ಯಲಬುರ್ಗಾದ ಚನ್ನಮ್ಮ ಸರ್ಕಲ್‌ನಲ್ಲಿ ಕ್ರಾಂತಿಕಾರಿ ಕಿಸಾನ್ ಸೇನೆಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು. ರಾಷ್ಟ್ರೀಯ ಅಧ್ಯಕ್ಷ ಎಂ.ಎನ್.ಕುಕನೂರು, ಜಿಲ್ಲಾ ಉಪಾಧ್ಯಕ್ಷ ಹನುಮಪ್ಪ ವಿ., ಜಿಲ್ಲಾ ಯುವ ಘಟಕದ ಅಧ್ಯಕ್ಷ ಎಂ.ಡಿ.ಅಮನ್ ಖಾಜಿ, ತಾಲೂಕು ಅಧ್ಯಕ್ಷ ಅಜ್ಮೀರ್ ಎಸ್.ಮ್ಯಾಗೇರಿ, ಮಹಿಳಾ ಘಟಕದ ಅಧ್ಯಕ್ಷೆ ಯಲ್ಲಮ್ಮ ರಾಠೋಡ್ ಇತರರಿದ್ದರು.
ಯಲಬುರ್ಗಾ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನೆಯಿಂದ ಪ್ರತಿಭಟನೆ ನಡೆಸಲಾಯಿತು.
ಕನಕದಾಸ ಸರ್ಕಲ್‌ನಿಂದ ಚನ್ನಮ್ಮ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ರೈತರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಘೋಷಣೆ ಕೂಗಿದರು. ಕಿಸಾನ್ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಎಂ.ಎನ್.ಕುಕನೂರು ಮಾತನಾಡಿ, ರೈತರು ಬೆಳೆನಷ್ಟ, ಸಾಲಬಾಧೆ, ನೀರಾವರಿ ಸಮಸ್ಯೆ ಹಾಗೂ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗದೆ ಸಮಸ್ಯೆ ಎದುರಿಸುತ್ತಿದ್ದಾರೆ. ಸರ್ಕಾರ ರೈತರ ಪ್ರಮುಖ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ಬೆಳೆನಷ್ಟ ಪರಿಹಾರ, ಸಾಲಮನ್ನಾ ಹಾಗೂ ಸಮರ್ಪಕ ನೀರಾವರಿ ಸೌಲಭ್ಯ ಕಲ್ಪಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ತುಂಗಭದ್ರಾ ಜಲಾಶಯದ ಹೂಳು ತೆರವುಗೊಳಿಸಿ, ಕಾಲುವೆಗಳ ದುರಸ್ತಿ ಮಾಡಬೇಕು. ಕೃಷಿ ಭೂಮಿ ಸ್ವಾಧೀನಪಡಿಸಿಕೊಳ್ಳುವಾಗ ರೈತರ ಹಕ್ಕುಗಳನ್ನು ರಕ್ಷಿಸಿ ನ್ಯಾಯಸಮ್ಮತ ಪರಿಹಾರ ನೀಡಬೇಕು. ಯುವಕರಿಗೆ ಪಾರದರ್ಶಕವಾಗಿ ಸರ್ಕಾರಿ ನೇಮಕಾತಿ ಹಾಗೂ ಉದ್ಯೋಗಾವಕಾಶ ಕಲ್ಪಿಸಬೇಕು. ಸರ್ಕಾರ ರೈತರ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಕಾಲಮಿತಿಯಲ್ಲಿ ಪರಿಹಾರ ಕ್ರಮ ಕೈಗೊಳ್ಳಬೇಕು. ಸೂಕ್ತ ಸ್ಪಂದನೆ ದೊರೆಯದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ತಹಸೀಲ್ದಾರ್ ಪ್ರಕಾಶ ನಾಶಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲಾ ಉಪಾಧ್ಯಕ್ಷ ಹನುಮಪ್ಪ ವಿ., ಜಿಲ್ಲಾ ಯುವ ಘಟಕದ ಅಧ್ಯಕ್ಷ ಎಂ.ಡಿ.ಅಮನ್ ಖಾಜಿ, ಕನಕಪ್ಪ, ನಾಗರಾಜ, ರಾಮಣ್ಣ, ಮಾರುತಿ ಗೌಡ, ದ್ಯಾಮಣ್ಣ, ಹನುಮಪ್ಪ, ಪ್ರವೀಣ, ಖಾಜಾವಳಿ ಇತರರಿದ್ದರು.