ಕೊಪ್ಪಳ: ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಹಾಗೂ ಅವರ ಸುರಕ್ಷತೆಯನ್ನು ಖಚಿತಪಡಿಸಲು ಸರ್ಕಾರದ ಆದೇಶದಂತೆ ಕೊಪ್ಪಳ ನಗರಸಭೆಯಲ್ಲಿ ನಗರ ಮಟ್ಟದ ಮಹಿಳೆಯರ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿಯನ್ನು ರಚಿಸಲಾಗಿದೆ.
ಕೊಪ್ಪಳ ನಗರಸಭೆಯಲ್ಲಿ ಪೌರಾಯುಕ್ತ ವೆಂಕಟೇಶ ಎಂ. ನಾನಗೂರು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಸಮಿತಿಯ ಜವಾಬ್ದಾರಿಗಳು ಹಾಗೂ ಮುಂದಿನ ಕಾರ್ಯಯೋಜನೆಗಳ ಕುರಿತು ತಿಳಿಸಲಾಯಿತು.
ನಗರ ಮಟ್ಟದಲ್ಲಿ ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಮಹಿಳೆ ಮತ್ತು ಮಕ್ಕಳ ಸಾಗಾಣಿಕೆಯನ್ನು ತಡೆಗಟ್ಟಲು ವಿವಿಧ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಬೇಕು. ಮುಂಬರುವ ಬೇಸಿಗೆ ಕಾಲ ಹಾಗೂ ಅಕ್ಷಯ ತೃತೀಯದಂದು ಹೆಚ್ಚಿನ ವಿವಾಹಗಳು ನಡೆಯುವುದರಿಂದ, ಯಾವುದೇ ಕಾರಣಕ್ಕೂ ಅಪ್ರಾಪ್ತ ವಯಸ್ಸಿನ ಮದುವೆಗಳು ಜರುಗದಂತೆ ಕಟ್ಟುನಿಟ್ಟಿನ ನಿಗಾವಹಿಸಲು ಬಾಲ್ಯ ವಿವಾಹ ನಿಷೇಧಾಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.
ನಗರದ ಎಲ್ಲಾ ಸರ್ಕಾರಿ ಕಟ್ಟಡ ಹಾಗೂ ಶಾಲೆಗಳ ಮೇಲೆ ಮಕ್ಕಳ ಸಹಾಯವಾಣಿ 1098 ರ ಬಗ್ಗೆ ಶಾಶ್ವತ ಗೋಡೆ ಬರಹಗಳನ್ನು ಬರೆಸುವುದು. ಎಲ್ಲಾ ಮದುವೆ ಮಂಟಪಗಳು ಹಾಗೂ ಫಂಕ್ಷನ್ ಹಾಲ್ಗಳ ಮೇಲೆ ಬಾಲ್ಯ ವಿವಾಹ ನಿಷೇಧ ಕುರಿತಾದ ಎಚ್ಚರಿಕೆ ಫಲಕ ಅಥವಾ ಗೋಡೆ ಬರಹಗಳನ್ನು ಕಡ್ಡಾಯಗೊಳಿಸುವುದು. ಮಕ್ಕಳು ಸುದೀರ್ಘ ಕಾಲ ಶಾಲೆಗೆ ಗೈರು ಹಾಜರಾಗದಂತೆ ಕ್ರಮ ವಹಿಸಲು ಹಾಗೂ ಶಾಲೆಯಿಂದ ಹೊರಗುಳಿಯುವ ಮಕ್ಕಳ ಬಗ್ಗೆ ನಿಗಾ ಇಡಲು ನಿರ್ಧರಿಸಲಾಯಿತು.
ಶಿಕ್ಷಣ ಇಲಾಖೆ ಸಮನ್ವಯಾಧಿಕಾರಿ ಸೈಯ್ಯದ್ ಮಹಬೂಬ್ ಹುಸೇನ್, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಪ್ರಮೋದ, ಡಾ. ದಿನೇಶ, ಡಾ. ಮಹೇಶ, ಡಾ. ಮಹೇಶ ಉಮಚಗಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪ್ರಶಾಂತ ರೆಡ್ಡಿ, ಪ್ರತಿಭಾ ಕಾಶಿಮಠ, ರವಿ ಬಡಿಗೇರ ಇತರರಿದ್ದರು.