ಕನಕಗಿರಿ: ರಾಜ್ಯದ ‘ಎ’ ಗ್ರೇಡ್ ದೇವಸ್ಥಾನಗಳಲ್ಲಿ ಒಂದಾದ ಇಲ್ಲಿನ ಶ್ರೀ ಕನಕಾಚಲ ದೇವಸ್ಥಾನಕ್ಕೆ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ಆದಾಯವು ಸಹ ಹೆಚ್ಚುತಿದೆ. ಆದರೆ, ಬರುವ ಭಕ್ತರಿಗೆ ಮೂಲ ಸೌಲಭ್ಯಗಳ ಕೊರತೆ ಜತೆಗೆ ಅಭಿವೃದ್ಧಿಯೂ ಗೌಣವಾಗಿದೆ.
ಕನಕಗಿರಿ ಪಟ್ಟಣದಲ್ಲಿ ದಾಸೋಹಕ್ಕಾಗಿ ಶೆಡ್ ಕಾಮಗಾರಿ ಪ್ರಗತಿಯಲ್ಲಿರುವುದು.
ಕಣ್ಣಿದ್ದವರು ಕನಕಗಿರಿ ನೋಡಬೇಕೆಂಬ ನಾಣ್ಣುಡಿಯಂತೆ ಕನಕಾಚಲಪತಿ ದೇವಸ್ಥಾನವು ಧಾರ್ಮಿಕ ಪ್ರಸಿದ್ಧ ದೇವಸ್ಥಾನವಾಗಿದೆ. ನೆರೆಯ ಜಿಲ್ಲೆಗಳಲ್ಲದೇ, ಅಕ್ಕ ಪಕ್ಕದ ರಾಜ್ಯದ ಅಪಾರ ಭಕ್ತಗಣವನ್ನು ಈ ದೇವಸ್ಥಾನ ಹೊಂದಿದೆ.
ದೇವಸ್ಥಾನವು ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದ್ದು, ತಹಸೀಲ್ದಾರ್ ಅವರೇ ಪ್ರಭಾರ ಕಾರ್ಯನಿರ್ವಾಹಕಾಧಿಕಾರಿಗಳಾಗಿದ್ದಾರೆ. ದೇವಸ್ಥಾನಕ್ಕೆ ಭಕ್ತರ ಸಂಖ್ಯೆ ಹೆಚ್ಚಾದಂತೆ ತೆಂಗಿನಕಾಯಿ, ಸಂತೆ ಕರ, ಕುಂಕುಮ ಸೇರಿ ನಾನಾ ಮೂಲಗಳಿಂದ ಆದಾಯವು ಸಹ ಹೆಚ್ಚಾಗುತ್ತಾ ಸಾಗಿದೆ. 2025-26ನೇ ಸಾಲಿನಲ್ಲಿ ಆದಾಯವು ಕೋಟಿ ರೂ.ಗಳನ್ನು ದಾಟಿದೆ. ಅಭಿವೃದ್ಧಿ ಮಾತ್ರ ಕುಂಠಿತವಾಗಿದ್ದು, ದೇವಸ್ಥಾನದಲ್ಲಿ ಪ್ರತಿ ವರ್ಷ ಉಳಿದ ಹಣ ಬ್ಯಾಂಕ್ ಖಾತೆಗೆ ಸೇರುತ್ತಿದೆ.
ದೇವಸ್ಥಾನ ವ್ಯಾಪ್ತಿಯಲ್ಲಿ 2 ಯಾತ್ರಿ ನಿವಾಸಗಳಿದ್ದು, ಒಂದು ಯಾತ್ರಿ ನಿವಾಸವು ತಹಸಿಲ್ ಕಚೇರಿಗೆ ಬಳಕೆಯಾಗುತ್ತಿದೆ. ಇನ್ನೊಂದು ಯಾತ್ರಿ ನಿವಾಸವಿದ್ದು, ನೂರಾರು ಸಂಖ್ಯೆಯಲ್ಲಿ ಭಕ್ತರು ಬಂದರೆ ಉಳಿದುಕೊಳ್ಳಲು ಸಾಕಾಗುವುದಿಲ್ಲ. ಇದರಿಂದ ದೇವಸ್ಥಾನದ ಪ್ರಾಂಗಣದಲ್ಲಿ ಉಳಿದುಕೊಳ್ಳಬೇಕಾದ ಅನಿವಾರ್ಯತೆಯಿದೆ. ಯಾತ್ರಿ ನಿವಾಸದಲ್ಲಿ ಕೆಲ ಕೊಠಡಿಗಳು ಭಕ್ತರಿಗೆ ದೊರೆಯುತ್ತಿದ್ದರೂ ಸಹ ಅವು ಲಾಡ್ಜ್ ದರಕ್ಕಿಂತ ಹೆಚ್ಚಿನ ಬಾಡಿಗೆ ದರ ನಿಗದಿಗೊಳಿಸಿರುವುದರಿಂದ ಭಕ್ತರು ಹಿಂದೇಟು ಹಾಕುತ್ತಿದ್ದಾರೆ ಎನ್ನುವ ಮಾತುಗಳು ಭಕ್ತರಿಂದ ಕೇಳಿಬಂದಿವೆ.
ದೇವಸ್ಥಾನ ಪ್ರಾಂಗಣದಲ್ಲಿ ಹತ್ತಾರು ಸಂಖ್ಯೆಯಲ್ಲಿ ಭಕ್ತರು ಬಂದು ತಂಗಿದರೆ ಸ್ನಾನ ಹಾಗೂ ಶೌಚಗೃಹಗಳು ಭಕ್ತರ ಸಂಖ್ಯೆಗೆ ಅನುಗುಣವಾಗಿ ಇಲ್ಲವಾಗಿದೆ. ಇದರಿಂದ ಬಯಲಿಗೆ ಶೌಚ ಹಾಗೂ ಸ್ನಾನ ಮಾಡಬೇಕಾಗಿದೆ ಎನ್ನುವ ಆರೋಪಗಳು ಕೇಳಿಬಂದಿವೆ. ಎಲ್‌ಐಸಿಯವರು ನೀಡಿದ ಶುದ್ಧ ಕುಡಿವ ನೀರಿನ ಘಟಕ ಹಾಳಾಗಿದ್ದು, ದುರಸ್ತಿಗೆ ದೇವಸ್ಥಾನ ಮಂಡಳಿ ಮುಂದಾಗಿಲ್ಲ. ಉದ್ಘಾಟನೆಗೊಳ್ಳದ ದಾಸೋಹ ಭವನ: ದೇವಸ್ಥಾನದ ಆಗ್ನೇಯ ದಿಕ್ಕಿಗೆ ಕೆಆರ್‌ಐಡಿಎಲ್‌ನಿಂದ ನಿರ್ಮಾಣ ಮಾಡಲಾಗಿರುವ ದಾಸೋಹ ಮಂದಿರ ಹಸ್ತಾಂತರವಾಗದೇ ಭಕ್ತರು ಪ್ರಾಂಗಣದ ಬಯಲಲ್ಲೇ ಪ್ರಸಾದ ಸ್ವೀಕರಿಸಬೇಕಾದ ಅನಿವಾರ್ಯತೆಯಿದೆ. ಇತ್ತೀಚೆಗೆ ದಾಸೋಹಕ್ಕೆಂದು ಮತ್ತೊಂದು ಶೆಡ್ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ.
ಲೆಕ್ಕವೇ ತೋರಿಸಲ್ಲ
ದೇವಸ್ಥಾನಕ್ಕೆ ಬಂದ ದವಸ ಧಾನ್ಯವನ್ನು ಮಾರಾಟ ಮಾಡಿದ್ದು, ಅದರ ಲೆಕ್ಕವನ್ನು ಅಧಿಕಾರಿಗಳು ತೋರಿಸುತ್ತಿಲ್ಲ. ಅಲ್ಲದೇ, ರಥದ ಮನೆಯ ಕಬ್ಬಿಣ ಮಾರಾಟದ ಲೆಕ್ಕವನ್ನು ಸಿಬ್ಬಂದಿ ಖಾತೆಯಲ್ಲಿ ನಮೂದಿಸಿಲ್ಲ ಎನ್ನುವ ಆರೋಪಗಳು ಭಕ್ತರಿಂದ ಕೇಳಿಬಂದಿವೆ.
ವಾರ್ಷಿಕ ಆದಾಯ ಮತ್ತು ಖರ್ಚು
12020-21ರಲ್ಲಿ 37,98,914 ರೂ.40,56,960 ರೂ.
22021-22ರಲ್ಲಿ 69,49,610 ರೂ.35,18,230 ರೂ.
32022-23ರಲ್ಲಿ 96,85,465 ರೂ.94,79,698 ರೂ.
42023-24ರಲ್ಲಿ 76,67,653 ರೂ.49, 59, 204 ರೂ.
52024-25ರಲ್ಲಿ 1,19,36,199 ರೂ.93,86,027 ರೂ.
62025 ನ.30ರವರೆಗೆ 65,50,572 ರೂ. 33, 82, 394 ರೂ.
"
ದೇವಸ್ಥಾನ ಅವೃದ್ಧಿಗಾಗಿ ಧಾರ್ಮಿಕ ದತ್ತಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸ ಲಾಗುವುದು. ಅನುಮೋದಿಸಿದರೆ ದೇವಸ್ಥಾನಕ್ಕೆ ಅಭಿವೃದ್ಧಿಪಡಿಸಿ ಭಕ್ತರಿಗೆ ಅನುಕೂಲ ಮಾಡಿಕೊಡಲಾಗುವುದು. ಯಾತ್ರಿ ನಿವಾಸದ ಬಾಡಿಗೆ ದರದ ಬಗ್ಗೆ ಪರಿಶೀಲಿಸಲಾಗುವುದು.