ಕನ್ನಡ ಉಳಿಸಿ-ಬೆಳೆಸಲು ಎಲ್ಲರೂ ಶ್ರಮಿಸಿ

ಹಿರೇಮನ್ನಾಪೂರದಲ್ಲಿ ಆಯೋಜಿಸಿದ್ದ ಕೊಪ್ಪಳ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಾಹಿತಿ, ರಾಜ್ಯಸಭಾ ಮಾಜಿ ಸದಸ್ಯ ಎಲ್. ಹನುಮಂತಯ್ಯ ಉದ್ಘಾಟಿಸಿದರು. ಸಮ್ಮೇಳನ ಸರ್ವಾಧ್ಯಕ್ಷ ಶೇಖರಗೌಡ ಮಾಲಿಪಾಟೀಲ್, ಹಿರಿಯ ಸಾಹಿತಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ, ಆರ್.ಜಿ. ಹಳ್ಳಿ ನಾಗರಾಜ್, ಶಾಸಕ ದೊಡ್ಡನಗೌಡ ಪಾಟೀಲ್, ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಪೂರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಯಾದವ, ಸಾಹಿತಿ ಲಿಂಗಾರಡ್ಡಿ ಆಲೂರು ಇತರರಿದ್ದರು.
ಹಿರೇಮನ್ನಾಪೂರದಲ್ಲಿ ಆಯೋಜಿಸಿದ್ದ ಕೊಪ್ಪಳ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಾಹಿತಿ, ರಾಜ್ಯಸಭಾ ಮಾಜಿ ಸದಸ್ಯ ಎಲ್. ಹನುಮಂತಯ್ಯ ಉದ್ಘಾಟಿಸಿದರು. ಸಮ್ಮೇಳನ ಸರ್ವಾಧ್ಯಕ್ಷ ಶೇಖರಗೌಡ ಮಾಲಿಪಾಟೀಲ್, ಹಿರಿಯ ಸಾಹಿತಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ, ಆರ್.ಜಿ. ಹಳ್ಳಿ ನಾಗರಾಜ್, ಶಾಸಕ ದೊಡ್ಡನಗೌಡ ಪಾಟೀಲ್, ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಪೂರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಯಾದವ, ಸಾಹಿತಿ ಲಿಂಗಾರಡ್ಡಿ ಆಲೂರು ಇತರರಿದ್ದರು.
Published on
ಕುಷ್ಟಗಿ: ಕನ್ನಡ ಉಳಿಸಿ ಬೆಳೆಸುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಶಾಸಕ ದೊಡ್ಡನಗೌಡ ಎಚ್.ಪಾಟೀಲ್ ಹೇಳಿದರು.
ಹಿರೇಮನ್ನಾಪೂರ ಗ್ರಾಮದಲ್ಲಿ ಕೊಪ್ಪಳ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನ ನಿಮಿತ್ತ ಶನಿವಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕನ್ನಡ ಪರ ಕೆಲಸಕ್ಕೆ ಎಲ್ಲರೂ ಕೈಜೋಡಿಸಬೇಕು. ಸಮ್ಮೇಳನ ಯಶಸ್ಸಿಗೆ ಸರ್ವರ ಸಹಕಾರ ಅಗತ್ಯ ಎಂದರು.
ಪರಿಷತ್ ಧ್ವಜಾರೋಹಣವನ್ನು ಕಸಾಪ ಜಿಲ್ಲಾ ಅಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್, ಕನ್ನಡ ಧ್ವಜಾರೋಹಣ ಕಸಾಪ ತಾಲೂಕು ಅಧ್ಯಕ್ಷ ಲೆಂಕಪ್ಪ ವಾಲಿಕಾರ ನೆರವೇರಿಸಿದರು.

ಸಮ್ಮೇಳನ ಸರ್ವಾಧ್ಯಕ್ಷ ಶೇಖರಗೌಡ ಮಾಲಿಪಾಟೀಲ್, ಕಸಾಪ ಹೋಬಳಿ ಘಟಕದ ಅಧ್ಯಕ್ಷರಾದ ಶಿವಾನಂದ ಹಿರೇಮಠ, ಮಂಜುನಾಥ ಗುಳೆದಗುಡ್ಡ, ಪದಾಧಿಕಾರಿಗಳಾದ ರಮೇಶ ಕುಲಕರ್ಣಿ, ಎಸ್.ಜಿ. ಕಡೇಮನಿ, ರವೀಂದ್ರ ಬಾಕಳೆ, ಅಬ್ದುಲ್ ಕರೀಂ ವಂಟೆಳಿ, ಶರಣಪ್ಪ ಲೈನದ್, ವೀರೇಶ ಟೆಂಗುಂಟಿ, ವೀರಬಸಯ್ಯ ಕಾಡಗಿಮಠ, ಪ್ಯಾಟೆಪ್ಪ ಸೂಡಿ, ದೊಡ್ಡಬಸಯ್ಯ ಹಿರೇಮಠ, ಮರಿಯಪ್ಪ ಮಾದರ, ಸಣ್ಣೆಪ್ಪ ಲೈನದ್, ಶಿವಪುತ್ರಪ್ಪ ಗುರಿಕಾರ, ಶಂಕ್ರಪ್ಪ ತೋಟದ, ಬಸವರಾಜ ಗುರಿಕಾರ, ಪ್ರಲ್ಹಾದ ದಾಸರ ಇತರರಿದ್ದರು.ರ ಸಮಸ್ಯೆ ಗಂಭೀರ ಪರಿಗಣಿಸಲಿ

ಶಿವಯೋಗಿ ಶಂಕರಲಿಂಗ ಪ್ರಧಾನ ವೇದಿಕೆ ಹಿರೇಮನ್ನಾಪೂರ

ಮಳೆ ಅಭಾವದಿಂದ ರೈತರು ತುಂಬಾ ಸಂಷ್ಟದಲಿದ್ದು, ಸರ್ಕಾರಗಳು ಕೂಡಲೇ ಬೆಳೆ ಹಾನಿ ಪರಿಹಾರ, ವಿಮಾ ಮೊತ್ತ ನೀಡಬೇಕು ಎಂದು ಸಮ್ಮೇಳನ ಸರ್ವಾಧ್ಯಕ್ಷ ಶೇಖರಗೌಡ ಮಾಲಿಪಾಟೀಲ್ ಒತ್ತಾಯಿಸಿದರು.

ಹಿರೇಮನ್ನಾಪುರದಲ್ಲಿ ಶನಿವಾರ ಆರಂಭವಾದ ಕೊಪ್ಪಳ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷರ ನುಡಿಗಳನ್ನಾಡಿದರು. ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಸರ್ಕಾರಗಳು ಗಂಭೀರವಾಗಿ ಪರಿಗಣಿಸಬೇಕು. ಅವರು ಬೆಳೆದ ಬೆಳೆಗಳಿಗೆ ಲಾಭದಾಯಕ ಬೆಲೆ ನಿಗದಿ ಮಾಡಬೇಕು. ನವಲಿ ಸಮಾನಾಂತರ ಜಲಾಶಯ ನಿರ್ಮಾಣ ಮಾಡಬೇಕು. ಜಿಲ್ಲೆಯ ಎಲ್ಲ ತಾಲೂಕುಗಳಿಂದ ರಾಜ್ಯದ ವಿವಿಧ ಭಾಗಗಳಿಗೆ ರೈಲು ಸಂಚಾರ ಆರಂಭಿಸಬೇಕು. ಕೊಪ್ಪಳ ವಿವಿಗೆ ಅನುದಾನ ಮರು ಮಂಜೂರು ಮಾಡಬೇಕು. ಕುಷ್ಟಗಿಯಲ್ಲಿ ಬಿಎಸ್‌ಸಿ ಕೋರ್ಸ್ ಹಾಗೂ ಉನ್ನತ ಶಿಕ್ಷಣಕ್ಕಾಗಿ ಸ್ನಾತಕೋತ್ತರ ಕೇಂದ್ರ ತೆರೆಯಬೇಕು. ಮಹಿಳೆಯರಿಗೆ ಸ್ವ ಉದ್ಯೋಗ ಮಾಡಲು ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಬೇಕು ಎಂದು ಒತ್ತಾಯಿಸಿದರು. ಸರ್ಕಾರದ ಯೋಜನೆಗಳನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಜಾರಿಗೆ ತರಬೇಕೆಂದು ಆಗ್ರಹಿಸಿದರು.

ಹಿರೇಬೆಣಕಲ್ ಮೊರೇರ್ ಸ್ಮಾರಕಗಳು, ಕುಮ್ಮಟದುರ್ಗ ಕೋಟೆ ಸೇರಿ ಜಿಲ್ಲೆಯ ಪ್ರಾಚೀನ ಸ್ಮಾರಕಗಳು, ಕೋಟೆಗಳನ್ನು ಸಂರಕ್ಷಣೆ ಮಾಡಬೇಕು. ಎಲ್ಲ ತಾಲೂಕು ಕೇಂದ್ರಗಳಲ್ಲಿ ಸಾಹಿತ್ಯ ಭವನ ನಿರ್ಮಾಣ ಮಾಡಬೇಕು. ಪದ್ಮಶ್ರೀ, ರಾಜ್ಯೋತ್ಸವ ಮತ್ತು ರಾಷ್ಟ್ರೀಯ ಪ್ರಶಸ್ತಿ ವಿಜೇತರಿಗೆ ನಿವೇಶನ ನೀಡಬೇಕು ಎಂದು ಮನವಿ ಮಾಡಿದರು.


ಮನಸ್ಸು ಶುದ್ಧ ಇದ್ದರೆ ಯಶಸ್ಸು ಸಾಧ್ಯ


ಕುಷ್ಟಗಿ: ಸಾಮರಸ್ಯದಿಂದ ಬಾಳಿದರೆ ಮಾತ್ರ ಜೀವನದಲ್ಲಿ ಯಶಸ್ಸು ಸಾಧ್ಯ ಎಂದು ಕೊಪ್ಪಳ ವಿವಿ ಕುಲಪತಿ ಡಾ.ಎಸ್.ವಿ. ಡಾಣಿ ಹೇಳಿದರು. ಹಿರೇಮನ್ನಾಪೂರದಲ್ಲಿ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಂಕೀರ್ಣ ಗೋಷ್ಠಿಯಲ್ಲಿ ಉಪನ್ಯಾಸ ನೀಡಿದರು.

ಪ್ರತಿಯೊಬ್ಬರು ಮುಕ್ತ ಮನಸ್ಸನ್ನು ಹೊಂದಿರಬೇಕು. ಧರ್ಮಗಳು, ರಾಜಕಾರಣಿಗಳು, ಬುದ್ಧಿಜೀವಿಗಳು ಸಾಮಾನ್ಯರಿಗೆ ಸಾಮರಸ್ಯದಿಂದ ಬಾಳುವಂತೆ ಹೇಳಬೇಕು. ಧರ್ಮದೊಂದಿಗೆ ಜನಜಾಗೃತಿ ಬಂದಾಗ ಅಭಿವೃದ್ಧಿ ಸಾಧ್ಯ. ಮನಸ್ಸು ಶುದ್ಧ ಇದ್ದರೆ ಜೀವನದಲ್ಲಿ ಯಶಸ್ಸು ಸಾಧ್ಯ. ಧರ್ಮ ಎಂಬುವುದು ಮಾನವ-ಮಾನವರ ನಡುವೆ ಗೋಡೆಯಾಗಬಾರದು ಎಂದರು. ಕನ್ನಡ ವಿವಿ ನಿರ್ದೇಶಕ ಡಾ. ಅಮರೇಶ ಯತಗಲ್ ಮಾತನಾಡಿ, ಸಾಹಿತಿಗಳು, ಬುದ್ಧಿಜೀವಿಗಳು ಸಮಾಜದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕು. ಪ್ರಜ್ಞಾವಂತರಾದಂತೆ ನಾವುಗಳು ಜಾತಿ, ಧರ್ಮ, ಮತ ಪಂಥಗಳನ್ನು ಕಟ್ಟಿಕೊಳ್ಳುವುತ್ತಿರುವುದು ವಿಷಾದನೀಯ ಎಂದರು. ಉಪನ್ಯಾಸಕ ಗುಡೂರು ಪವನಕುಮಾರ ಜಿಲ್ಲೆಯ ದಾಸ ಪರಂಪರೆ ಕುರಿತು ಉಪನ್ಯಾಸ ನೀಡಿದರು.

1) ಹಿರೇಮನ್ನಾಪೂರದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ನಿಮಿತ್ತ ಶಾಸಕ ದೊಡ್ಡನಗೌಡ ಎಚ್.ಪಾಟೀಲ್ ರಾಷ್ಟ್ರ ಧ್ವಜಾರೋಹಣ, ಕಸಾಪ ಜಿಲ್ಲಾ ಅಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್ ಕಸಾಪ ಧ್ವಜಾರೋಹಣ, ಕಸಾಪ ತಾಲೂಕು ಅಧ್ಯಕ್ಷ ಲೆಂಕಪ್ಪ ವಾಲಿಕಾರ ಕನ್ನಡ ಧ್ವಜಾರೋಹಣ ನೆರವೇರಿಸಿದರು. ಸಮ್ಮೇಳನ ಸರ್ವಾಧ್ಯಕ್ಷ ಶೇಖರಗೌಡ ಮಾಲಿಪಾಟೀಲ್ ಇತರರಿದ್ದರು.
2) ಸಮ್ಮೇಳನದಲ್ಲಿ ಸ್ಥಾಪಿಸಿದ ವಿವಿಧ ಮಳಿಗೆಗಳನ್ನು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಉದ್ಘಾಟಿಸಿದರು. ಶಾಸಕ ದೊಡ್ಡನಗೌಡ ಪಾಟೀಲ್, ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಪೂರ, ಮಾಜಿ ಸಂಸದ ಸಂಗಣ್ಣ ಕರಡಿ, ಕಸಾಪ ಜಿಲ್ಲಾ ಅಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್, ತಾಲೂಕಾಧ್ಯಕ್ಷ ಲೆಂಕೆಪ್ಪ ವಾಲೀಕಾರ ಇತರರಿದ್ದರು.
3) ಸಮ್ಮೇಳನ ಸರ್ವಾಧ್ಯಕ್ಷರ ಮೆರವಣಿಗೆಯಲ್ಲಿ ಮಹಿಳೆಯರ ಡೊಳ್ಳು ಕುಣಿತ ಹಾಗೂ ಬಾಜಾಭಜಂತ್ರಿ ಮೇಳ ಗಮನ ಸೆಳೆಯಿತು.


ಮೆರವಣಿಗೆಗೆ ಕಲಾತಂಡಗಳ ಮೆರುಗು


ಶ್ರೀ ಗವಿಸಿದ್ದೇಶ್ವರ ಪ್ರೌಢಶಾಲೆ ಮುಂಭಾಗದಲ್ಲಿ ಸಮ್ಮೇಳನ ಸರ್ವಾಧ್ಯಕ್ಷ ಶೇಖರಗೌಡ ಮಾಲಿಪಾಟೀಲ್ ಹಾಗೂ ನಾಡದೇವತೆ ಭಾವಚಿತ್ರ ಮೆರವಣಿಗೆ ಜಿಪಂ ಮಾಜಿ ಸದಸ್ಯ ದೊಡ್ಡಯ್ಯ ಗದ್ದಡಕಿ ಚಾಲನೆ ನೀಡಿದರು. ಶಾಸಕ ದೊಡ್ಡನಗೌಡ ಎಚ್.ಪಾಟೀಲ್, ಕಸಾಪ ಜಿಲ್ಲಾ ಅಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್, ತಾಲೂಕಾಧ್ಯಕ್ಷ ಲೆಂಕೆಪ್ಪ ವಾಲೀಕಾರ, ಮುಖಂಡ ಕೆ.ಮಹೇಶ ಇದ್ದರು. ಎತ್ತಿನ ಬಂಡಿಗಳು, ಮಹಿಳೆಯರ ಡೊಳ್ಳು ಕುಣಿತ, ಬಾಜಾಭಜಂತ್ರಿ ಮೇಳದವರು ಮೆರವಣಿಗೆಗೆ ಮೆರುಗು ತಂದರು. ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮುಖ್ಯವೇದಿಕೆ ತಲುಪಿತು. ಕರವೇ ಪದಾಧಿಕಾರಿಗಳು, ಶಾಲಾ ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು 200 ಮೀ. ಉದ್ದದ ಕನ್ನಡ ಧ್ವಜ ಮೆರವಣಿಗೆ ಮಾಡಿದರು.

ಶಿಕ್ಷಣ ನೀಡುವಲ್ಲಿ ಗ್ರಾಮೀಣ ಮಕ್ಕಳಿಗೆ ಅನ್ಯಾಯ


ಸಾಹಿತಿ ಎಲ್.ಹನುಮಂತಯ್ಯ ಹೇಳಿಕೆ

ಶಿವಯೋಗಿ ಶಂಕರಲಿಂಗ ಪ್ರಧಾನ ವೇದಿಕೆ ಹಿರೇಮನ್ನಾಪೂರ, ಕುಷ್ಟಗಿ

ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂದು ಸಾಹಿತಿ ಹಾಗೂ ರಾಜ್ಯಸಭಾ ಮಾಜಿ ಸದಸ್ಯ ಎಲ್.ಹನುಮಂತಯ್ಯ ಹೇಳಿದರು.

ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಮಕ್ಕಳಿಗೆ ಅನ್ಯಾಯವಾಗುತ್ತಿದೆ. ನಗರ ಪ್ರದೇಶದ ಮಕ್ಕಳಂತೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಆದರೆ, ಹುದ್ದೆ ಆಯ್ಕೆಯಲ್ಲಿ ಇಬ್ಬರನ್ನೂ ಸಮನಾಗಿ ನೋಡಲಾಗುತ್ತಿದೆ. ಇದರಿಂದ ಅನೇಕ ಗ್ರಾಮೀಣ ಪ್ರತಿಭೆಗಳು ನಶಿಸುತ್ತಿವೆ. ಗ್ರಾಮೀಣ ಹಾಗೂ ನಗರ ಪ್ರದೇಶದ ಮಕ್ಕಳಿಗೆ ಸಮಾನ ಶಿಕ್ಷಣ ಸಿಕ್ಕಾಗಿ ಗ್ರಾಮೀಣ ಮಕ್ಕಳು ಹೆಚ್ಚಿನ ಸಾಧನೆ ಮಾಡಲು ಸಾಧ್ಯ ಎಂದರು.

ಸಂಕಷ್ಟದಲ್ಲಿರುವ ಕೃಷಿ ಬಗ್ಗೆ ಸಾಹಿತಿಗಳು ಬೆಳಕು ಚೆಲ್ಲಬೇಕು. ಸಾವಿರಾರು ಕೋಟಿ ರೂ, ಬಜೆಟ್ ಮಂಡನೆ ಮಾಡುವ ಸರ್ಕಾರಗಳಿಗೆ ನೀರು ಸಂಗ್ರಹಿಸುವ, ಮುಂದೆ ಹರಿಯುವಂತೆ ಮಾಡುವ ಶಕ್ತಿ ಇಲ್ಲ. ಮಕ್ಕಳಲ್ಲಿ ಮಾನವೀಯ ಮೌಲ್ಯ ಹಾಗೂ ಒಗ್ಗಟ್ಟಿನ ಭಾವನೆ ಬೆಳೆಸಬೇಕು. ನಗರ ಪ್ರದೇಶದವರಿಗೆ ಸಾಹಿತ್ಯದ ಬಗ್ಗೆ ಚಿಂತನೆ ಮಾಡಲು ಸಮಯವೇ ಇಲ್ಲದಂತಾಗಿದೆ. ಅನಕ್ಷರಸ್ಥರು ಮೌಖಿಕ ಸಾಹಿತ್ಯದ ಮೂಲಕ ಕನ್ನಡ ಬೆಳೆಸಿದ್ದಾರೆ. ಸಾಹಿತ್ಯ ಕೇವಲ ಕನ್ನಡಿಯಾಗಿರದೇ ಸಮಾಜದ ಕಣ್ಣಾಗಬೇಕು. ಲೇಖಕರು ಸತ್ಯದ ಪರವಾಗಿ ನಿಲ್ಲಬೇಕು. ವಚನಕಾರರು ಪ್ರಾಮಾಣಿಕ ಹಾಗೂ ನಿಷ್ಠೆಯಿಂದ ಬಾಳಿದ್ದಾರೆ. ಆದರೆ, ಅವರ ತತ್ವಗಳನ್ನು ನಾವು ಪಾಲನೆ ಮಾಡುತ್ತಿಲ್ಲ. ಇದು ಬರಿ ಸಾಹಿತ್ಯವಾಗಿ ಉಳಿದಿದೆ. ಮಗು ಬೆಳೆಯುತ್ತಿದಂತೆ ಅದಕ್ಕೆ ಜಾತಿ, ಮತ, ಪ್ರಾಂತ್ಯ ಬಗ್ಗೆ ತಿಳಿಸಿ ಕುಬ್ಜ ಮಾನವನನ್ನಾಗಿ ಮಾಡಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಸಮ್ಮೇಳನ ಸರ್ವಾಧ್ಯಕ್ಷ ಶೇಖರಗೌಡ ಮಾಲಿಪಾಟೀಲ್, ಹಿರಿಯ ಸಾಹಿತಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ, ಆರ್.ಜಿ.ಹಳ್ಳಿ ನಾಗರಾಜ್, ಶಾಸಕ ದೊಡ್ಡನಗೌಡ ಪಾಟೀಲ್, ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಪೂರ, ತಾಪಂ ಇಒ ಅಮರೇಶ ಯಾದವ, ನಿಕಟಪೂರ್ವ ಅಧ್ಯಕ್ಷ, ಸಾಹಿತಿ ಲಿಂಗಾರಡ್ಡಿ ಆಲೂರು ಇತರರಿದ್ದರು.


ಕಲೆ-ಸಂಸ್ಕೃತಿ ಅನಾವರಣ


ಸಮ್ಮೇಳನದಲ್ಲಿ ತೆರೆಯಲಾಗಿದ್ದ ಸ್ವದೇಶಿ ಬಟ್ಟೆಗಳ ಮಳಿಗೆ, ಕನ್ನಡ ಸಾಹಿತ್ಯ-ಅಪರೂಪದ ಕೃತಿ ಒಳಗೊಂಡ ಪುಸ್ತಕಗಳು, ಖ್ಯಾತ ಕಲಾವಿದ ಮರಿಯಪ್ಪ ಮಳ್ಳೂರರ ಚಿತ್ರಕಲಾ ಪ್ರದರ್ಶನ, ಆಯುರ್ವೇದ ಔಷಧ, ಛಾಯಾಗ್ರಹಣ ಪ್ರದರ್ಶನ, ದೇಸಿ ತಿನಿಸುಗಳು ಹಾಗೂ ಗ್ರಾಮೀಣ ಸೊಗಡಿನ ಆಹಾರ ಪದಾರ್ಥಗಳ ಮಳಿಗಳು ಸಾಹಿತ್ಯಾಸಕ್ತರು, ವಿದ್ಯಾರ್ಥಿಗಳು, ಸಾರ್ವಜನಿಕರ ವಿಶೇಷ ಆಕರ್ಷಣೆಯಾಗಿದ್ದು, ಕನ್ನಡ ಸಂಸ್ಕೃತಿ, ಕಲೆ ಹಾಗೂ ಸ್ಥಳೀಯ ಉತ್ಪನ್ನಗಳ ಪ್ರಚಾರಕ್ಕೆ ವೇದಿಕೆಯಾದವು.

ಸಮಾಜ ಒಡೆಯುವ ಕೆಲಸವಾಗದಿರಲಿ


ಕುಷ್ಟಗಿ: ಧರ್ಮಗುರುಗಳು, ರಾಜಕಾರಣಿಗಳು ಹಾಗೂ ಬುದ್ಧಿ ಜೀವಿಗಳು ಸಮಾಜದಲ್ಲಿ ಸಮನ್ವಯತೆ ಕಾಪಾಡಿಕೊಳಬೇಕೆ ಹೊರತು ಒಡೆಯುವ ಕೆಲಸ ಮಾಡಬಾರದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಹೇಳಿದರು. ಸಮ್ಮೇಳನದಲ್ಲಿ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಸಾಹಿತಿಗಳು ತಮ್ಮನ್ನು ತಾವು ವಿಮರ್ಶೆ ಮಾಡಿಕೊಂಡು ಸಾಹಿತ್ಯ ರಚನೆ ಮಾಡಬೇಕು. ಸಾಮಾಜಿಕ ಹೊಣೆಗಾರಿಕೆ ಇಟ್ಟುಕೊಂಡು ಮಾನವೀಯತೆ ಬದುಕು ಕಟ್ಟಿಕೊಳ್ಳುವ ಕೆಲಸವಾಗಬೇಕು. ಸಾಹಿತಿಗಳು ಬರಗಾಲದಿಂದ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಬೇಕು. ಪುಸ್ತಕಗಳು ವರ್ತಮಾನದ ಸ್ಥಿತಿ ಕುರಿತು ಮಾತನಾಡಬೇಕು. ಸಮಸ್ಯೆಗಳ ಬಗ್ಗೆ ಪುಸ್ತಕಗಳು ಮಾತನಾಡಿದರೆ ಸಾಲದು, ಲೇಖಕರು ಮಾತನಾಡಬೇಕು. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಅಭ್ಯರ್ಥಿಗಳಿಗೆ ಆದ ಅನ್ಯಾಯ ಕುರಿತು ಸಾಹಿತಿಗಳು, ಧರ್ಮಗುರುಗಳು ಮಾತನಾಡದಿರುವುದು ವಿಷಾದನೀಯ ಎಂದರು.

ಊಟ-ಉಪಾಹಾರ ಅಚ್ಚುಕಟ್ಟು


ಹಿರೇಮನ್ನಾಪೂರ ಗ್ರಾಮಸ್ಥರು ಸಮ್ಮೇಳನಕ್ಕೆ ಬಂದವರಿಗೆ ಹಳ್ಳಿ ಊಟದ ವ್ಯವಸ್ಥೆ ಮಾಡಿದ್ದರು. ಬೆಳ್ಳಗೆ ಶಿರಾ-ಉಪ್ಪಿಟ್ಟು ಉಪಹಾರ, ಮಧ್ಯಾಹ್ನ ಊಟಕ್ಕೆ ಜೋಳದ ರೊಟ್ಟಿ, ಶೇಂಗಾ ಪುಡಿ, ಪುಠಾಣಿ ಪುಡಿ, ಎಣ್ಣೆಯಲ್ಲಿ ಕರಿದು ಮಸಾಲೆ ಸವರಿದ ಮಸಾಲೆ ರೊಟ್ಟಿ, ಬದನೆಕಾಯಿ ಪಲ್ಯ, ದೊಡ್ಡ ಮೆಣಸಿನಕಾಯಿ ಪಲ್ಯ, ಅನ್ನ, ಸೊಪ್ಪಿನ ಸಾಂಬರ್, ಮೊಸರು, ಉಪ್ಪಿನಕಾಯಿ, ಲಡ್ಡು ಸೇರಿ ಹಲವು ಬಗೆಯ ಸಾಂಪ್ರದಾಯಿಕ ಖಾದ್ಯಗಳನ್ನು ಉಣ ಬಡಿಸಲಾಯಿತು.

ಹಿರೇಮನ್ನಾಪೂರದಲ್ಲಿ ಆಯೋಜಿಸಿದ್ದ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ ಸಾರ್ವಜನಿಕರು.


200 ಮೀಟರ್ ಉದ್ದದ ಕನ್ನಡ ಧ್ವಜ ಮೇರವಣಿಗೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು.

ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಲೇಖಕರ ಕೃತಿಗಳನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಬಿಡುಗಡೆ ಮಾಡಿದರು. ಸಮ್ಮೇಳನ ಸರ್ವಾಧ್ಯಕ್ಷ ಶೇಖರಗೌಡ ಮಾಲಿಪಾಟೀಲ್, ಸಾಹಿತಿ ಎಸ್. ಹನುಮಂತಯ್ಯ, ಶಾಸಕ ದೊಡ್ಡನಗೌಡ ಪಾಟೀಲ್, ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಪೂರ, ಚಲನಚಿತ್ರ ನಟಿ ಮೀನಾಕ್ಷಿ ಎಚ್.ಎಂ. ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net