ರಾಜ್ಯಪಾಲರು ಹಿಂದಿ ಶಾಹಿಗಳ ಏಜೆಂಟ್​ ರೀತಿ ವರ್ತಿಸುತ್ತಿದ್ದಾರೆ

ಕೊಪ್ಪಳ ಜಿಲ್ಲಾಡಳಿತ ಭವನದ ಮುಂದೆ ಮಂಗಳವಾರ ಕರವೇ ಜಿಲ್ಲಾ ಘಟಕದಿಂದ ರಾಜ್ಯಪಾಲರ ಧೋರಣೆಯನ್ನು ಖಂಡಿಸಿ ಪ್ರತಿಭಟನೆ ಮಾಡಲಾಯಿತು.
ಕೊಪ್ಪಳ ಜಿಲ್ಲಾಡಳಿತ ಭವನದ ಮುಂದೆ ಮಂಗಳವಾರ ಕರವೇ ಜಿಲ್ಲಾ ಘಟಕದಿಂದ ರಾಜ್ಯಪಾಲರ ಧೋರಣೆಯನ್ನು ಖಂಡಿಸಿ ಪ್ರತಿಭಟನೆ ಮಾಡಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಬಿ. ಗಿರೀಶಾನಂದ ಆಕ್ರೋಶ
  • ಕರವೇ ಜಿಲ್ಲಾ ಘಟಕದಿಂದ ಪ್ರತಿಭಟನೆ
ಕೊಪ್ಪಳ : ಕರ್ನಾಟಕದ ಆಡಳಿತದಲ್ಲಿ ಅನಗತ್ಯವಾಗಿ ಮೂಗು ತೂರಿಸುತ್ತಾ. ಹಿಂದಿ ಹೇರಿಕೆಗೆ ಕುಮ್ಮಕ್ಕು ನೀಡುತ್ತಿರುವ ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಅಥವಾ ಕೇಂದ್ರ ಸರ್ಕಾರ ಅವರನ್ನು ವಾಪಸ್​ ಕರೆಯಿಸಿಕೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಬಿ. ಗಿರೀಶಾನಂದ ಜ್ಞಾನಸುಂದರ ಆಗ್ರಹಿಸಿದರು.
ನಗರದ ಜಿಲ್ಲಾಡಳಿತ ಭವನದ ಮುಂದೆ ಮಂಗಳವಾರ ಕರವೇ ಜಿಲ್ಲಾ ಘಟಕದಿಂದ ನಡೆದ ಪ್ರತಿಭಟನೆಯಲ್ಲಿ ರಾಜ್ಯಪಾಲರ ಧೋರಣೆಯನ್ನು ಖಂಡಿಸಿ ಮಾತನಾಡಿದರು.
ರಾಜ್ಯ ಸರ್ಕಾರವು ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್​ ವ್ಯವಸ್ಥೆ ತಂದಿರುವುದು ಕನ್ನಡಿಗರ ಹಿತದೃಷ್ಟಿಯಿಂದ. ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಪತ್ರ ಬರೆಯಲು ರಾಜ್ಯಪಾಲರಿಗೆ ಯಾವ ಸಂವಿಧಾನಿಕ ಹಕ್ಕಿದೆ. ಅವರು ಚುನಾಯಿತ ಸರ್ಕಾರದ ಅಧಿಕಾರವನ್ನು ಪ್ರಶ್ನಿಸುತ್ತಿದ್ದಾರೆ. ಅನಾಮಧೇಯ ಸಂಘಟನೆಗಳ ಮಾತು ಕೇಳಿ ರಾಜ್ಯಪಾಲರು ಪತ್ರ ಬರೆದಿರುವುದು ನೋಡಿದರೆ. ಇದರ ಹಿಂದೆ ದೊಡ್ಡ ಹಿಂದಿ ಮಾಫಿಯಾ ಇರುವುದು ಸ್ಪಷ್ಟವಾಗುತ್ತದೆ. ರಾಜ್ಯವನ್ನು ಹಿಂದಿ ಭಾಷಿಕರ ಸ್ವರ್ಗವನ್ನಾಗಿಸಲು ರಾಜ್ಯಪಾಲರು ದಾರಿ ಮಾಡಿಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ಕನ್ನಡಿಗರ ಅಸ್ಮಿತೆಯನ್ನು ಕೆಣಕಿದರೆ ನಾವು ಸುಮ್ಮನಿರುವುದಿಲ್ಲ. ಈ ಹಿಂದೆ ಬ್ರಿಟಿಷರನ್ನು ಓಡಿಸಿದಂತೆ, ಈಗ ಹಿಂದಿ ಶಾಹಿಗಳ ವಿರುದ್ಧ ಹೋರಾಡುತ್ತೇವೆ. ಸರ್ಕಾರದ ನಿರ್ಧಾರವನ್ನು ಬದಲಿಸಲು ಯತ್ನಿಸಿದರೆ ರಕ್ತ ಕ್ರಾಂತಿ ನಿಶ್ಚಿತ. ಗೆಹ್ಲೋಟ್​ ಅವರಿಗೆ ಅಷ್ಟೋದು ಆಸಕ್ತಿಯಿದ್ದರೆ ತಮ್ಮ ಸ್ವಂತ ರಾಜ್ಯವಾದ ಮಧ್ಯಪ್ರದೇಶದಲ್ಲಿ ಕನ್ನಡವನ್ನು ಮೂರನೇ ಭಾಷೆಯಾಗಿ ಕಡ್ಡಾಯಗೊಳಿಸಲಿ. ಅದು ಬಿಟ್ಟು ಇಲ್ಲಿ ಹಿಂದಿ ಹೇರುವುದು ಕನ್ನಡಿಗರಿಗೆ ಮಾಡುವ ದ್ರೋಹವಾಗಿದೆ ಎಂದರು. ಪ್ರತಿಭಟನೆಯ ನಂತರ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಯುವ ಘಟಕ ಅಧ್ಯಕ್ಷ ಹನುಮಂತ ಬೆಸ್ತರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಮೂಗಿನ್​, ಜಿಲ್ಲಾ ಉಪಾಧ್ಯಕ್ಷ ಶಿವನಗೌಡ ಪಾಟೀಲ ಹಲಗೇರಿ, ಜಿಲ್ಲಾ ಮಹಿಳಾ ಅಧ್ಯಕ್ಷೆ ಭುವನೇಶ್ವರಿ ಮೊಟಗಿ, ಜಿಲ್ಲಾ ಪ್ರಧಾನ ಸಂಚಾಲಕ ಗವಿಸಿದ್ದಪ್ಪ ಚಕ್ಕಡಿ, ಮ್ರಮುಖರಾದ ಹುಸೇನ ಬಾಶಾ ಮಣ್ಣೂರು, ಹರೀಶ ಪೂಜಾರ, ರಮೇಶ ಚಂಡೂರು, ಪ್ರಕಾಶ ಮನ್ನೇರಾಳ, ಸಿದ್ದು ಸಶಿಮಠ, ಗಂಗಮ್ಮ ಕುಂಬಾರ, ಹುಲಿಗೆಮ್ಮ ನಾಯಕ, ಮಹಿಳಾ ಗೌರವಾಧ್ಯಕ್ಷೆ ಶಂಕ್ರಮ್ಮ ಮ್ಯಾಗಳಮನಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net