ಕನಕಗಿರಿಯಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಚಂದ್ರಶೇಖರ ಗಾಳಿ ಮಾತನಾಡಿದರು. ಯೋಗ ಟ್ರಸ್ಟ್ ಅಧ್ಯಕ್ಷ ವಾಗೀಶ ಹಿರೇಮಠ, ಪ್ರಮುಖರಾದ ಅನಂತಪ್ಪ ಧಾಯಿಪುಲ್ಲೆ, ಸಿದ್ದಪ್ಪ ನಿರ್ಲೂಟಿ ಇತರರಿದ್ದರು.
ಕನಕಗಿರಿ: ಆರೋಗ್ಯ ರಕ್ಷಣೆಗೆ ನಿತ್ಯ ಯೋಗ, ವ್ಯಾಯಾಮ, ಓಡಾಟ ಅವಶ್ಯವಾಗಿದೆ ಎಂದು ತಹಸೀಲ್ದಾರ್ ಚಂದ್ರಶೇಖರ ಶಂಭಣ್ಣ ಗಾಳಿ ಹೇಳಿದರು.
ಪಟ್ಟಣದ ಅಯ್ಯಪ್ಪಸ್ವಾಮಿ ದೇವಸ್ಥಾನ ಆವರಣದಲ್ಲಿ ಸುವರ್ಣಗಿರಿ ಯೋಗ ಟ್ರಸ್ಟ್ ಹಾಗೂ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರದಲ್ಲಿ ಮಾತನಾಡಿದರು. ಶರೀರದ ಸದೃಢೆತೆಗೆ ಯೋಗ ರಾಮಬಾಣವಾಗಿದೆ. ನಮ್ಮ ಪೂರ್ವಜರು ಜೀವನ ಶೈಲಿಯಲ್ಲಿ ಯೋಗಕ್ಕೆ ಅತೀ ಹೆಚ್ಚು ಪ್ರಾತಿನಿಧ್ಯ ನೀಡಿದ್ದರು.
ಉತ್ತಮ ಆರೋಗ್ಯ ರಕ್ಷಣೆಯಲ್ಲಿ ಯೋಗಕ್ಕೆ ಮಹತ್ತರವಾದ ಸ್ಥಾನವಿದೆ. ಯೋಗದಿಂದ ಉತ್ತಮ ಆರೋಗ್ಯ ಪಡೆಯಲು ಸಾಧ್ಯ ಎಂದರು. ಯೋಗ ಶಿಕ್ಷಕ ಶೇಖರಯ್ಯಸ್ವಾಮಿ ಕಲ್ಮಠ ಮಾತನಾಡಿ, ಭಾರತದ ಯೋಗ ಪರಂಪರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಯೋಗ ದೈಹಿಕ ಹಾಗೂ ಮಾನಸಿಕ ಒತ್ತಡ ನಿವಾರಿಸಲಿದೆ. ನಿತ್ಯ ವ್ಯಾಯಾಮ, ಪ್ರಾಣಾಯಾಮ ಮಾಡುವುದರಿಂದ ಆರೋಗ್ಯ ಗಟ್ಟಿಯಾಗಲಿದೆ ಎಂದು ತಿಳಿಸಿದರು.
ಯೋಗ ಟ್ರಸ್ಟ್ ಅಧ್ಯಕ್ಷ ವಾಗೀಶ ಹಿರೇಮಠ, ಯೋಗ ಗುರು ಶಿವಾನಂದ ಬೆಲ್ಲದ್, ನೌಕರರ ಸಂಘದ ಅಧ್ಯಕ್ಷೆ ಶಂಶಾದ್ ಬೇಗಂ, ಪ್ರಮುಖರಾದ ಅನಂತಪ್ಪ ಧಾಯಿಪುಲ್ಲೆ, ಸಿದ್ದಪ್ಪ ನಿರ್ಲೂಟಿ, ನಾಗನಗೌಡ ಪಾಟೀಲ್, ಮಹಾಂತೇಶ ಸಜ್ಜನ, ಸಣ್ಣ ಕನಕಪ್ಪ ಇತರರಿದ್ದರು.