಪ್ಪ ಮಣ್ಣೂರ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ, ಶಿಕ್ಷಕರಾದ ಮಹಮ್ಮದ್ ಅಬ್ದುಲ್ ರಹೀಮ್, ಹನುಮಂತಪ್ಪ ಕುರಿ, ಬಸವ ಸಮಿತಿಯ ಅಧ್ಯಕ್ಷ ಬಸವರಾಜ ಬಳ್ಳೊಳ್ಳಿ, ವಿಶ್ವಗುರು ಬಸವೇಶ್ವರ ಸಮಿತಿ ಹನುಮೇಶ ಕಲಮಂಗಿ ಇತರರಿದ್ದರು.