ಕೊಪ್ಪಳ: ಜಿಲ್ಲೆಯಲ್ಲಿ ಏ.23 ರಿಂದ ಆರಂಭವಾಗಲಿರುವ 9ನೇ ಸುತ್ತಿನ ಕಾಲು-ಬಾಯಿ ರೋಗ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯ ಪ್ರತಿಯೊಂದು ಜಾನುವಾರಿಗೂ ಕಡ್ಡಾಯವಾಗಿ ಲಸಿಕೆ ತಲುಪಬೇಕು. ಯಾವುದೇ ಒಂದು ಜಾನುವಾರು ಲಸಿಕೆಯಿಂದ ಬಿಟ್ಟು ಹೋಗದಂತೆ ಪಶು ಇಲಾಖೆ ಅಧಿಕಾರಿಗಳು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಸೂಚನೆ ನೀಡಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಸಭೆಯಲ್ಲಿ ಮಾತನಾಡಿದರು.
ಲಸಿಕಾ ಅಭಿಯಾನದ ಯಶಸ್ಸಿಗಾಗಿ ಅಧಿಕಾರಿಗಳು ಮತ್ತು ಲಸಿಕಾದಾರರು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಪ್ರತಿದಿನ ನೀಡಲಾದ ಲಸಿಕೆಯ ವಿವರಗಳನ್ನು ಅಂದೇ ಭಾರತ ಪಶುಧನ ತಂತ್ರಾಂಶ ಆನ್ಲೈನ್ನಲ್ಲಿ ಕಡ್ಡಾಯವಾಗಿ ದಾಖಲಿಸಬೇಕು. ಲಸಿಕೆಯಿಂದ ಒಂದು ವೇಳೆ ಜಾನುವಾರುಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾದಲ್ಲಿ, ತಕ್ಷಣ ಚಿಕಿತ್ಸೆ ನೀಡಲು ಅಗತ್ಯ ಔಫಿಧಗಳನ್ನು ಮೊದಲೇ ದಾಸ್ತಾನು ಮಾಡಿಕೊಳ್ಳಬೇಕು ಎಂದರು.
ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ. ಪಿ.ಎಂ. ಮಲ್ಲಯ್ಯ ಮಾತನಾಡಿ, ಜಿಲ್ಲೆಯಲ್ಲಿ ದನ ಮತ್ತು ಎಮ್ಮೆ ಸೇರಿ ಒಟ್ಟು 2,38,376 ಜಾನುವಾರುಗಳಿವೆ. ಈಗಾಗಲೇ 2.62 ಲಕ್ಷ ಡೋಸ್ ಲಸಿಕೆಯನ್ನು ತಂಪು ಸರಪಳಿಯಲ್ಲಿ ಶೇಖರಿಸಿಡಲಾಗಿದೆ. 3.16 ಲಕ್ಷ ಸೀರಿಂಜ್ ಹಾಗೂ ನೀಡಲ್ಸ್ ಗಳು ಸರಬುರಾಜಾಗಿದ್ದು, ಲಭ್ಯ ಜಾನುವಾರುಗಳ ಸಂಖ್ಯೆಗಳಿಗನುಗುಣವಾಗಿ ಆಯಾ ತಾಲೂಕಿಗೆ ವಿತರಿಸಲಾಗಿರುತ್ತದೆ.
ಏಪ್ರಿಲ್ 23 ರಿಂದ ಮೇ 22 ರವರೆಗೆ ಒಟ್ಟು 30 ದಿನಗಳ ಕಾಲ ಲಸಿಕಾ ಕಾರ್ಯಕ್ರಮ ನಡೆಯಲಿದ್ದು. ಈ ಕಾರ್ಯಕ್ಕಾಗಿ 195 ಲಸಿಕಾದಾರರನ್ನು ನಿಯೋಜಿಸಲಾಗಿದ್ದು. ಪ್ರತಿ 100-120 ಜಾನುವಾರುಗಳಿಗೆ ಒಂದು ಬ್ಲಾಕ್ನಂತೆ ಮೈಕ್ರೋಪ್ಲಾನ್ ಸಿದ್ಧಪಡಿಸಿದೆ ಎಂದು ತಳಿಸಿದರು.
ಮುಖ್ಯ ಪಶುವೈದ್ಯಾಧಿಕಾರಿಗಳಾದ ಡಾ. ಬಸಯ್ಯ ಸಾಲಿ, ಡಾ. ಪ್ರಕಾಶ ಚೂರಿ, ಡಾ. ಜಾಕೀರ ಹುಸೇನ್, ಡಾ. ಆನಂದ ದೇವರನಾವದಗಿ, ಡಾ. ಚನ್ನಬಸಪ್ಪ ಹಳ್ಳದ, ಡಾ. ವಿನೋದ ಕುಮಾರ ದಿವಟರ್, ಕೆಎಂಎಫ್ ಅಧಿಕಾರಿಗಳಾದ ಕಾಸಿಂಸಾಬ್, ಪಶುವೈದ್ಯಕಿಯ ಪರಿವೀಕ್ಷಕರಾದ ಮಹಮ್ಮದ ರಫಿ ಇತರರಿದ್ದರು.