ಜಿಲ್ಲಾಧಿಕಾರಿಯಿಂದ ಉಪ ಸಮಿತಿ ರಚನೆ

ಕನಕಗಿರಿಯ ವೆಂಕಟಪತಿ ಬಾವಿ
ಕನಕಗಿರಿಯ ವೆಂಕಟಪತಿ ಬಾವಿ
Published on

ಪ್ರಮುಖ ಮುಖ್ಯಾಂಶಗಳು

  • ಐತಿಹಾಸಿಕ ವೆಂಕಟಪತಿ ಬಾವಿ ನಿರ್ವಹಣೆ-ಸಂರಕ್ಷಣೆಗೆ ಕ್ರಮ
ಕನಕಗಿರಿ: ಪಟ್ಟಣದ ಐತಿಹಾಸಿಕ ವೆಂಕಟಪತಿ ಬಾವಿ ನಿರ್ವಹಣೆ ಹಾಗೂ ಸಂರಕ್ಷಣೆ ನಿಟ್ಟಿನಲ್ಲಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯಿಂದ ಉಪ ಸಮಿತಿ ರಚಿಸಿ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಆದೇಶ ಹೊರಡಿಸಿದ್ದಾರೆ.
ಫೆ.3ರಂದು ಪಟ್ಟಣಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿ, ವೆಂಕಟಪತಿ ಬಾವಿಗೆ ಭೇಟಿ ನೀಡಿ ಸ್ಮಾರಕ ರಕ್ಷಣೆ ಹಾಗೂ ನಿರ್ವಹಣೆ ಕುರಿತು ಅಧಿಕಾರಿಗಳು ಹಾಗೂ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡಿದ್ದು, ರಾಜ್ಯ ಸಂರಕ್ಷಣಾ ಸ್ಮಾರಕವಾಗುವವರೆಗೆ ಉಪ ಸಮಿತಿ ರಚಿಸುವುದಾಗಿ ತಿಳಿಸಿದ್ದರು.
ತಹಸೀಲ್ದಾರ್‌ರನ್ನು ಅಧ್ಯಕ್ಷರನ್ನಾಗಿಸಿ ಉಪಸಮಿತಿ ರಚಿಸಿರುವ ಜಿಲ್ಲಾಧಿಕಾರಿ, ಪುರಾತತ್ವ ಇಲಾಖೆಯ ಡಿಡಿ, ತಾಪಂ ಇಒ, ಪಪಂ ಮುಖ್ಯಾಧಿಕಾರಿ, ಜೆಸ್ಕಾಂ ಎಇಇ, ಲೋಕೋಪಯೋಗಿ ಇಲಾಖೆಯ ಎಇಇ ಹಾಗೂ ಗ್ರಾಮೀಣ ಸಿಪಿಐ ಗಂಗಾವತಿ ಸದಸ್ಯರನ್ನಾಗಿಸಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರನ್ನು ಕಾರ್ಯದರ್ಶಿಗಳನ್ನಾಗಿಸಿ ಹಾಗೂ ಸಮಿತಿ ಸೂಚಿಸುವ ಇತರ ಅಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ. ನೇಮಕಗೊಂಡ ಸಮಿತಿ ಸ್ಮಾರಕದಲ್ಲಿ ಪ್ರವಾಸಿಗರ ವಿಡಿಯೋ, ಫೋಟೋಗ್ರಾಫಿಗೆ ಕನಿಷ್ಠ ದರ ನಿಗದಿಪಡಿಸಿ ಶುಲ್ಕವನ್ನು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಖಾತೆಗೆ ಜಮಾ ಮಾಡಬೇಕು. ಸ್ಮಾರಕ ರಕ್ಷಣೆಗೆ ಸಿಸಿ ಕ್ಯಾಮರಾ ಅಳವಡಿಕೆ, ಸೆಕ್ಯೂರಿಟಿ ಗಾರ್ಡ್ ನೇಮಿಸುವುದು, ಸ್ಮಾರಕದ ಸುತ್ತಲೂ ತಂತಿ ಬೇಲಿ ಅಳವಡಿಕೆ, ಪ್ರವಾಸಿಗರಿಗೆ ಮೂಲ ಸೌಲಭ್ಯಗಳಾದ ಕುಡಿವ ನೀರು, ಶೌಚಗೃಹ, ನೆರಳಿನ ವ್ಯವಸ್ಥೆ ಜತೆಗೆ ಸ್ಮಾರಕದ ಪ್ರಚಾರಕ್ಕೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಆದೇಶದಲ್ಲಿ ಸೂಚಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net