ಯಲಬುರ್ಗಾ: ಬೀದಿನಾಯಿಗಳ ಹಾವಳಿ ನಿಯಂತ್ರಿಸಲು ಪಪಂ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ನಾಯಿಗಳ ಕಾಟಕ್ಕೆ ಕಡಿವಾಣ ಬೀಳಲಿದೆ.
ಪಟ್ಟಣದ ನಿವಾಸಿಗಳು ಬೀದಿ ನಾಯಿಗಳ ಹಾವಳಿಯಿಂದ ರೋಸಿ ಹೋಗಿದ್ದರು. ಶಾಲಾ-ಕಾಲೇಜು ವಿದ್ಯಾರ್ಥಿಗಳು, ವಯೋವೃದ್ಧರು, ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಯಿಗಳಿಂದ ಕಿರಿಕಿರಿ ಅನುಭವಿಸುವಂತಾಗಿತ್ತು. ಮಕ್ಕಳು ಮನೆಯಿಂದ ಶಾಲೆಗೆ ಹೋಗಬೇಕಾದರೆ ಭಯದ ವಾತಾವರಣ ಸೃಷ್ಟಿಯಾಗಿತ್ತು. ಈಗ ಸುಪ್ರೀಂಕೋರ್ಟ್ ಆದೇಶದಂತೆ ಬೀದಿ ನಾಯಿಗಳನ್ನು ಸೆರೆಹಿಡಿದು ರೇಬಿಸ್ ಲಸಿಕೆ ನೀಡಲು ಪಪಂ ಮುಂದಾಗಿದೆ.
ಪ್ರತ್ಯೇಕ ಜಾಗದ ವ್ಯವಸ್ಥೆ
ಬೀದಿ ನಾಯಿಗಳನ್ನು ಸೆರೆ ಹಿಡಿದು ರೇಬಿಸ್ ಲಸಿಕೆ ನೀಡುವ ಮೂಲಕ ಒಂದೆಡೆ ಸೇರಿಸಿ ಆಶ್ರಯ ತಾಣ ನಿರ್ಮಿಸಲು ಸ್ಥಳೀಯ ಪಶು ಚಿಕಿತ್ಸಾಲಯ ಕಚೇರಿ ಹಿಂಭಾಗದಲ್ಲಿ ಪ್ರತ್ಯೇಕ ಜಾಗ ಗುರುತಿಸಲಾಗಿದೆ. ನಾಯಿಗಳ ಸಮೀಕ್ಷೆ ನಡೆಸಲು ವಿವಿಧ ಇಲಾಖೆ ಅಧಿಕಾರಿಗಳ ತಂಡ ರಚಿಸಲಾಗಿದೆ.
200 ಶ್ವಾನಗಳಿಗೆ ರೇಬಿಸ್ ಲಸಿಕೆ
ಈ ಹಿಂದೆ ಪಟ್ಟಣದಲ್ಲಿ 200ಕ್ಕೂ ಅಧಿಕ ಬೀದಿ ನಾಯಿಗಳಿಗೆ ರೇಬಿಸ್ ಲಸಿಕೆ ನೀಡಲಾಗಿದೆ. ನಾಯಿಗಳಿಗೆ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ನೀಡಲು ಪಪಂ ಸಹಯೋಗದಲ್ಲಿ ಪಶುವೈದ್ಯರಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಬಗ್ಗೆ ಸಂಬಂಧಿಸಿದ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು.
ಸಮೀಕ್ಷಾ ಕಾರ್ಯ ಪ್ರಗತಿಯಲ್ಲಿ
ಪಟ್ಟಣ 18 ಸಾವಿರ ಜನಸಂಖ್ಯೆ ಹೊಂದಿದ್ದು, ಇದಕ್ಕೆ ಅನುಗುಣವಾಗಿ ಶೇ.2 ನಾಯಿಗಳ ಪ್ರಮಾಣ ಇರಬೇಕು ಎನ್ನಲಾಗಿದೆ. ಸುಪ್ರೀಂಕೋರ್ಟ್ ಆದೇಶದಂತೆ ಸದ್ಯ ಬೀದಿ ನಾಯಿಗಳ ಸಮೀಕ್ಷಾ ಕಾರ್ಯ ಪ್ರಗತಿಯಲ್ಲಿದೆ. ಒಟ್ಟು 360 ಬೀದಿ ನಾಯಿಗಳು ಇರುವುದು ಖಚಿತವಾಗಿದೆ.
ಬೀದಿ ನಾಯಿಗಳು ಸಾರ್ವಜನಿಕ ಇಲಾಖೆ ಕಚೇರಿಗಳ ಒಳಗೆ ಪ್ರವೇಶಿಸದಂತೆ ಕಾಂಪೌಂಡ್ ನಿರ್ಮಿಸುವಂತೆ ಎಲ್ಲ ಇಲಾಖೆಗಳಿಗೆ ಪತ್ರ ಬರೆಯಲಾಗಿದೆ. ಜತೆಗೆ ಇಲಾಖೆಗೆ ಒಬ್ಬರನ್ನು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲು ಸೂಚಿಸಲಾಗಿದೆ. ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ.
ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಸುಪ್ರೀಂಕೋರ್ಟ್ ಹೊರಡಿಸಿದ ಆದೇಶವನ್ನು ಪಾಲಿಸಲಾಗುತ್ತಿದೆ. ಮಾಂಸದ ಅಂಗಡಿ ಮಾಲೀಕರ ಸಭೆ ನಡೆಸಿ ತ್ಯಾಜ್ಯ ಎಲ್ಲೆಂದರಲ್ಲಿ ಎಸೆಯದಂತೆ ಸೂಚಿಸಲಾಗಿದೆ. ಸಾರ್ವಜನಿಕರಿಗೆ ಅಪಾಯಕಾರಿ ನಾಯಿಗಳು ಕಂಡರೆ ಪಪಂ ಅಧಿಕಾರಿಗಳ ಗಮನಕ್ಕೆ ತರಬೇಕು.