ಬೀದಿಗೆ ಬಂದ ಪಪಂ ಸದಸ್ಯರ ಒಳಜಗಳ

ಕನಕಗಿರಿಯ ಪಪಂ ಸದಸ್ಯ ಅನಿಲ್‌ಕುಮಾರ ಬಿಜ್ಜಳ ಅವರ ಅಂಗಡಿಗೆ ನುಗ್ಗಿದ ಪಪಂ ಅಧ್ಯಕ್ಷೆಯ ಬೆಂಬಲಿಗರು.
ಕನಕಗಿರಿಯ ಪಪಂ ಸದಸ್ಯ ಅನಿಲ್‌ಕುಮಾರ ಬಿಜ್ಜಳ ಅವರ ಅಂಗಡಿಗೆ ನುಗ್ಗಿದ ಪಪಂ ಅಧ್ಯಕ್ಷೆಯ ಬೆಂಬಲಿಗರು.
Published on

ಪ್ರಮುಖ ಮುಖ್ಯಾಂಶಗಳು

  • ಬೇಸರ ವ್ಯಕ್ತಪಡಿಸಿದ ಸಚಿವ ಶಿವರಾಜ ತಂಗಡಗಿ
  • ಗೊಂದಲ ಸರಿಪಡಿಸುವ ಭರವಸೆ
ಕನಕಗಿರಿ: ಕಾಂಗ್ರೆಸ್ ಸದಸ್ಯರಲ್ಲಿನ ಗುಂಪುಗಾರಿಕೆಯಿಂದ ಸೋಮವಾರ ಜಾತ್ರೆ ಹಾಗೂ ಇತರ ವಿಷಯಗಳ ಚರ್ಚೆಗಾಗಿ ನಡೆದ ಸಾಮಾನ್ಯ ಸಭೆಗೆ ಕೋರಂ ಕೊರತೆ ನೆಪದಲ್ಲಿ ಹೈಡ್ರಾಮಾ ನಡೆದು ಸದಸ್ಯರ ಮೇಲೆ ಹಲ್ಲೆವರೆಗೂ ಮುಂದುವರಿದಿದ್ದು ಕನ್ನಡ ಮತ್ತು ಸಂಸ್ಕೃತಿ ಸಚಿವರ ಕ್ಷೇತ್ರದ ಸದಸ್ಯರ ಒಳ ಜಗಳ ಬಯಲಿಗೆ ಬಿದ್ದಿದೆ.
ಅಧ್ಯಕ್ಷೆಯಾಗಿ ಅಧಿಕಾರ ನಡೆಸಿದ ಹುಸೇನ್ ಬೀ ಚಳ್ಳಮರದ ರಾಜೀನಾಮೆ ಬಳಿಕ ಉಳಿದ ಅವಧಿಗೆ ತನುಶ್ರೀ ರಾಮಚಂದ್ರ ಆಯ್ಕೆಗೆ ಕೆಲ ಕಾಂಗ್ರೆಸ್ ಸದಸ್ಯರು ಪರೋಕ್ಷವಾಗಿ ವಿರೋಧಿಸಿದ್ದರು. ಇವರಿಗೆ 5 ಬಿಜೆಪಿ ಸದಸ್ಯರು ಕೈ ಜೋಡಿಸಿದ್ದರು. ಜತೆಗೆ ಪ್ರವಾಸಕ್ಕೆ ತೆರಳಿದ್ದು ಪ್ರಹಸನಕ್ಕೆ ಕಾರಣವಾಗಿತ್ತು. ಸಚಿವ ತಂಗಡಗಿ ನೀಡಿದ ಭರವಸೆಯಂತೆ ಚುನಾವಣೆ ಹಿಂದಿನ ದಿನ ಕಾಂಗ್ರೆಸ್ ಸದಸ್ಯರನ್ನು ಖಾಸಗಿ ಹೋಟೆಲ್‌ನಲ್ಲಿ ಸಭೆ ಕರೆದು ತರಾಟೆಗೆ ತೆಗೆದುಕೊಂಡು ತನುಶ್ರೀ ಮಾತ್ರ ನಾಮಪತ್ರ ಸಲ್ಲಿಸಿ ಅವಿರೋಧ ಆಯ್ಕೆಯಾಗುವಂತೆ ನೋಡಿಕೊಂಡಿದ್ದರು.
ನಂತರ ಕಾಂಗ್ರೆಸ್ ಸದಸ್ಯರ ಬಣದ ಮುನಿಸು ಮುಂದುವರಿದು ತನುಶ್ರೀ ಅಧ್ಯಕ್ಷತೆಯಲ್ಲಿ ಮೊದಲ ಬಾರಿಗೆ ಸಾಮಾನ್ಯ ಸಭೆಗೆ ಗೈರಾಗುವ ಮೂಲಕ ಕೋರಂ ಕೊರತೆ ಮಾಡಿ ತಮ್ಮದೇ ಪಕ್ಷದ ಅಧ್ಯಕ್ಷರಿಗೆ ಅಸಹಕಾರ ತೋರಿದ್ದರು. ಇದರಿಂದ ಸಭೆ ಮುಂದೂಡಲಾಗಿತ್ತು. ಮಾ.2ರಂದು ಕರೆದಿದ್ದ ಸಾಮಾನ್ಯ ಸಭೆಗೆ 5 ಸದಸ್ಯರು ಮಾತ್ರ ಹಾಜರಿದ್ದರು. ಕೊರಂಗೆ 6 ಸದಸ್ಯರ ಅವಶ್ಯಕತೆ ಇದ್ದ ಕಾರಣ ಮಾಜಿ ಅಧ್ಯಕ್ಷೆ ಹುಸೇನ್ ಬೀ ಚಳ್ಳಮರದ ಅವರನ್ನು ಕರೆ ತರುವಲ್ಲಿ ಸದಸ್ಯರು ಯಶಸ್ವಿಯಾಗಿದ್ದರು. ಅಸಮಾಧಾನಿತ ಗುಂಪಿನಲ್ಲಿದ್ದ ಸದಸ್ಯೆ ಹುಸೇನ್‌ಬೀ ಸಭೆಗೆ ಹಾಜರಾಗಿದ್ದರಿಂದ ಆಕ್ರೋಶಗೊಂಡ 10ನೇ ವಾರ್ಡ್ ಸದಸ್ಯ ಸಂಗಪ್ಪ ಸಜ್ಜನ್, ಪಂಚಾಯಿತಿಗೆ ಆಗಮಿಸಿ ಹುಸೇನ್ ಬೀ ಪುತ್ರನಿಗೆ ತಾಯಿಯನ್ನು ಕರೆದುಕೊಂಡು ಹೋಗುವಂತೆ ಹೇಳಿ ಬಾಗಿಲು ಒದ್ದಿದ್ದಾರೆ ಎನ್ನಲಾಗಿದೆ. ಬಳಿಕ ಅಧ್ಯಕ್ಷೆ ಬೆಂಬಲಿಗರು ಸದಸ್ಯ ಸಂಗಪ್ಪ ಸಜ್ಜನ್ ಅವರನ್ನು ಕರೆದು ಭಿನ್ನಾಭಿಪ್ರಾಯ ಶಮನಕ್ಕೆ ಮುಂದಾಗಿದ್ದಾರೆ. ಆದರೆ, ಸಂಗಪ್ಪ ಸಜ್ಜನ್ ಬೇರೆಡೆ ತೆರಳಿದ್ದರಿಂದ ಉದ್ದೇಶ ಕೈಗೂಡಲಿಲ್ಲ.
ಬಳಿಕ ಆಕ್ರೋಶಗೊಂಡಿದ್ದ ಅಧ್ಯಕ್ಷೆಯ ಪತಿ, ಬೆಂಬಲಿಗರು ಸಂಜೆ ಸದಸ್ಯ ಅನಿಲ್ ಕುಮಾರ ಬಿಜ್ಜಳ ಅವರ ಔಷಧ ಅಂಗಡಿಗೆ ತೆರಳಿ ಭಿನ್ನಾಭಿಪ್ರಾಯಕ್ಕೆ ಕಾರಣ ಕೇಳುವ ನೆಪದಲ್ಲಿ ವಾಗ್ವಾದ ನಡೆದಿದ್ದು, ಹಲ್ಲೆಯವರೆಗೂ ಮುಂದುವರಿಯಿತು. ಮುಖಂಡರು ಜಗಳ ಬಿಡಿಸಲು ಮುಂದಾದರೂ ಬಿಜ್ಜಳ ಅವರ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ತೆರಳಿದ ಪತ್ರಕರ್ತರು ಫೋಟೋ, ವಿಡಿಯೋ ತೆಗೆಯುವಾಗ ಪತ್ರಕರ್ತರನ್ನು ಎಳೆದಾಡಿ ಹಲ್ಲೆ ಮಾಡಿದ್ದಾರೆ. ಮೊಬೈಲ್ ಕಸಿದು ವಿಡಿಯೋ ಡಿಲಿಟ್ ಮಾಡಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿಲ್ಲ. ಆದರೆ, ಹಲ್ಲೆ ಮಾಡಿದವರನ್ನು ಬುಧವಾರ ಕರೆದು ಘಟನೆ ಬಗ್ಗೆ ಚರ್ಚಿಸುವುದಾಗಿ ಬ್ಲಾಕ್ ಅಧ್ಯಕ್ಷ ಕನಕಪ್ಪ ಛಲವಾದಿ ತಿಳಿಸಿದ್ದಾರೆ. ಈ ಬಗ್ಗೆ ಸಚಿವರು ಬೇಸರವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಹಗುರವಾಗಿ ಪರಿಗಣಿಸಿದರೆ ಸಚಿವರು?:

ಇತ್ತೀಚೆಗೆ ವಿವಿಧ ಕಾಮಗಾರಿ ಉದ್ಘಾಟನೆಗೆ ಬಂದಿದ್ದ ಸಚಿವ ಶಿವರಾಜ ತಂಗಡಗಿಗೆ ಸದಸ್ಯರ ಗುಂಪುಗಾರಿಕೆ, ಅಧ್ಯಕ್ಷೆಯ ಆಡಳಿತಕ್ಕೆ ಅಸಹಕಾರ ಕುರಿತು ಮಾಧ್ಯಮದವರು ಪ್ರಶ್ನಿಸಿದ್ದು, ಸರಿಪಡಿಸುವುದಾಗಿ ತಿಳಿಸಿದ್ದರು. ಆದರೆ, ಗೊಂದಲ ನಿವಾರಣೆ ಆಗದ ಕಾರಣ ಒಳ ಮುನಿಸು ಹೊರಬಿದ್ದಿದೆ ಎನ್ನಲಾಗುತ್ತಿದೆ.
"

ನಾನು ಕುಟುಂಬದೊಂದಿಗೆ ಪ್ರವಾಸಕ್ಕೆ ಬಂದಿದ್ದೇನೆ. ಘಟನೆ ಕುರಿತು ಮಾಹಿತಿ ತಿಳಿದಿದ್ದು, ಇದು ನಡೆಯಬಾರದಾಗಿತ್ತು. ನನಗೂ ಬೇಸರ ತರಿಸಿದ್ದು, ಮಾಧ್ಯಮದವರ ಮೇಲೆ ಹಲ್ಲೆ ಆಗಬಾರದಿತ್ತು. ಶೀಘ್ರ ಕ್ಷೇತ್ರಕ್ಕೆ ಬಂದು ಸರಿಪಡಿಸುತ್ತೇನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net