ಒಂದೇ ಕರೆಗೆ ತಪ್ಪಿತು ಐವರ ಬಾಲ್ಯವಿವಾಹ

ಯಲಬುರ್ಗಾ ತಾಲೂಕಿನ ಬೇವೂರು ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿನ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ರಕ್ಷಣೆ ಮಾಡಿದ ತಂಡ.
ಯಲಬುರ್ಗಾ ತಾಲೂಕಿನ ಬೇವೂರು ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿನ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ರಕ್ಷಣೆ ಮಾಡಿದ ತಂಡ.
Published on

ಪ್ರಮುಖ ಮುಖ್ಯಾಂಶಗಳು

  • 1098ರ ತ್ವರಿತ ಕಾರ್ಯಾಚರಣೆ
ಕೊಪ್ಪಳ : ಜಿಲ್ಲೆಯಲ್ಲಿ ಬಾಲ್ಯವಿವಾಹದ ವಿರುದ್ಧದ ಕಾರ್ಯಾಚರಣೆ ಚುರುಕುಗೊಂಡಿದ್ದು, ಮಕ್ಕಳ ಸಹಾಯವಾಣಿ 1098ಕ್ಕೆ ಬಂದ ಕರೆಯಿಂದಾಗಿ ಕೇವಲ ಎರಡೇ ದಿನಗಳಲ್ಲಿ ಐವರು ಅಪ್ರಾಪ್ತ ಬಾಲಕಿಯರನ್ನು ಬಾಲ್ಯವಿವಾಹದ ದವಡೆಯಿಂದ ರಕ್ಷಿಸಲಾಗಿದೆ.
ಯಲಬುರ್ಗಾ ತಾಲೂಕಿನ ಬೇವೂರು ಪೊಲೀಸ್​ ಠಾಣೆ ವ್ಯಾಪ್ತಿಯ ಇಬ್ಬರು, ಯಲಬುರ್ಗಾ ಠಾಣೆ ವ್ಯಾಪ್ತಿಯ ಒಬ್ಬರು ಹಾಗೂ ಕಾರಟಗಿ ತಾಲೂಕಿನ ಇಬ್ಬರು ಬಾಲಕಿಯರ ಮದುವೆ ಸಿದ್ಧತೆ ನಡೆದಿರುವ ಬಗ್ಗೆ ಸಹಾಯವಾಣಿಗೆ ಮಾಹಿತಿ ಬಂದ ಹಿನ್ನಲೆಯಲ್ಲಿ. ತಕ್ಷಣ ಕಾರ್ಯಪ್ರವೃತ್ತರಾದ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಅಕ್ಕಪಡೆ, 112 ಪೊಲೀಸ್​ ಸಿಬ್ಬಂದಿ ಹಾಗೂ ಪಂಚಾಯತ್​ ಅಧಿಕಾರಿಗಳ ತಂಡ ದಾಳಿ ನಡೆಸಿ ಮಕ್ಕಳನ್ನು ರಕ್ಷಿಸಿದೆ. ರಕ್ಷಿಸಲ್ಪಟ್ಟ ಮಕ್ಕಳನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಗಿದೆ..
ಜಿಲ್ಲೆಯಲ್ಲಿ ಇತ್ತೀಚೆಗೆ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಈಗ ವಿವಾಹ ಮುಹೂರ್ತಗಳು ಆರಂಭವಾಗಿರುವ ಹಿನ್ನೆಲೆ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್​ ಮಟ್ಟದ ಬಾಲ್ಯ ವಿವಾಹ ನಿಷೇಧಾಧಿಕಾರಿಗಳು ಹಾಗೂ ಸಂಬಂಧಿತ ಅಧಿಕಾರಿಗಳು ವಧು-ವರರ ವಯಸ್ಸಿನ ದೃಢೀಕರಣವನ್ನು ಕಡ್ಡಾಯವಾಗಿ ಪರಿಶೀಲಿಸಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿಂಧು ಅಂಗಡಿ ತಿಳಿಸಿದರು.
ಕಾರ್ಯಾಚರಣೆಯಲ್ಲಿ ಬಸವರಾಜ ಗುಳೇದ್​, ಅಮರಮ್ಮ ಹಿರೇಮಠ, ಬಸಮ್ಮ ಎಸ್​., ಶ್ರೀದೇವಿ, ಸವಿತಾ ಹಾಗೂ ಅಕ್ಕಪಡೆಯ ಸಿಬ್ಬಂದಿಗಳು ಭಾಗವಹಿಸಿದ್ದರು.

ಸಹಾಯವಾಣಿಗೆ ಕರೆ ಮಾಡಿ

ಮಕ್ಕಳ ಮೇಲಿನ ದೌರ್ಜನ್ಯ ಅಥವಾ ಬಾಲ್ಯವಿವಾಹದ ಬಗ್ಗೆ ಮಾಹಿತಿ ಇದ್ದಲ್ಲಿ ತಕ್ಷಣ ಉಚಿತ ಸಹಾಯವಾಣಿ ಸಂಖ್ಯೆ 1098 ಕ್ಕೆ ಕರೆ ಮಾಡಿ ಮಾಹಿತಿ ನೀಡಿ.
"

ವಧು-ವರರ ವಯಸ್ಸಿನ ದಾಖಲೆಗಳನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ವಧುವಿಗೆ 18 ಹಾಗೂ ವರನಿಗೆ 21 ವರ್ಷ ಪೂರ್ತಿಯಾಗಿರುವುದನ್ನು ಖಚಿತಪಡಿಸಿಕೊಂಡ ನಂತರವೇ ವಿವಾಹಕ್ಕೆ ಅನುಮತಿ ನೀಡಬೇಕು. ಒಂದು ವೇಳೆ ನಿಯಮ ಉಲ್ಲಂಘಿಸಿ ಬಾಲ್ಯವಿವಾಹ ನಡೆಸಲು ಮುಂದಾದರೆ, ಅಂತಹ ವಿವಾಹದ ಆಯೋಜಕರು ಮತ್ತು ಅದರಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net