ಕನಕಗಿರಿ: ತಾಲೂಕಿನ ಬೆನಕನಾಳ ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಕಳ್ಳತನದಿಂದ ಗ್ರಾಮಸ್ಥರು ರೋಸಿಹೋಗಿದ್ದು, ಸ್ವಯಂರಕ್ಷಣೆಗೆ ರಾತ್ರಿಯಿಡೀ ಕಾವಲು ಕಾಯುತ್ತಿದ್ದಾರೆ.
ಜ.4ರ ರಾತ್ರಿ ಗ್ರಾಮದ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿನ ಹುಂಡಿ ಕಳ್ಳತನದ ಮೂಲಕ ಆರಂಭವಾದ ಕಳ್ಳರ ಕೈಚಳಕ ಇಂದಿಗೂ ಮುಂದುವರಿದಿದೆ. ದೇವಸ್ಥಾನದ ಕಾಣಿಕೆ ಪೆಟ್ಟಿಗೆಯನ್ನು ಕದ್ದಿದ್ದ ಕಳ್ಳರು, ಎರಡು ವರ್ಷಗಳವರೆಗೆ ಸಂಗ್ರಹಗೊಂಡಿದ್ದ ದೇಣಿಗೆ ಹಣ ದೋಚಿಕೊಂಡು ಗ್ರಾಮದ ಹೊರವಲಯದಲ್ಲಿ ಖಾಲಿ ಪೆಟ್ಟಿಗೆ ಎಸೆದಿದ್ದರು.
ಈ ಘಟನೆ ಬಳಿಕ ಜ.6ರಂದು ಗ್ರಾಮದ ಹೊರವಲಯದಲ್ಲಿನ ಕೋಳಿಫಾರ್ಮ್‌ಗೆ ನುಗ್ಗಿ ಅಲ್ಲಿದ್ದ ವ್ಯಕ್ತಿಯನ್ನು ಹೆದರಿಸಿ ಎರಡು ಕುರಿಗಳನ್ನು ಹೊತ್ತೊಯ್ದಿದ್ದಾರೆ. ಮರುದಿನ ಮೂವರು ಕಳ್ಳರು ಪಕ್ಕದ ಕಲಕೇರಿಗೆ ನುಗ್ಗಿ ತಾಮ್ರದ ಪಾತ್ರೆ ದೋಚಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಗ್ರಾಮಸ್ಥರ ಕಣ್ಣಿಗೆ ಕಂಡಿದ್ದ ಕಳ್ಳರು ಬೈಕ್ ಏರಿ ತಪ್ಪಿಸಿಕೊಂಡಿದ್ದಾರೆ. ಆಗ ಗ್ರಾಮಸ್ಥರು 112ಗೆ ಕರೆ ಮಾಡಿ ತಿಳಿಸಿದ್ದಾಗ ಪೊಲೀಸರು ಆಗಮಿಸಿ ಧೈರ್ಯ ತುಂಬಿದ್ದರು.
ಹೀಗೆ ಪದೇ ಪದೆ ಕಳ್ಳರು ಗ್ರಾಮಕ್ಕೆ ನುಗ್ಗುತ್ತಿರುವುದರಿಂದ ಗ್ರಾಮಸ್ಥರು ಬೇಸತ್ತಿದ್ದು, ಗ್ರಾಮದ ಎಲ್ಲ ದಾರಿಗಳಲ್ಲೂ ದೊಣ್ಣೆಗಳನ್ನು ಹಿಡಿದು ಕಳ್ಳರು ಗ್ರಾಮಕ್ಕೆ ನುಗ್ಗದಂತೆ ಕಾಯುತ್ತಿದ್ದೇವೆ. ಪೊಲೀಸರು ಈ ಕಳ್ಳರನ್ನು ಹಿಡಿಯಲು ಮುಂದಾಗಬೇಕು ಎಂದು ಯುವಕರಾದ ಬಸವರಾಜ, ಮಂಜುನಾಥ ಆಗ್ರಹಿಸಿದ್ದಾರೆ.