ರೌಡಿಶೀಟರ್​ಗಳ ಮೇಲೆ ಹದ್ದಿನ ಕಣ್ಣು

ಕೊಪ್ಪಳದ ಮನೆಯೊಂದರಲ್ಲಿ ಪರಿಶೀಲನೆ ನಡೆಸಿದ ಪೊಲೀಸರು.
ಕೊಪ್ಪಳದ ಮನೆಯೊಂದರಲ್ಲಿ ಪರಿಶೀಲನೆ ನಡೆಸಿದ ಪೊಲೀಸರು.
Published on

ಪ್ರಮುಖ ಮುಖ್ಯಾಂಶಗಳು

  • 33 ತಂಡ ರಚಿಸಿ 68 ಮನೆ ಭೇಟಿ
  • ಎಸ್ಪಿ ಡಾ.ರಾಮ್​ ಎಲ್​.ಅರಸಿದ್ದಿ ಮಾಹಿತಿ
ಕೊಪ್ಪಳ : ಸರ್ಕಾರದ ನಿರ್ದೇಶನದಂತೆ ಜಿಲ್ಲಾ ಮಟ್ಟದಲ್ಲಿ ರೌಡಿಗಳ ಮೇಲೆ ನಿಗಾವಹಿಸಲು ತಂಡ ರಚಿಸಿದ್ದು, ನಿರಂತರ ನಿಗಾವಹಿಸುವ ಮೂಲಕ ರೌಡಿಸಂ ನಡೆಯದಂತೆ ತಡೆಯಲು ಕ್ರಮವಹಿಸಲಾಗುವುದೆಂದು ಎಸ್ಪಿ ಡಾ.ರಾಮ್​ ಎಲ್​.ಅರಸಿದ್ದಿ ತಿಳಿಸಿದರು.
ನಗರದ ಎಸ್ಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಡಿಜಿ ಸೂಚನೆ ಹಿನ್ನೆಲೆಯಲ್ಲಿ ಎಲ್ಲ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಎಲ್ಲ ಪಿಐ, ಪಿಎಸ್​ಐ ನೇತೃತ್ವದಲ್ಲಿ 33 ತಂಡಗಳನ್ನು ರಚಿಸಿದ್ದು 68 ರೌಡಿಗಳ ಮನೆಗೆ ಭೇಟಿ ನೀಡಿದ್ದೇವೆ. ಅಪಾಯಕಾರಿ, ಅನುಮಾನಾಸ್ಪದ ವಸ್ತುಗಳ ಬಗ್ಗೆ ಚೆಕ್​ ಮಾಡಲಾಗಿದೆ. ಗಂಗಾವತಿಯ ಗುಂಡಮ್ಮ ಕ್ಯಾಂಪ್​ನಲ್ಲಿ ವೆಂಕಟೇಶ ಎಂಬುವರ ಮನೆಯಲ್ಲಿ ಮೂರು ಲಕ್ಷ ರೂ. ಹಣ ಸಿಕ್ಕಿದೆ. ಅವರು ರೈತರು ಎಂದು ಹೇಳಿಕೊಂಡಿದ್ದಾರೆ. ದಾಖಲೆ ಪರಿಶೀಲಿಸುತ್ತಿದ್ದು ಹಣದ ಮೂಲ ಖಚಿತಪಡಿಸಿಕೊಳ್ಳಲಾಗುವುದು ಎಂದರು.
ಜಿಲ್ಲೆಯಲ್ಲಿ 900 ರೌಡಿಗಳಿದ್ದಾರೆ. ಅವರ ಚಟುವಟಿಕೆ, ಅಪರಾಧ ಆಧಾರದಲ್ಲಿ ಎ&ಬಿ&ಸಿ ಎಂದು ವಿಂಗಡಿಸಲಾಗಿದೆ. ಕೆಲವರಿಗೆ ವಯಸ್ಸಾದರೆ, ಇನ್ನು ಕೆಲವರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ರೌಡಿಸಂ ನಡೆಯಲು ಅವಕಾಶವಿಲ್ಲ. ರೌಡಿ ಪಟ್ಟಿಯಲ್ಲಿ ಇದ್ದವರ ಮೇಲೆ ತೀವ್ರ ನಿಗಾವಹಿಸಲಾಗುವುದು. ಅವರ ಚಲನವಲನಗಳ ಮೇಲೆ ನಮ್ಮ ಕಣ್ಣಿರಲಿದೆ. ಈವರೆಗೆ ರೌಡಿ ಶೀಟರ್​ಗಳ ಪರೇಡ್​ ನಡೆಸುತ್ತಿದ್ದೆವು. ಅದರ ಜತೆಗೆ ಆ್ಯಂಟಿ ರೌಡಿಸಂ ಸ್ಕಾ$್ವಡ್​ ಸಹ ಹದ್ದಿನ ಕಣ್ಣಿಡಲಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ 16 ರೌಡಿಗಳ ಗಡಿಪಾರು ಆದೇಶಗಳ ವಿಚಾರಣೆ ನಡೆಯುತ್ತಿದೆ. ಈಗಾಗಲೆ 4 ಆದೇಶವಾಗಿದ್ದು ನಾಲ್ವರನ್ನು ಗಡಿಪಾರು ಮಾಡಲಾಗಿದೆ. ಮಟ್ಕಾ, ಜೂಜಾಟ ಆಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ರೌಡಿಗಳು ರಾಜಕಾರಣಿ ಅಥವಾ ಗಣ್ಯರ ಜೊತೆಗಾದರೂ ಕಾಣಿಸಿಕೊಂಡರೂ ಬಿಡುವುದಿಲ್ಲ. ಪ್ರತಿ ಎರಡು ದಿನಕ್ಕೊಮ್ಮೆ ನಮ್ಮ ತಂಡ ಅವರನ್ನು ಭೇಟಿ ಮಾಡಲಿದೆ. ಏನು ಮಾಡತ್ತಿದ್ದಾರೆಂದು ಗಮನಿಸುತ್ತೇವೆ. ಉತ್ತಮ ನಡವಳಿಕೆ ಅಳವಡಿಸಿಕೊಂಡ 50-60 ರೌಡಿ ಶೀಟರ್​ಗಳನ್ನು ಪಟ್ಟಿಯಿಂದ ಬಿಡಲಾಗಿದೆ ಎಂದು ಮಾಹಿತಿ ನೀಡಿದರು. ಡಿವೈಎಸ್ಪಿ ಮುತ್ತಣ್ಣ ಸರವಗೋಳ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net