ರೈತ ನೆರವಿಗೆ ತ್ವರಿತ ಕ್ರಮಕ್ಕೆ ಸಿ.ಟಿ.ರವಿ ಆಗ್ರಹ

ಹುಲಿಹೈದರನಲ್ಲಿ ಮುಂಗಾರು ವೈಫಲ್ಯದಿಂದ ಹಾಳಾದ ತೊಗರಿ ಬೆಳೆ ಕುರಿತು ರೈತರೊಂದಿಗೆ ಎಂಎಲ್‌ಸಿ ಸಿ.ಟಿ ರವಿ ನೇತೃತ್ವದ ಬಿಜೆಪಿ ಬರ ಅಧ್ಯಯನ ತಂಡ ಚರ್ಚೆ ನಡೆಸಿತು. ಮಾಜಿ ಶಾಸಕ ಬಸವರಾಜ ದಢೇಸುಗೂರು, ಕಾಡಾ ಮಾಜಿ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಇತರರಿದ್ದರು.
ಹುಲಿಹೈದರನಲ್ಲಿ ಮುಂಗಾರು ವೈಫಲ್ಯದಿಂದ ಹಾಳಾದ ತೊಗರಿ ಬೆಳೆ ಕುರಿತು ರೈತರೊಂದಿಗೆ ಎಂಎಲ್‌ಸಿ ಸಿ.ಟಿ ರವಿ ನೇತೃತ್ವದ ಬಿಜೆಪಿ ಬರ ಅಧ್ಯಯನ ತಂಡ ಚರ್ಚೆ ನಡೆಸಿತು. ಮಾಜಿ ಶಾಸಕ ಬಸವರಾಜ ದಢೇಸುಗೂರು, ಕಾಡಾ ಮಾಜಿ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯ-ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಕೆ ಶೀಘ್ರ
  • ಬರ ಅಧ್ಯಯನಕ್ಕೆ ಬಿಜೆಪಿ ತಂಡಗಳು
ಕನಕಗಿರಿ: ರಾಜ್ಯಾದ್ಯಂತ ಬರ ಆವರಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ವತಿಯಿಂದ ಆರು ತಂಡಗಳನ್ನು ರಚಿಸಿ ಎಲ್ಲ ಜಿಲ್ಲೆಗಳಲ್ಲೂ ಬರ ಅಧ್ಯಯನ ನಡೆಸಲಾಗುತ್ತಿದೆ. ಎಲ್ಲ ತಂಡಗಳ ವರದಿಗಳನ್ನು ಕ್ರೋಡೀಕರಿಸಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.
ಹುಲಿಹೈದರ ವ್ಯಾಪ್ತಿಯಲ್ಲಿ ಸೋಮವಾರ ಬರ ವೀಕ್ಷಣೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದಲ್ಲಿ ನಮ್ಮ ತಂಡ ಬರ ಅಧ್ಯಯನ ನಡೆಸುತ್ತಿದೆ. ಈ ಬಾರಿ ಎಲ್‌ನಿನೋ ಪರಿಣಾಮ ರಾಜ್ಯದಲ್ಲಿ ಬರ ಆವರಿಸಿದ್ದು, ಹಲವು ಜಲಾಶಯಗಳು ಖಾಲಿಯಾಗಿವೆ. ಈಗಾಗಲೇ ರೈತರ ಆತ್ಮಹತ್ಯೆ ಪ್ರಕರಣದಲ್ಲಿ ರಾಜ್ಯವು ದೇಶದಲ್ಲಿ ಎರಡನೇ ಸ್ಥಾನದಲ್ಲಿದ್ದು, ಮೊದಲ ಸ್ಥಾನಕ್ಕೆ ಬರದಂತೆ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಇಲ್ಲಿನ ಜನರು ಕೆಲಸವಿಲ್ಲದೆ ತತ್ತರಿಸಿದ್ದಾರೆ. ಆದರೆ ಶಾಸಕರಿಗೆ ಜನರಿಗೆ ತಟ್ಟಿರುವ ಬರ ಕಾಣುತ್ತಿಲ್ಲ. ಅವರಿಗೆ ಅಧಿಕಾರದ ಬರ ಆವರಿಸಿದೆ. ರಾಜ್ಯದಲ್ಲಿ ಬರ ಘೋಷಿಸಿ ಸರ್ವೇ ಕಾರ್ಯ ಆರಂಭಿಸಬೇಕು. ಹಳೆ ಬೆಳೆ ಸಾಲ ಮನ್ನಾ ಮಾಡಿ ಹೊಸದಾಗಿ ಸಾಲ ನೀಡಬೇಕು. ರೈತರಿಗೆ ವೈಜ್ಞಾನಿಕವಾಗಿ ಪರಿಹಾರ ನೀಡಬೇಕು. ಗೋಶಾಲೆ ಆರಂಭಿಸಿ ಮೇವು ಸಂಗ್ರಹಕ್ಕೆ ಮುಂದಾಗಬೇಕು. ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನೀಡಿ ಕೂಲಿಕಾರರಿಗೆ ನೆರವಾಗಬೇಕು ಎಂದು ಆಗ್ರಹಿಸಿದರು.
ನೀಟ್ ಬೆಳವಣಿಗೆಯಲ್ಲಿ ಕೇವಲ ಅಧಿಕಾರಿಗಳ ತಲೆದಂಡ ಸಾಲದು. ಕೇಂದ್ರ ಸರ್ಕಾರವೂ ಹೊಣೆ ಹೊರಬೇಕು ಎಂದು ಕಾಂಗ್ರೆಸ್ ನಾಯಕರು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿದ್ದರು. ಆದರೆ ರಾಜ್ಯದಲ್ಲಿನ ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದ ಡೀಲ್ ಹಗರಣಕ್ಕೆ ಸಂಬಂಧಿಸಿದ ಆಡಿಯೊ ದಾಖಲೆಗಳಿದ್ದು, ಒಂದು ಸೀಟಿಗೆ 80 ಲಕ್ಷ ರೂ.ವರೆಗೆ ಹಣ ಪಡೆದಿರುವ ಆರೋಪವಿದೆ. ಉತ್ತರ ಪತ್ರಿಕೆ ಬದಲಾವಣೆ ಹಗರಣವೂ ನಡೆದಿದೆ. ಈ ಪ್ರಕರಣಗಳಿಗೆ ರಾಜ್ಯ ಸರ್ಕಾರದಲ್ಲಿ ಯಾರು ಹೊಣೆ ಹೊರುತ್ತಾರೆ? ಯಾವ ಸಚಿವರು ರಾಜೀನಾಮೆ ನೀಡುತ್ತಾರೆ ಎಂದು ಪ್ರಶ್ನಿಸಿದರು.
ನಾನು ಮುಲ್ಲಾಗಳು ಎಂದು ಹೇಳಿಲ್ಲ. ಮುಲ್ಲಾ ಎಂದು ಹೇಳಿಕೆ ನೀಡಿದ್ದೇನೆ. ಪೆಟ್ರೋಲ್ ಟ್ಯಾಂಕರ್‌ಗೆ ಮುಲ್ಲಾ ಬೆಂಕಿ ಹಚ್ಚಿರುವುದಕ್ಕೆ ಆ ರೀತಿಯಲ್ಲಿ ಹೇಳಿದ್ದೇನೆ. ಮುಸ್ಲಿಮರಿಗೆ ಅಪಮಾನವಾಗುವ ರೀತಿಯಲ್ಲಿ ಮಾತನಾಡಿಲ್ಲ ಎಂದ ಅವರು, ನಾವು ಸಾರ್ವಜನಿಕ ಜೀವನದಲ್ಲಿದ್ದು ನ್ಯಾಯಾಲಯ ಹಾಗೂ ಜನತಾ ನ್ಯಾಯಾಲಯದ ಮುಂದೆ ಹೋಗುತ್ತೇವೆ. ನನ್ನ ವಿರುದ್ಧ ಪ್ರಕರಣ ದಾಖಲಿಸಿದ್ದಕ್ಕೆ ಓಡಿ ಹೋಗುವ ಜಾಯಮಾನದವನಲ್ಲ. ಯಾವ ಉದ್ದೇಶಕ್ಕೆ ಹೇಳಿಕೆ ನೀಡಿದ್ದೇನೆ ಎಂಬುದನ್ನು ನ್ಯಾಯಾಲಯದಲ್ಲಿ ನ್ಯಾಯಾಧೀಶರ ಮುಂದೆ ಹೇಳುತ್ತೇನೆ ಎಂದು ತಿಳಿಸಿದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್, ಶಾಸಕ ದೊಡ್ಡನಗೌಡ ಪಾಟೀಲ್, ಮಾಜಿ ಶಾಸಕ ಹಾಲಪ್ಪ ಆಚಾರ್, ಪರಣ್ಣ ಮುನವಳ್ಳಿ, ಬಸವರಾಜ ದಡೇಸುಗೂರು, ಮಾಜಿ ಎಂ.ಎಲ್.ಸಿ. ಅಮರನಾಥ ಪಾಟೀಲ್, ತುಂಗಭದ್ರಾ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
"

ಕೊಪ್ಪಳ, ರಾಯಚೂರು ಸೇರಿ ರಾಜ್ಯದ ಬಹುತೇಕ ಜಿಲ್ಲೆಗಳು ಬರಕ್ಕೆ ತುತ್ತಾಗಿವೆ. ಇಂಥ ಸಮಯದಲ್ಲಿ ಸರ್ಕಾರ ರೈತರ ನೆರವಿಗೆ ಧಾವಿಸಬೇಕು. ಮಳೆ ಇಲ್ಲದೆ ಅನ್ನದಾತರು ಸಾಲದ ಸುಳಿಗೆ ಸಿಲುಕಿದ್ದಾರೆ. ಸರ್ಕಾರ ಸಂಪುಟ ವಿಸ್ತರಣೆ, ಸಚಿವ ಸ್ಥಾನಕ್ಕಾಗಿ ಶಾಸಕರು ಹವಣಿಸುತ್ತಿದ್ದಾರೆ. ರೈತರ ಜೀವನದೊಂದಿಗೆ ಸರ್ಕಾರ ಆಟವಾಡುತ್ತಿದೆ. ತಕ್ಷಣ ಬರ ೋಷಿಸಿ ಎಕರೆಗೆ 50 ಸಾವಿರ ರೂ. ಪರಿಹಾರ ನೀಡಬೇಕು.

— ಸಿ.ಟಿ. ರವಿ ವಿಧಾನ ಪರಿಷತ್ ಸದಸ್ಯ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net