ಕೊಪ್ಪಳ: ನಾವೆಲ್ಲ ಸರ್ಕಾರದ ಭಾಗ. ಉತ್ತಮ ಕೆಲಸ ಮಾಡಿದರೆ ಸರ್ಕಾರಕ್ಕೆ ಉತ್ತಮ ಹೆಸರು ಬರುತ್ತದೆ ಎಂಬುದನ್ನು ಮರೆಯಬಾರದು ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಸಲಹೆ ನೀಡಿದರು.
ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆಯಲ್ಲಿ ಮಾತನಾಡಿದರು.
ಎಲ್ಲವನ್ನೂ ಕಾನೂನು ಚೌಕಟ್ಟಿನಲ್ಲಿ ಮಾಡಲಾಗದು. ಅಂತ@ಕರಣದಿಂದ ಕೆಲಸ ಮಾಡಿ. ನೆರವು ಅರಸಿ ಬಂದ ಜನರಿಗೆ ಸಹಾಯ ಮಾಡಿ. ಸರ್ಕಾರಿ ನೌಕರನೆಂದು ಹೆಮ್ಮೆಯಿಂದ ಹೇಳಿ. ಕೆಲಸಕ್ಕೆ ಸೇರಿದ ಮೇಲೆ ನಿರಂತರ ಅಪ್ಡೇಟ್ ಆಗಬೇಕು. ಒಂದೇ ಕೆಲಸಕ್ಕೆ ಸೀಮಿತರಾಗದಿರಿ. ವೈಯಕ್ತಿಕ ಜೀವನ, ಆರೋಗ್ಯಕ್ಕೆ ಆದ್ಯತೆ ನೀಡಿ. ಉಳಿತಾಯ ಮಾಡಿ. ಸಮಯ ನಿರ್ವಹಣೆ ಕಲೆ ಬೆಳೆಸಿಕೊಳ್ಳಿ. ಸಾರ್ವಜನಿಕ ಸೇವೆ ಪರಿಣಾಮಕಾರಿಯಾಗಿ ಮಾಡಿ. ಕುಟುಂಬಕ್ಕೆ ಆದ್ಯತೆ ನೀಡುವಂತೆ ಮಾರ್ಗದರ್ಶನ ನೀಡಿದರು.
ಜಿಪಂ ಸಿಇಒ ವರ್ಣಿತ್ ನೇಗಿ ಮಾತನಾಡಿ, ಉತ್ತಮ ಕೆಲಸ ಮಾಡುವವರನ್ನು ಬೇಗ ಗುರುತಿಸುವುದಿಲ್ಲ. ಇಂಥ ಕಾರ್ಯಕ್ರಮ ಅಂಥವರನ್ನು ಗುರುತಿಸಲು ಸಹಕಾರಿ. ಎಲ್ಲ ರಾಜ್ಯಗಳಲ್ಲಿ ಇಂಥ ಅವಕಾಶ ಇಲ್ಲ. ಜನಸೇವೆ ನಮ್ಮ ಮೊದಲ ಆದ್ಯತೆ ಎಂಬುದನ್ನು ಮರೆಯದಿರಿ. ಜಗತ್ತು ದಿನ ಕಳೆದಂತೆ ತಂತ್ರಜ್ಞಾನದೊಂದಿಗೆ ಓಡುತ್ತಿದೆ. ನಾವು ಅದಕ್ಕೆ ತಕ್ಕಂತೆ ಕೌಶಲ ಬೆಳೆಸಿಕೊಂಡು ಕೆಲಸ ಮಾಡಬೇಕೆಂದು ಸಲಹೆ ನೀಡಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ ಮಾತನಾಡಿ, ಸರ್ಕಾರದ ಬೆನ್ನೆಲುಬು ಸರ್ಕಾರಿ ನೌಕರರು. ಚುನಾಯಿತ ಪ್ರತಿನಿಧಿಗಳು ಹಾಗೂ ನಿಮ್ಮ ನಡುವೆ ಅವಿನಾಭಾವ ಸಂಬಂಧ ಇದ್ದಾಗ ಅಭಿವೃದ್ಧಿ ಸಾಧ್ಯ. ಸರ್ಕಾರ ಏನೇ ಯೋಜನೆ ರೂಪಿಸಿದರೂ ಜನರಿಗೆ ತಲುಪಿಸುವುದು ನೀವು. ಪರಿಣಾಮಕಾರಿಯಾಗಿ ಕೆಲಸ ಮಾಡಿದಾಗ ಅಭಿವೃದ್ಧಿ ಸಾಧ್ಯ. ಗ್ಯಾರಂಟಿ ಯೋಜನೆಗಳು ಸಕ್ಸಸ್ ಆಗಲು ನೀವೇ ಕಾರಣ ಎಂದು ಪ್ರಶಂಸಿದರು.
ನೌಕರರ ಸಂದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮಣ್ಣನವರ ಪ್ರಸ್ತಾವಿಕ ಮಾತನಾಡಿದರು. 30 ನೌಕರರಿಗೆ ಜಿಲ್ಲಾಮಟ್ಟದ ಸರ್ವೊತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಯಿತು.