ಉಸಿರು ನೀಡದ ಉದ್ಯಾನಗಳು

ಕೊಪ್ಪಳದ ಹಮಾಲರ ಕಾಲನಿಯ ಪಾರ್ಕ್ ನಿರ್ವಹಣೆ ಇಲ್ಲದಿರುವುದು.
ಕೊಪ್ಪಳದ ಹಮಾಲರ ಕಾಲನಿಯ ಪಾರ್ಕ್ ನಿರ್ವಹಣೆ ಇಲ್ಲದಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಕಸದ ಕೊಂಪೆಯಾಗಿ ಮಾರ್ಪಾಡು
  • ನಗರಾಡಳಿತಕ್ಕೆ ಜನರ ಹಿಡಿಶಾಪ
ಕೊಪ್ಪಳ: ಬೇಸಿಗೆ ಧಗೆ ಜನರ ನಿದ್ದೆ ಕಸಿದರೆ, ನೆಮ್ಮದಿ ತಾಣವಾಗಬೇಕಿದ್ದ ನಗರದ ಉದ್ಯಾನಗಳು ಕಸದ ಕೊಂಪೆಯಾಗಿ ಮಾರ್ಪಟ್ಟಿವೆ. ನಿರ್ವಹಣೆ ಹೆಸರಿನಲ್ಲಿ ಅನುದಾನ ಪೋಲಾದರೂ ಮೂರ್ತರೂಪ ಪಡೆಯುತ್ತಿಲ್ಲ. ಬಿರು ಬಿಸಿಲಿನಲ್ಲಿ ತಂಪೆರೆಯದ ಪಾರ್ಕ್‌ಗಳ ದುಸ್ಥಿತಿಗೆ ಕಾರಣವಾದ ನಗರಾಡಳಿತಕ್ಕೆ ಜನರು ಹಿಡಿಶಾಪ ಹಾಕುತ್ತಿದ್ದಾರೆ.
ನಗರದಲ್ಲಿ 260ಕ್ಕೂ ಹೆಚ್ಚು ಪಾರ್ಕ್‌ಗಳಿವೆ ಎಂದು ದಾಖಲೆಗಳಲ್ಲಿದ್ದರೂ ಒಂದಾದರೂ ಉಸಿರಾಟಕ್ಕೆ ಯೋಗ್ಯ ಗಾಳಿ ನೀಡುವಷ್ಟು ಸುಸ್ಥಿತಿಯಲ್ಲಿವೆಯೇ ಎಂಬ ಪ್ರಶ್ನೆಗೆ ಎಲ್ಲಿವೆ ಎಂಬುದೇ ಉತ್ತರವಾಗಿದೆ.
ಹವಾವಾನ ಇಲಾಖೆ ವಾಹಿತಿ ಪ್ರಕಾರ ಏಪ್ರಿಲ್-ಮೇ ತಿಂಗಳಲ್ಲಿ ತಾಪವಾನ ತೀವ್ರವಾಗುತ್ತಿದ್ದು, ಈ ಸಮಯದಲ್ಲಿ ನೆರಳು ಮತ್ತು ತಣ್ಣನೆಯ ವಾತಾವರಣ ನೀಡುವ ಪಾರ್ಕ್‌ಗಳ ಅಗತ್ಯ ಹೆಚ್ಚಾಗಿದೆ. ಆದರೆ ನಗರದಲ್ಲಿನ ಬಹುತೇಕ ಪಾರ್ಕ್‌ಗಳು ಕಸದ ರಾಶಿ, ಮುರಿದ ಗೇಟ್‌ಗಳು, ಹಾಳಾದ ಕಾಂಪೌಂಡ್‌ಗಳು ಮತ್ತು ಬಿದ್ದ ಆಟಿಕೆಗಳೊಂದಿಗೆ ನಿರ್ಲಕ್ಷೃದ ಕುರುಹುಗಳಾಗಿ ಕಾಣಿಸುತ್ತಿವೆ.
ನಗರದ ಬಹುತೇಕ ಪಾರ್ಕ್‌ಗಳ ಸ್ಥಿತಿ ಒಂದೇ ಆಗಿದೆ. ಹುಡ್ಕೊ ಕಾಲನಿ ಪಾರ್ಕ್‌ನಲ್ಲಿ ಮರಗಳಿವೆ. ಆಟಿಕೆಗಳಿದ್ದರೂ ನಿರ್ವಹಣೆ ಇಲ್ಲ. ಕಸದ ರಾಶಿ, ಪ್ಲಾಸ್ಟಿಕ್ ಬಾಟಲ್, ವಸ್ತುಗಳು ಎಲ್ಲೆಂದರಲ್ಲಿ ಬಿದ್ದಿವೆ. ಬಿದಿ ನಾಯಿಗಳ ಮಲದಿಂದ ತುಂಬಿ ಹೋಗಿದೆ. ಮಕ್ಕಳ ಆಟಿಕೆಗಳು ಹಾಳಾಗಿದ್ದು, ಕಿತ್ತುಹೋದ ಜೋಕಾಲಿಯ ಚೈನ್‌ಗೆ ಮರದ ತುಂಡುಗಳನ್ನು ಕಟ್ಟಿ ಮಕ್ಕಳು ಆಟವಾಡುತ್ತಿರುವುದು ನಗರಾಡಳಿತದ ಆಡಳಿತ ವೈಖರಿಗೆ ಹಿಡಿದ ಕನ್ನಡಿಯಂತಿದೆ. ದೇವಸ್ಥಾನ ಇದ್ದರೂ ನಿರ್ವಹಣೆ ಇಲ್ಲದಿರುವುದು ವಿಷಾದನೀಯ.
ಉಪಯೋಗಕ್ಕೆ ಬಾರದ ಉಪವನಗಳು
ಹಮಾಲರ ಕಾಲನಿ, ಬಿ.ಟಿ.ಪಾಟೀಲ್ ನಗರ, ಈಶ್ವರ ಪಾರ್ಕ್, ಬಸವನಗರ ಸೇರಿ ನಗರದ ಬಹುತೇಕ ಬಡಾವಣೆಗಳಲ್ಲಿನ ಪಾರ್ಕ್‌ಗಳ ಕಥೆ ಒಂದೇ ಆಗಿದೆ. ಬಿಸಿಲು ಹೆಚ್ಚಿದೆ, ನೆರಳು ಅರಸಿ ಎಲ್ಲಿ ಕೂಡೋಣ ಎಂದು ಹುಡುಕಾಡಿದರೂ ಒಂದೂ ಉತ್ತಮ ಉದ್ಯಾನ ಸಿಗುವುದಿಲ್ಲ. ಜನರು ಬಸ್‌ನಿಲ್ದಾಣ, ಪ್ರವಾಸಿ ಮಂದಿರ ಅಥವಾ ರಸ್ತೆ ಬದಿ ಮರದ ನೆರಳಿನಲ್ಲಿ ವಿಶ್ರಾಂತಿ ಪಡೆಯಬೇಕಾದ ದುಸ್ಥಿತಿ ಜಿಲ್ಲಾ ಕೇಂದ್ರಕ್ಕೆ ಬಂದೊದಗಿದೆ. ಹೊಸದಾಗಿ ಪಾರ್ಕ್ ರಚನೆ ವೇಳೆ ಹಾಕಿದ ಆಟಿಕೆಗಳು, ಕೂಡುವ ಆನಸ, ಗಿಡ-ಮರಗಳನ್ನು ಬಿಟ್ಟರೆ ಹೆಚ್ಚುವರಿ ನಿರ್ವಹಣೆ ಇಲ್ಲ. ನಿತ್ಯ ಬಿದ್ದ ಕಸವನ್ನು ಎತ್ತಿ ಹಾಕುವವರೂ ದಿಕ್ಕಿಲ್ಲದಂತಾಗಿದೆ.

ಆಟಿಕೆಗಳು ಜಖಂ

ಪಾರ್ಕ್ ಗೇಟ್‌ಗಳಲ್ಲಿ ವಾತ್ರ ನಗರಸಭೆ ಉದ್ಯಾನ ಎಂಬ ಬೋರ್ಡ್ ಕಾಣಿಸುವುದು ಬಿಟ್ಟರೆ ಹೆಚ್ಚೇನು ಕಾಣಸಿಗದು. ಗೇಟ್‌ಗಳೂ ಇಲ್ಲ. ಕಾವಲುಗಾರರಂತೂ ಬಂದೇ ಇಲ್ಲ ಎನ್ನುತ್ತಾರೆ ಸುತ್ತಲಿನ ನಿವಾಸಿಗಳು. ಆಟಿಕೆಗಳಿಲ್ಲದಿದ್ದರೂ ಮಕ್ಕಳು ಕಬ್ಬಿಣದ ಕಂಬದೊಂದಿಗೆ ಆಟವಾಡುತ್ತಿರುವುದು ಕಾಣಿಸುತ್ತದೆ. ಆಟಿಕೆಗಳು ಮುರಿದು ಜಖಂಗೊಂಡಿವೆ. ಕೂಡಲು ಸರಿಯಾದ ಆಸನಗಳಿಲ್ಲ. ವಿದ್ಯುತ್ ಸಂಪರ್ಕ ದೂರದ ಮಾತು. ಕಸದ ರಾಶಿಯಲ್ಲಿ ಹಾವು-ಚೇಳು ಸೇರಿ ವಿಷ ಜಂತುಗಳು ವಾಸಿಸುವಂತಾಗಿದ್ದು ಮಕ್ಕಳನ್ನು ಬಿಡಲು ಪಾಲಕರು ಹೆದರುವಂತಾಗಿದೆ. ಬೇಸಿಗೆ ರಜೆ ಇದ್ದರೂ ಮಕ್ಕಳನ್ನು ಹೊರಗೆ ಬಿಡದ ಸ್ಥಿತಿ ಇದೆ ಎನ್ನುತ್ತಾರೆ ಸಾರ್ವಜನಿಕರು.

ಕೊಪ್ಪಳ ನಗರದಲ್ಲಿನ ಪಾರ್ಕ್‌ಗಳನ್ನು ಸ್ವಚ್ಛ ವಾಡಿ ಉತ್ತಮ ಆಸನಗಳನ್ನು ಹಾಕಿಸಿದರೆ ಒಳ್ಳೆಯದು. ಹುಡ್ಕೋ ಕಾಲನಿಯನ ಪಾರ್ಕ್ ನಲ್ಲಿ ನೆರಳಿದೆ ಆದರೆ ಕುಳಿತುಕೊಳ್ಳಲು ಸೂಕ್ತ ಆಸನಗಳಿಲ್ಲ, ಪ್ರಮುಖವಾಗಿ ಸ್ವಚ್ಛತೆ ಇಲ್ಲದೆ ಮೌನವಾಗಿದೆ. ಇಂತಹ ಪಾರ್ಕ್‌ಗಳನ್ನು ಸ್ವಚ್ಛಗೊಳಿಸಿದರೆ ಸಾರ್ವಜನಿಕರು, ನಮ್ಮಂತ ಡೆಲಿವರಿ ಬಾಯ್‌ಗಳಿಗೆ ಕೆಲ ಸಮಯ ವಿಶ್ರಾಂತಿ ಪಡೆಯಲು ಅನುಕೂಲವಾಗುತ್ತದೆ.

ಪಾರ್ಕ್ ಸ್ವಚ್ಛಗೊಳಿಸಿದರೆ ಮಕ್ಕಳಿಗೆ ಆಟವಾಡಲು ಅನುಕೂಲವಾಗುತ್ತದೆ. ಕಸದಿಂದ ಕೂಡಿದ್ದು ಹಾವುಗಳಿವೆ. ನಾವು ನಗರಸಭೆಗೆ ತೆರಿಗೆ ಕಟ್ಟುತ್ತೇವೆ ಆದರೂ ನಿರ್ವಹಣೆ ಮಾಡುತ್ತಿಲ್ಲ. ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹೇಳಿ ಸಾಕಾಗಿ ನಾವೇ ಸುಮ್ಮನಾಗಿದ್ದೇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net