ಎಥೆನಾಲ್ ಘಟಕ ನಿರ್ಮಾಣಕ್ಕೆ ತೀವ್ರ ವಿರೋಧ

ತುಂಗಭದ್ರಾ ಎಥೆನಾಲ್ ಘಟಕ ನಿರ್ಮಾಣ ವಿರೋಧಿಸಿ ನಾಗನಕಲ್ ಗ್ರಾಮಸ್ಥರು ಕಾರಟಗಿಯಲ್ಲಿ ಜಿಲ್ಲಾಧಿಕಾರಿಗೆ ಬರೆದ ಮನವಿಯನ್ನು ಗ್ರೇಡ್-2 ತಹಸೀಲ್ದಾರ್ ಷಣ್ಮುಖಪ್ಪ ಅವರಿಗೆ ಸಲ್ಲಿಸಿದರು. ನಾಗರಾಜ ದಳಪತಿ, ಭೀಮಣ್ಣ ಭೋವಿ, ಯಮನೂರಸಾಬ್ ಕಲ್ಮಂಗಿ, ದೇವಪ್ಪ ಮಡಿವಾಳ, ಶ್ಯಾಮೀದಸಾಬ್ ಕನಕಗಿರಿ, ಪಂಪನಗೌಡ ಮೊಕಾಶಿ, ಅಭಿಷೇಕ್ ಆದಾಪುರ, ವಿಜಯಕುಮಾರ್ ಗುಂಜಳ್ಳಿ, ಮಲರೆಡ್ಡೆಪ್ಪ, ರಾಹುಲ್ ಛಲವಾದಿ ಸೇರಿ ಅನೇಕರಿದ್ದರು.
ತುಂಗಭದ್ರಾ ಎಥೆನಾಲ್ ಘಟಕ ನಿರ್ಮಾಣ ವಿರೋಧಿಸಿ ನಾಗನಕಲ್ ಗ್ರಾಮಸ್ಥರು ಕಾರಟಗಿಯಲ್ಲಿ ಜಿಲ್ಲಾಧಿಕಾರಿಗೆ ಬರೆದ ಮನವಿಯನ್ನು ಗ್ರೇಡ್-2 ತಹಸೀಲ್ದಾರ್ ಷಣ್ಮುಖಪ್ಪ ಅವರಿಗೆ ಸಲ್ಲಿಸಿದರು. ನಾಗರಾಜ ದಳಪತಿ, ಭೀಮಣ್ಣ ಭೋವಿ, ಯಮನೂರಸಾಬ್ ಕಲ್ಮಂಗಿ, ದೇವಪ್ಪ ಮಡಿವಾಳ, ಶ್ಯಾಮೀದಸಾಬ್ ಕನಕಗಿರಿ, ಪಂಪನಗೌಡ ಮೊಕಾಶಿ, ಅಭಿಷೇಕ್ ಆದಾಪುರ, ವಿಜಯಕುಮಾರ್ ಗುಂಜಳ್ಳಿ, ಮಲರೆಡ್ಡೆಪ್ಪ, ರಾಹುಲ್ ಛಲವಾದಿ ಸೇರಿ ಅನೇಕರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರದ ನಿರ್ಧಾರಕ್ಕೆ ಆಕ್ರೋಶ
  • ಕಾರಟಗಿ ತಹಸೀಲ್ದಾರ್ ಗೆ ಮನವಿ ಸಲ್ಲಿಕೆ
ಕಾರಟಗಿ: ನಾಗನಕಲ್ ಗ್ರಾಮದ ಬಳಿ ನಿರ್ಮಾಣ ಹಂತದಲ್ಲಿರುವ ತುಂಗಭದ್ರ ಎಥೆನಾಲ್ ಘಟಕಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಗ್ರಾಮಸ್ಥರು, ಘಟಕವನ್ನು ಕೂಡಲೇ ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿದರು.
ನಾಗನಕಲ್ ಗ್ರಾಮಸ್ಥರು ಮಂಗಳವಾರ ತಹಸೀಲ್ದಾರ್ ಮೂಲಕ ಡಿಸಿ ಗೆ ಮನವಿ ಸಲ್ಲಿಸಿ, ಬೇವಿನಾಳ ಗ್ರಾಪಂ ವ್ಯಾಪ್ತಿಯ ನಾಗನಕಲ್ ಗ್ರಾಮದಲ್ಲಿ ತುಂಗಭದ್ರಾ ಎಥೆನಾಲ್ ಘಟಕ ನಿರ್ಮಾಣ ಮಾಡುತ್ತಿರುವುದಕ್ಕೆ ತಮ್ಮ ವಿರೋಧವಿದೆ. ಕೂಡಲೇ ಘಟಕದ ನಿರ್ಮಾಣ ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿದರು.
ಗ್ರಾಪಂ ಮಾಜಿ ಸದಸ್ಯ ದಾವಲಸಾಬ್ ಹೋರಾಟಗಾರರನ್ನು ಉದ್ದೇಶಿಸಿ ಮಾತನಾಡಿ, ಎಥೆನಾಲ್ ಘಟಕ ಪರಿಸರಕ್ಕೆ ಹಾನಿಕಾರಕವಾಗಿದೆ. ಅದರಿಂದ ನಾಗನಕಲ್ ಗ್ರಾಮವಲ್ಲದೇ ಸುತ್ತಲಿನ ರಾಮನಗರ, ಚಳ್ಳೂರು ಕ್ಯಾಂಪ್, ಬೇವಿನಾಳ ಸೇರಿ ಸುತ್ತಲಿನ 3 ಕಿಮೀ ದೂರದಲ್ಲಿರುವ ತಾಲೂಕು ಕೇಂದ್ರ ಕಾರಟಗಿಗೂ ತೊಂದರೆಯಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕೈಗಾರಿಕೆ ಘಟಕ ಸ್ಥಾಪಿಸಲು ಜನರಹಿತ ಪ್ರದೇಶ ಆಯ್ಕೆ ಮಾಡಿಕೊಳ್ಳಬೇಕು. ಆದರೆ ಸರ್ಕಾರವು ತಾನೇ ರೂಪಿಸಿದ ನಿಯಮ ಉಲ್ಲಂಘಿಸಿ ಎಥೆನಾಲ್ ಘಟಕ ಸ್ಥಾಪನೆಗೆ ಅನುಮತಿಸಿದೆ ಎಂದು ಟೀಕಿಸಿ ಅವರು, ಕಾರಖಾನೆಯ ಬಳಿಯೇ ನಾಗನಕಲ್ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ನವಲಿ ರಸ್ತೆಯಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿದೆ. ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ಮಾಡುತ್ತಿದ್ದು ಅವರೆಲ್ಲರಿಗೆ ಈ ಘಟಕದಿಂದ ಸಮಸ್ಯೆಯಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ತುಂಗಭದ್ರಾ ಎಡದಂಡೆ ಕಾಲುವೆ, ಕಾರಟಗಿ ತಾಲೂಕಿನ ಬಹುಗ್ರಾಮ ಕುಡಿಯುವ ನೀರಿನ ಕೆರೆಯೂ ಇಲ್ಲಿಯೇ ಇದ್ದು, ಎಥೆನಾಲ್ ಘಟಕದಲ್ಲಿ ಕಲ್ಲಿದ್ದಲು ಸುಡುವುದರಿಂದ ಪರಿಸರ ಮಾಲಿನ್ಯ, ಗಾಳಿ ಮತ್ತು ನೀರು ಕಲುಷಿತವಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಖಂಡರಾದ ಚನ್ನನಗೌಡ, ವೀರಭದ್ರ ಗೌಡ ಮತ್ತು ಅಮರೇಶ್ ಪವಾರ್ ಮಾತನಾಡಿ, ಅಪಾಯಕಾರಿ ಬೃಹತ್ ಕಾರಖಾನೆ ಆರಂಭದ ಬಗ್ಗೆ ಗ್ರಾಮಸ್ಥರಿಗೆ ಯಾವುದೇ ಮಾಹಿತಿಯಿಲ್ಲ. ಅಧಿಕಾರಿಗಳು ಏಕಾಏಕಿ ಸಭೆ ನಡೆಸಿ, ಹೊರಗಿನಿಂದ ಜನರನ್ನು ಕರೆತಂದು ಸಭೆ ನಡೆಸಿ ನಿರಕ್ಷೇಪಣಾ ಪತ್ರ ನೀಡಿದ್ದಾರೆಂದು ದೂರಿದರು.
ಕೂಡಲೇ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡು ಘಟಕದ ನಿರ್ಮಾಣಕ್ಕೆ ಅವಕಾಶ ನೀಡಬಾರದು. ಗ್ರಾಮಸ್ಥರ ಮಾತಿಗೆ ಬೆಲೆ ಕೊಡದಿದ್ದರೆ ಉಗ್ರ ಸ್ವರೂಪದ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ನಾಗರಾಜ ದಳಪತಿ, ಭೀಮಣ್ಣ ಭೋವಿ, ಯಮನೂರಸಾಬ್ ಕಲ್ಮಂಗಿ, ದೇವಪ್ಪ ಮಡಿವಾಳ, ಶ್ಯಾಮೀದಸಾಬ್ ಕನಕಗಿರಿ, ಪಂಪನಗೌಡ ಮೊಕಾಶಿ, ಅಭಿಷೇಕ್ ಆದಾಪುರ, ವಿಜಯಕುಮಾರ್ ಗುಂಜಳ್ಳಿ, ಮಲರೆಡ್ಡೆಪ್ಪ, ರಾಹುಲ್ ಛಲವಾದಿ, ಮಲ್ಲು ಕುರಿ, ಹನುಮೇಶ್ ಭೋವಿ, ಶಿವಕುಮಾರ್ ತೊಟ್ಟಿಮನಿ, ಅಮರೇಶ್ ಕಾರಟಗಿ, ಕಾಶಿಮ್ ಸಾಬ್, ಮುದಿಯಪ್ಪ ತಳವಾರ, ಸಿದ್ದಪ್ಪ ಸಂಕನಾಳ ಸೇರಿ ಅನೇಕರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net