ಪ್ರಭಾವಿಗಳಿಗೆ ವಿನಾಯಿತಿ ಬಡಪಾಯಿಗಳಿಗೆ ಫಜೀತಿ

ಫುಟ್‌ಪಾತ್ ಒತ್ತುವರಿ ತೆರವು ಪ್ರಕರಣದಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿರುವ ನಗರಸಭೆ ಪರಿಸರ ಇಂಜಿನಿಯರ್ ಶರಣಪ್ಪರನ್ನು ವ್ಯಾಪಾರಿಗಳು ಮತ್ತು ಸಾರ್ವಜನಿಕರು ಗಂಗಾವತಿ ಗಾಂಧಿ ವೃತ್ತದಲ್ಲಿ ಬುಧವಾರ ತರಾಟೆ ತೆಗೆದುಕೊಂಡರು.
ಫುಟ್‌ಪಾತ್ ಒತ್ತುವರಿ ತೆರವು ಪ್ರಕರಣದಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿರುವ ನಗರಸಭೆ ಪರಿಸರ ಇಂಜಿನಿಯರ್ ಶರಣಪ್ಪರನ್ನು ವ್ಯಾಪಾರಿಗಳು ಮತ್ತು ಸಾರ್ವಜನಿಕರು ಗಂಗಾವತಿ ಗಾಂಧಿ ವೃತ್ತದಲ್ಲಿ ಬುಧವಾರ ತರಾಟೆ ತೆಗೆದುಕೊಂಡರು.
Published on

ಪ್ರಮುಖ ಮುಖ್ಯಾಂಶಗಳು

  • ಫುಟ್‌ಪಾತ್ ಒತ್ತುವರಿ ತೆರವಲ್ಲಿ ತಾರತಮ್ಯ
  • ಅಧಿಕಾರಿಗಳ ವಿರುದ್ಧ ಬೀದಿಬದಿ ವ್ಯಾಪಾರಿಗಳ ಆಕ್ರೋಶ
ಗಂಗಾವತಿ: ನಗರದ ಫುಟ್‌ಪಾತ್ ಒತ್ತುವರಿ ತೆರವು ಪ್ರಕರಣದಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿರುವ ನಗರಸಭೆ ಅಧಿಕಾರಿಗಳನ್ನು ವ್ಯಾಪಾರಿಗಳು ಮತ್ತು ಸಾರ್ವಜನಿಕರು ಗಾಂಧಿ ವೃತ್ತದಲ್ಲಿ ಬುಧವಾರ ತರಾಟೆ ತೆಗೆದುಕೊಂಡರು.
ಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ನಗರದ ಫುಟ್‌ಪಾತ್ ಒತ್ತುವರಿ ತೆರವುಗೊಳಿಸಿದ್ದ ನಗರಸಭೆ, ಬೀದಿ ಬದಿ ವ್ಯಾಪಾರಿಗಳನ್ನು ಗುಂಡಮ್ಮ ಕ್ಯಾಂಪ್ ಸಿಟಿ ಮಾರುಕಟ್ಟೆಗೆ ಸ್ಥಳಾಂತರಿಸಿತ್ತು. ಸಣ್ಣಪುಟ್ಟ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಿದ್ದ ಅಧಿಕಾರಿಗಳು, ಪ್ರಭಾವಿಗಳ ಕಟ್ಟಡ ಮತ್ತು ವ್ಯಾಪಾರಿ ಮಳಿಗೆಗಳಿಗೆ ವಿನಾಯಿತಿ ನೀಡಿದ್ದಲ್ಲದೇ, ವ್ಯವಹಾರ ನಡೆಸಲು ಅವಕಾಶ ನೀಡಿದ್ದರು. ಮತ್ತೆ ಬೀದಿಗೆ ಬಂದಿದ್ದ ವ್ಯಾಪಾರಿಗಳನ್ನು ಪುನಃ ತೆರವುಗೊಳಿಸಲು ಬಂದ ಪರಿಸರ ಇಂಜಿನಿಯರ್ ಶರಣಪ್ಪ ಮತ್ತು ಆರೋಗ್ಯ ನಿರೀಕ್ಷಕ ಎ.ನಾಗರಾಜ್‌ರನ್ನು ವ್ಯಾಪಾರಿಗಳು ಮತ್ತು ಸಾರ್ವಜನಿಕರು ತೀವ್ರ ತರಾಟೆ ತೆಗೆದುಕೊಂಡರು. ಸಮಜಾಯಿಷಿ ನೀಡಲು ಮುಂದಾದರೂ ವಾಹನಕ್ಕೆ ಅಡ್ಡಲಾಗಿ ನಿಂತು ಗದ್ದಲ ನಡೆಸಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಅಧಿಕಾರಿಗಳು, ಸ್ಥಳದಿಂದ ಪಲಾಯನ ಮಾಡಿದ್ದು, ಇವರ ಹಿಂದೆಯೇ ಸಿಬ್ಬಂದಿಯೂ ಕಾಲ್ಕಿತ್ತರು.
ಪ್ರಭಾವಿಗಳಿಗೆ ವಿನಾಯಿತಿ ನೀಡುವ ನಗರಸಭೆ ಅಧಿಕಾರಿಗಳು ಸಣ್ಣಪುಟ್ಟ ವ್ಯಾಪಾರಿಗಳಿಗೆ ವಿನಾಕಾರಣ ತೊಂದರೆ ನೀಡುತ್ತಿದ್ದಾರೆ. ಹೀಗಾಗಿ ಬೀದಿ ಬದಿ ವ್ಯಾಪಾರಿಗಳ ಕಾಯ್ದೆ ಪ್ರಶ್ನಿಸಿ ಅಧಿಕಾರಿಗಳ ವಿರುದ್ಧ ಕೋರ್ಟ್ ಮೆಟ್ಟೆಲೇರಲಾಗುವುದು ಎಂದು ಸಲೀಂ ಭಾಗವಾನ್, ಮಹ್ಮದ್ ಪಾಷಾ ಇತರರು ತಿಳಿಸಿದರು.
ಪರಿಸರ ಇಂಜಿನಿಯರ್ ಶರಣಪ್ಪ ಮಾತನಾಡಿ, ತಾರತಮ್ಯ ನೀತಿ ಅನುಸರಿಸಿಲ್ಲ. ಸ್ವಯಂ ಪ್ರೇರಣೆಯಿಂದ ತೆರವುಗೊಳಿಸಲು ಮನವಿ ಮಾಡಿದ್ದರಿಂದ ಕಾಲಾವಕಾಶ ನೀಡಿದ್ದು, ಅವುಗಳನ್ನೂ ಬಿಡುವುದಿಲ್ಲ. ಪೌರಾಯುಕ್ತರ ಸೂಚನೆ ಮೇರೆಗೆ ಕೆಲವೊಮ್ಮೆ ತೆರವು ಕೈಬಿಟ್ಟಿದ್ದು, ಅತಿಕ್ರಮಿತ ಕಟ್ಟಡಗಳನ್ನು ಶೀಘ್ರವೇ ತೆರವುಗೊಳಿಸಲಾಗುವುದು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net