ಕೊಪ್ಪಳದಲ್ಲಿ ಸಚಿವ ಶಿವರಾಜ ತಂಗಡಗಿ ಅಧ್ಯಕ್ಷತೆಯಲ್ಲಿ ಸೋಮವಾರ ಕುಡಿವ ನೀರು ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಯಿತು. ವಿಪಕ್ಷ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್, ಸಂಸದ ರಾಜಶೇಖರ ಹಿಟ್ನಾಳ, ವಿಪ ಸದಸ್ಯೆ ಹೇಮಲತಾ ನಾಯಕ, ಡಿಸಿ ಡಾ.ಸುರೇಶ ಬಿ.ಇಟ್ನಾಳ, ಜಿಪಂ ಸಿಇಒ ವರ್ಣಿತ್ ನೇಗಿ, ಎಸಿ ಕ್ಯಾ.ಮಹೇಶ ಮಾಲಗಿತ್ತಿ, ಜಿಪಂ ಉಪ ಕಾರ್ಯದರ್ಶಿ ಟಿ.ಕೃಷ್ಣಮೂರ್ತಿ ಇದ್ದರು.
ಕೊಪ್ಪಳ : ಬೇಸಿಗೆ ಆರಂಭವಾಗಿದ್ದು ಜಿಲ್ಲೆಯಲ್ಲಿ ಕುಡಿವ ನೀರಿನ ಸಮಸ್ಯೆಗಳಾಗದಂತೆ ಅಧಿಕಾರಿಗಳು ಎಚ್ಚರವಹಿಸಿ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ತಿಳಿಸಿದರು.
ನಗರದ ಜಿಪಂ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಸೋಮವಾರ ಕುಡಿವ ನೀರು ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.
ಏಳು ತಾಲೂಕಿನಲ್ಲಿ ನೀರಿನ ಸಮಸ್ಯೆಗಳಾಗದಿರಲಿ. ತಾಪಂ ಇಒಗಳು, ಜೆಇಗಳು, ಎಇಇಗಳು ನಿಮ್ಮ ವ್ಯಾಪ್ತಿ ಪಂಚಾಯಿತಿಗಳಿಗೆ ಭೇಟಿ ನೀಡಿ ಪರಿಹಾರ ಕಂಡುಕೊಳ್ಳಿ. ಮುಂಚಿತವಾಗಿಯೇ ಯೋಜನೆ ರೂಪಿಸಿ. ಸಮಸ್ಯೆಗಳಾದರೆ ಜನ ನಮಗೆ ಕರೆ ಮಾಡುತ್ತಾರೆ. ಯಾವೊಂದು ಊರಿನಲ್ಲಿ ಕುಡಿವ ನೀರಿನ ನೀರಿನ ಸಮಸ್ಯೆ ಆಗಬಾರದು. ಸಮಸ್ಯಾತ್ಮಕ ಗ್ರಾಮಗಳ ಪಟ್ಟಿ ಮಾಡಿಕೊಳ್ಳಿ. ಸಂಬಂಧಿಸಿದ ಶಾಸಕರ ಮೂಲಕ ಸಿಇಒಗೆ ಮಾಹಿತಿ ನೀಡಿ. ಅಧಿವೇಶನದಲ್ಲಿ ಈ ಬಗ್ಗೆ ಚರ್ಚಿಸುವೆ. ಕುಷ್ಟಗಿ, ಯಲಬುರ್ಗಾ, ತಾಲೂಕುಗಳಿಗೆ ಕೃಷ್ಣಾ ನದಿ ನೀರು ಬರುತ್ತದೆ. ಕಾಮಗಾರಿಗಳು ಸಮರ್ಪಕವಾಗಿ ಮಾಡಿ. ಎಲ್ಲ ಕುಡಿವ ನೀರು ಕಾಮಗಾರಿ ಮುಗಿದಲ್ಲಿ ಸಮಸ್ಯೆ ಬರುವುದಿಲ್ಲ. ಮುತುವರ್ಜಿವಹಿಸಿ ಕಾಮಗಾರಿ ನಿರ್ವಹಿಸಿ. ಕಾಲ ಮಿತಿಯಲ್ಲಿ ಕಾಮಗಾರಿ ಮುಗಿಸದ ಗುತ್ತಿಗೆದಾರರಿಗೆ ದಂಡ ಹಾಕಿ. ಇಲ್ಲದಿದ್ದರೆ ಗುತ್ತಿಗೆದಾರರನ್ನು ಬದಲಾಯಿಸಿ ಎಂದು ತಾಕೀತು ಮಾಡಿದರು.
ವಿಪಕ್ಷ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್, ಸಂಸದ ರಾಜಶೇಖರ ಹಿಟ್ನಾಳ, ವಿಪ ಸದಸ್ಯೆ ಹೇಮಲತಾ ನಾಯಕ, ಡಿಸಿ ಡಾ.ಸುರೇಶ ಬಿ.ಇಟ್ನಾಳ, ಜಿಪಂ ಸಿಇಒ ವರ್ಣಿತ್ ನೇಗಿ, ಎಸಿ ಕ್ಯಾ.ಮಹೇಶ ಮಾಲಗಿತ್ತಿ, ಜಿಪಂ ಉಪ ಕಾರ್ಯದರ್ಶಿ ಟಿ.ಕೃಷ್ಣಮೂರ್ತಿ ಇತರರಿದ್ದರು.