ಕೊಪ್ಪಳ ತಾಲೂಕಿನ ಗಿಣಿಗೇರಾ ಗ್ರಾಮದಲ್ಲಿ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಹಾಗೂ ಕೆ.ಎಸ್.ಆಸ್ಪತ್ರೆ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅಭಿನವ ಶ್ರೀ ಕರಿಬಸವ ಶಿವಾಚಾರ್ಯ ಉದ್ಘಾಟಿಸಿದರು. ಶ್ರೀ ಅಭಿನವ ಶ್ರೀಕಂಠ ಸ್ವಾಮಿ, ಡಾ.ಬಸವರಾಜ ಕ್ಯಾವಟರ್, ಗೂಳಪ್ಪ ಹಲಗೇರಿ, ಗಣೇಶ ಹೊರತಟ್ನಾಳ, ವೆಂಕಟೇಶ ಬಾರಕೇರ, ಕರಿಯಪ್ಪ ಮೇಟಿ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಗಿಣಿಗೇರಾದಲ್ಲಿ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ
ವಿಜಯವಾಣಿ ಬಳಗಕ್ಕೆ ಮೆಚ್ಚುಗೆ ಸೂಚಿಸಿದ ಗಣ್ಯರು
ಕೊಪ್ಪಳ : ತಾಲೂಕಿನ ಗಿಣಿಗೇರಾದ ಗ್ರಾಮದಲ್ಲಿ ಕನ್ನಡದ ನಂ.1 ದಿನಪತ್ರಿಕೆ ಕೆ.ಎಸ್.ಆಸ್ಪತ್ರೆ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿರೀಕ್ಷೆ ಮೀರಿ ಯಶಸ್ವಿಯಾಯಿತು. ಗ್ರಾಮದ ಪ್ರಮುಖರು, ಶಾಲಾ-ಕಾಲೇಜು ಮಕ್ಕಳು ಸೇರಿ ನೂರಾರು ಜನರು ಭಾಗಿಯಾಗಿ ನಿತ್ಯ ಜೀವನದಲ್ಲಿ ಯೋಗಭ್ಯಾಸ ಅಳವಡಿಸಿಕೊಳ್ಳುವ ಶಪಥ ಮಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಕುಷ್ಟಗಿ ತಾಲೂಕಿನ ನಿಡಶೇಸಿಯ ಗೆಜ್ಜೆಭಾವಿ ಪಶ್ವಕಂತಿ ಸಂಸ್ಥಾನ ಮಠದ ಅಭಿನವ ಶ್ರೀ ಕರಿಬಸವ ಶಿವಾಚಾರ್ಯ ಆಶೀರ್ವಚನ ನೀಡಿ, ಜೀವಾತ್ಮ ಮತ್ತು ಪರಮಾತ್ಮನನ್ನು ಒಂದುಗೂಡಿಸುವುದೇ ಯೋಗ. ಜಗತ್ತು ಭಾರತವನ್ನು ಗೌರವಿಸುವುದು ಇಂಥ ಜ್ಞಾನ ಕೊಡುಗೆಯಾಗಿ ನೀಡಿದ್ದಕ್ಕೆ. ಯೋಗವೆಂದರೇ ಕೇವಲ ಆಸನ ಮಾಡುವುದಲ್ಲ. ಜೀವನ ಕ್ರಮ. ದುಶ್ಚಟದಿಂದ ದೂರವಿದ್ದು ಆರೋಗ್ಯಕರ ಜೀವನ ನಮ್ಮದಾಗಿಸಿಕೊಳ್ಳಬೇಕು. ಜೂನ್ 21ರಂದು ಮಾತ್ರ ಯೋಗ ಮಾಡಬೇಡಿ. ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಗಿಣಿಗೇರಾ ಆನೆಗೊಂದಿ ಮಠದ ಶ್ರೀ ಅಭಿನವ ಶ್ರೀಕಂಠ ಸ್ವಾಮಿ ಮಾತನಾಡಿ, ಕಾರ್ಖಾನೆ ಗ್ರಾಮವನ್ನು ಯೋಗಧಾಮವನ್ನಾಗಿಸಿದ ವಿಜಯವಾಣಿ ಬಳಗಕ್ಕೆ ಧನ್ಯವಾದಗಳು. ಆರ್ಥಿಕತೆಯಿಂದ ಸಮೃದ್ಧವಾಗಿರುವುದು ನಿಜವಾದ ಶ್ರೀಮಂತಿಕೆ ಅಲ್ಲ. ಸಂಸತಿ, ಜ್ಞಾನದಿಂದ ಭಾರತ ಶ್ರೀಮಂತವಾಗಿದೆ. ಹಳ್ಳಿ ಹಳ್ಳಿಗೂ ಯೋಗ ತಲುಪಬೇಕು. ದೇಹ ನಶ್ವರವಲ್ಲ. ಅದೊಂದು ದೇವಾಲಯದಂತೆ ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಪಾಶ್ಚಾತ್ಯ ಅನುಕರಣೆ ಹೆಚ್ಚುತ್ತಿದೆ. ಆದರೂ ನಮ್ಮ ಆತ್ಮ ಭಾರತೀಯನಾಗಿರಬೇಕು ಎಂದು ಕಿವಿ ಮಾತು ಹೇಳಿದರು.
ಕೆ.ಎಸ್.ಆಸ್ಪತ್ರೆ ಮುಖ್ಯಸ್ಥ ಡಾ.ಬಸವರಾಜ ಕ್ಯಾವಟರ್ ಮಾತನಾಡಿ, ಯೋಗ ನಮ್ಮ ಸಂಸತಿ. ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ಪೂರ್ವಜರು ನಮಗೆ ಅದನ್ನು ಕೊಡುಗೆಯಾಗಿ ನೀಡಿದ್ದಾರೆ. ಪ್ರತಿ ವರ್ಷ ವಿಜಯವಾಣಿ ಸಹಯೋಗದೊಂದಿಗೆ ಯೋಗ ದಿನ ಆಚರಿಸಲಾಗುತ್ತಿದೆ. ಇಂದು ಆರೋಗ್ಯ ಬಹು ಮುಖ್ಯ. ಎಲ್ಲರೂ ಕಾಪಾಡಿಕೊಳ್ಳಿ ಎಂದರು.
ಯೋಗಾಭ್ಯಾಸದಲ್ಲಿ ಗ್ರಾಮದ ಯುವಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮುಖಂಡರು, ವಿವಿಧ ಸಂಘ, ಸಂಸ್ಥೆಯ ನೂರಾರು ಜನರು ಭಾಗಿಯಾದರು. ಯೋಗ ಪಟುಗಳು ಯೋಗ ನೃತ್ಯ ಪ್ರದರ್ಶಿಸಿದರು. ಯೋಗ ಪ್ರದರ್ಶನದಲ್ಲಿ ಭಾಗಿಯಾದ ಅತಿ ಕಿರಿಯ ಹಾಗೂ ಹಿರಿಯ ವ್ಯಕ್ತಿಗಳಿಗೆ ಬಹುಮಾನ ವಿತರಿಸಲಾಯಿತು. ಡಾ.ಭಾಗ್ಯಶ್ರೀ ಯೋಗಭ್ಯಾಸ ನಡೆಸಿಕೊಟ್ಟರು. ಯೋಗದ ಸ್ಥಳದಲ್ಲೇ ತೆಗೆದ ಚಿತ್ರದ ವಾಟ್ಸಾಪ್ ಸ್ಟೇಟಸ್ಗೆ ಹೆಚ್ಚು ವೀವ್ಹ್ ಪಡೆದ ಶಂಕರಗೌಡ ಎಂಬುವವರಿಗೆ ನೆನಪಿನ ಕಾಣಿಕೆ ವಿತರಿಸಲಾಯಿತು.