ಟಿಎಪಿಸಿಎಂಎಸ್ ಆಡಳಿತಕ್ಕೆ ಡಿಜಿಟಲ್ ಸ್ಪರ್ಶ

ಗಂಗಾವತಿ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಚನ್ನಪ್ಪ ಮಳಗಿ ಬುಧವಾರ ಮಾತನಾಡಿದರು. ಸದಸ್ಯರಾದ ಮಂಜುನಾಥ ಜನಾದ್ರಿ, ಚಂದ್ರಶೇಖರ್ ಗೌಡ, ಎಸಿಇಒ ಶಂಕರ ಇತರರಿದ್ದರು.
ಗಂಗಾವತಿ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಚನ್ನಪ್ಪ ಮಳಗಿ ಬುಧವಾರ ಮಾತನಾಡಿದರು. ಸದಸ್ಯರಾದ ಮಂಜುನಾಥ ಜನಾದ್ರಿ, ಚಂದ್ರಶೇಖರ್ ಗೌಡ, ಎಸಿಇಒ ಶಂಕರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಚನ್ನಪ್ಪ ಮಳಗಿ ಮಾಹಿತಿ
  • ಆಸ್ತಿಗಳ ರಕ್ಷಣೆಗೆ ತಂತಿ ಬೇಲಿ-ಸಿಸಿ ಕ್ಯಾಮರಾ ಅಳವಡಿಕೆ
ಗಂಗಾವತಿ: ನೂರು ಕೋಟಿ ರೂ.ಗೂ ಅಧಿಕ ಆದಾಯ ಹೊಂದಿರುವ ಟಿಎಪಿಸಿಎಂಎಸ್ ಆಡಳಿತ ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿಸಲಾಗುತ್ತಿದ್ದು, ಹೊಸ ಕಟ್ಟಡದ ಪ್ರಸ್ತಾವನೆಗೆ ಚಾಲನೆ ನೀಡಲಾಗುವುದು ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ಚನ್ನಪ್ಪ ಮಳಗಿ ಹೇಳಿದರು.
ನಗರದ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಟಿಎಪಿಸಿಎಂಎಸ್ (ಗಂಗಾವತಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿಯಮಿತ)ಕ್ಕೆ 60ವರ್ಷಗಳ ಇತಿಹಾಸವಿದ್ದು 6 ಕೋಟಿ ರೂ. ದುಡಿವ ಬಂಡವಾಳವಿದೆ.
ನಗರದ ಮಧ್ಯಭಾಗದಲ್ಲಿ 12 ಎಕರೆ ಸ್ಥಿರಾಸ್ತಿ, 21 ಗೋದಾಮು, 20 ವಾಣಿಜ್ಯ ಮಳಿಗೆ, 18 ನ್ಯಾಯಬೆಲೆ ಅಂಗಡಿಗಳಿವೆ. ಹಣಕಾಸು ಅವ್ಯವಹಾರ ತಡೆಗಟ್ಟುವ ನಿಟ್ಟಿನಲ್ಲಿ ಕ್ಯಾಶಲೆಸ್ ವ್ಯವಹಾರಕ್ಕೆ ಚಾಲನೆ ನೀಡಲಾಗುತ್ತಿದ್ದು, ಆಡಳಿತ ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿಸಲಾಗುವುದು ಎಂದು ತಿಳಿಸಿದರು.
ಹೊಸ ಕಟ್ಟಡಕ್ಕಾಗಿ 50ಲಕ್ಷ ರೂ. ಅನುದಾನವಿದ್ದು, ಬ್ಯಾಂಕ್‌ವೊಂದರಲ್ಲಿ ಠೇವಣಿಯಿಡಲಾಗಿದೆ. ಆಸ್ತಿಗಳ ರಕ್ಷಣೆಗೆ ತಂತಿ ಬೇಲಿ ಹಾಕುವುದು, ಸಿಸಿ ಕ್ಯಾಮರಾ ಅಳವಡಿಕೆ, ವಾಣಿಜ್ಯ ಕಟ್ಟಡ ಮತ್ತು ಗೋದಾಮುಗಳ ಬಾಡಿಗೆ ಹೆಚ್ಚಳ, ಸಕಾಲಕ್ಕೆ ರೈತರಿಗೆ ರಸಗೊಬ್ಬರ, ಕ್ರಿಮಿನಾಶಕ ವಿತರಣೆ ವ್ಯವಸ್ಥೆ ಮಾಡಲಾಗುವುದು.
ರೈಸ್‌ಮಿಲ್ ಬಾಡಿಗೆಗೆ ಬೇಡಿಕೆ ಹೆಚ್ಚಾಗಿದ್ದು, 2019ರಿಂದ ಒಪ್ಪಂದ ಬದಲಾಗಿಲ್ಲ. ಆಡಳಿತ ಮಂಡಳಿ ವಿಶ್ವಾಸಕ್ಕೆ ತೆಗೆದುಕೊಂಡ ಸಂಸ್ಥೆಯ ಆದಾಯ ಹೆಚ್ಚಿಸಲಾಗುತ್ತಿದ್ದು, ಭ್ರಷ್ಟಾಚಾರ ತಡೆಗಟ್ಟಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಪಹಣಿ ಹೊಂದಿದ ರೈತರಿಗೆ ಷೇರುಗಳನ್ನು ನೀಡಲು ನಿರ್ಧರಿಸಿದ್ದು, ಕೃಷಿಕರು ನೇರ ಆಡಳಿತ ಮಂಡಳಿಯೊಂದಿಗೆ ವ್ಯವಹರಿಸಬೇಕಿದ್ದು, ಮಧ್ಯವರ್ತಿಗಳು ಮತ್ತು ದಲ್ಲಾಳಿಗಳೊಂದಿಗೆ ಅಲ್ಲ. ಆಡಳಿತ ವ್ಯವಸ್ಥೆಯಲ್ಲಿ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಗೆ ಆದ್ಯತೆ ನೀಡಲಾಗುವುದು ಎಂದರು.
ಸದಸ್ಯರಾದ ಮಂಜುನಾಥ ಜನಾದ್ರಿ, ಚಂದ್ರಶೇಖರ್ ಗೌಡ, ಎಸಿಇಒ ಶಂಕರ, ವಿವಿಧ ಸಂಸ್ಥೆ ಪ್ರತಿನಿಧಿಗಳಾದ ಶರಣಪ್ಪ, ಹನುಮಂತಪ್ಪ ಉಪ್ಪಾರ, ಬಾಲನಗೌಡ, ಬಸವರಾಜ ಮಾ.ಪಾಟೀಲ್ ಇತರರಿದ್ದರು.

ಹಗರಣದಲ್ಲಿ ಭಾಗಿಯಾದವರ ವಿರುದ್ಧ ಕ್ರಮ

ಬಾಡಿಗೆ ವಸೂಲಿ, ರಸಗೊಬ್ಬರ ವಿತರಣೆ ಸೇರಿ ವಿವಿಧ ಹಗರಣಗಳ ತನಿಖೆಗೆ 2024ರಲ್ಲಿ ಅಂದಿನ ಆಡಳಿತ ಮಂಡಳಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಅದರಂತೆ 2 ವರ್ಷದ ತನಿಖೆ ಪೂರ್ಣಗೊಂಡಿದೆ. ಸಹಕಾರ ಕಾಯ್ದೆ ಅನ್ವಯ ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದ್ದು, ಹಗರಣದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ತಪ್ಪಿದ್ದಲ್ಲ. ಅವ್ಯವಹಾರ ತನಿಖೆಗೆ ಈ ಹಿಂದೆ ಒತ್ತಾಯಿಸಿದಂತೆ ಮುಂದೆಯೂ ಅಧಿಕಾರಿಗಳಿಗೆ ಒತ್ತಡ ಹಾಕಲಾಗುತ್ತಿದ್ದು, ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಆಡಳಿತ ವ್ಯವಸ್ಥೆ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಅಧ್ಯಕ್ಷ ಚನ್ನಪ್ಪ ಮಳಗಿ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net