ಮುನಿರಾಬಾದ್: ಬನದ ಹುಣ್ಣಿಮೆ ಪ್ರಯುಕ್ತ ಸಮೀಪದ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ನಾಲ್ಕು ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿ ಶನಿವಾರ ದೇವಿ ದರ್ಶನ ಪಡೆದರು.
ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಹೊಸ ವರ್ಷದ ಮೊದಲ ಹುಣ್ಣಿಮೆ ನಿಮಿತ್ತ ಹೊರ ಜಿಲ್ಲೆ, ರಾಜ್ಯಗಳಿಂದ ಆಗಮಿಸಿದ್ದ ಭಕ್ತರು ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿ, ಸರತಿಯಲ್ಲಿ ನಿಂತು ಹುಲಿಗೆಮ್ಮದೇವಿ ದರ್ಶನ ಪಡೆದು, ದೇವಿಗೆ ಹಣ್ಣು, ಹೂಗಳು, ಕಾಣಿಕೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.
ಪೊಲೀಸ್ ಬಂದೋಬಸ್ತ್
ಬನದ ಹುಣ್ಣಿಮೆ ನಿಮಿತ್ತ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿಂದ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಒದಗಿಸಲಾಗಿತ್ತು. ಇನ್ನು ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಪ್ರತ್ಯೇಕ ಬ್ಯಾರಿಕೇಡ್‌ಗಳನ್ನು ದೇವಿ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಜನ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಲು ಮುಖ್ಯದ್ವಾರದಿಂದ ಒಳಗಡೆ ವಾಹನ ಪ್ರವೇಶ ನಿರ್ಬಂಧಿಸಲಾಗಿತ್ತು.
ರೈಲ್ವೆ ಗೇಟ್ ಬಳಿ ಸವಾರರು ಹೈರಾಣ
ಹುಲಿಗಿ ದರ್ಶನಕ್ಕೆ ಬರುವ ಭಕ್ತರು ರೈಲ್ವೇ ಗೇಟ್‌ನಲ್ಲೇ ವಾಹನ ಸವಾರರು ಗಂಟೆಗಟ್ಟಲೇ ಕಾಯುವಂತಾಯಿತು. ರೈಲು ಸಂಚರಿಸುವಾಗ ಗೇಟ್ ಹಾಕುವುದರಿಂದ ಸಮಸ್ಯೆಯಾಗುತ್ತಿದೆ. ಟ್ರಾಫಿಕ್ ಸಮಸ್ಯೆ ನೀಗಿಸಲು ಈಗಾಗಲೇ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದೆ. ಅದು ಆಮೆಗತಿಯಲ್ಲಿ ಸಾಗಿದೆ. ಇದು ಭಕ್ತರ ಹಾಗೂ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ದೇವಸ್ಥಾನ ಆವರಣದಲ್ಲಿ ಜನಜಂಗುಳಿ
ಹುಣ್ಣಿಮೆ ಅಂಗವಾಗಿ ಭಕ್ತರು ಶುಕ್ರವಾರ ರಾತ್ರಿ ಹುಲಿಗಿ ಕ್ಷೇತ್ರಕ್ಕೆ ಬಂದಿದ್ದರು. ರಾತ್ರಿ ದೇವಸ್ಥಾನ ಹಾಗೂ ಗೋಪುರ ಆವರಣದಲ್ಲಿ ಭಕ್ತರಿಂದ ತುಂಬಿ ತುಳುಕುತ್ತಿತ್ತು.