ಜಂತು ರಹಿತ ಮಕ್ಕಳು ದೇಶದ ಸಂಪತ್ತು

ಡಿಎಚ್​ಒ ಡಾ. ಈಶ್ವರ ಎಸ್​. ಸವಡಿ
ಡಿಎಚ್​ಒ ಡಾ. ಈಶ್ವರ ಎಸ್​. ಸವಡಿ
Published on

ಪ್ರಮುಖ ಮುಖ್ಯಾಂಶಗಳು

  • ಡಿಎಚ್​ಒ ಡಾ. ಈಶ್ವರ ಎಸ್​. ಸವಡಿ ಅಭಿಪ್ರಾಯ
  • ರಾಷ್ಟ್ರೀಯ ಜಂತುಹುಳು ನಿವಾರಣೆ ದಿನ

ಕೊಪ್ಪಳ : ಪ್ರತಿ ಮಗುವಿಗೂ ಜಂತುಹುಳು ಮಾತ್ರೆ ತಪ್ಪದೆ ಸೇವಿಸಬೇಕು. ಜಂತು ರಹಿತ ಮಕ್ಕಳು ದೇಶದ ಸಂಪತ್ತಿದಂತೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಈಶ್ವರ ಎಸ್​. ಸವಡಿ ಹೇಳಿದರು.

ತಾಲೂಕಿನ ಟಣಕಲ್​ ಸರ್ಕಾರಿ ಆದರ್ಶ ವಿದ್ಯಾಲಯ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಜಂತುಹುಳು ನಿವಾರಣೆ ದಿನದ ಜಿಲ್ಲಾಮಟ್ಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
19ವರ್ಷದೊಳಗಿನ ಮಕ್ಕಳಿಗೆ ಅಲ್ಬೆಂಡಜೋಲ್​ ಮಾತ್ರೆ ಉಚಿತವಾಗಿ ನೀಡಲಾಗುತ್ತಿದೆ. ಮಾತ್ರೆ ಸೇವನೆಯಿಂದ ರಕ್ತಹಿನತೆ ನಿಯಂತ್ರಣ, ಪೌಷ್ಠಿಕಾಂಶ ಹೀರಿಕೊಳ್ಳುವಿಕೆ ಸುಧಾರಣೆ, ಏಕಾಗ್ರತೆ ಹಾಗೂ ಕಲಿಕಾ ಸಾಮರ್ಥ್ಯ ಹೆಚ್ಚುತ್ತದೆ. ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಹಾಜರಾತಿ ಸುಧಾರಿಸಲು ನೆರವಾಗುತ್ತದೆ. ಎಲ್ಲಾ ಮಕ್ಕಳು ತಪ್ಪದೇ ಜಂತುನಿವಾರಕ ಮಾತ್ರೆ ಸೇವಿಸಬೇಕು. ಜಂತುನಿವಾರಣಾ ಕಾರ್ಯಕ್ರಮವನ್ನು ಆರು ತಿಂಗಳಿಗೊಮ್ಮೆ ಹಮ್ಮಿಕೊಳ್ಳಲಾಗುತ್ತದೆ. ಜಿಲ್ಲೆಯ ಎಲ್ಲಾ ಶಾಲಾ&-ಕಾಲೇಜುಗಳು, ವಸತಿಶಾಲೆಗಳು, ಬಾಲಮಂದಿರಗಳು ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ಜಿಲ್ಲಾ ಆರ್​.ಸಿ.ಹೆಚ್​. ಅಧಿಕಾರಿ ಡಾ. ಪ್ರಕಾಶ್​.ವಿ ಮಾತನಾಡಿ, 1 ರಿಂದ 2 ವರ್ಷದ ಮಕ್ಕಳಿಗೆ 200 ಮಿ.ಗ್ರಾಂ.ನ ಅರ್ಧ ಮಾತ್ರೆ ಹಾಗೂ 2 ವರ್ಷ ಮೇಲ್ಪಟ್ಟ ಮಕ್ಕಳಿಗೆ 400 ಮಿ.ಗ್ರಾಂ.ನ ಪೂರ್ಣ ಮಾತ್ರೆ ನೀಡಲಾಗುತ್ತದೆ. ಸಣ್ಣ ಮಕ್ಕಳಿಗೆ ಮಾತ್ರೆಯನ್ನು ನೀರಿನಲ್ಲಿ ಕರಗಿಸಿ ನಿಧಾನವಾಗಿ ಕುಡಿಸಬೇಕು. ಮಕ್ಕಳು ಮತ್ತು ಹದಿಹರೆಯದವರಲ್ಲಿ ಕಂಡುಬರುವ ಜಂತುಬಾಧೆ, ಅಪೌಷ್ಠಿಕತೆ ಹಾಗೂ ರಕ್ತಹಿನತೆ ತಡೆಗಟ್ಟುವುದು ಮತ್ತು ಮಾನಸಿಕ ಹಾಗೂ ದೈಹಿಕವಾಗಿ ಸದೃಢವಾಗಿ ಬೆಳೆಯಲು ನೆರವಾಗುತ್ತದೆ ಎಂದರು.
ಶಾಲಾ ಎಸ್​ಡಿಎಂಸಿ ಅಧ್ಯಕ್ಷ ದೇವರಾಜ ಕಿನ್ನಾಳ ಮಾತನಾಡಿ, ಮಕ್ಕಳಲ್ಲಿ ರಕ್ತಹಿನತೆ ತಡೆಗಟ್ಟಲು ಜಂತುನಿವಾರಣಾ ಕಾರ್ಯಕ್ರಮ ಅತ್ಯಂತ ಉಪಯುಕ್ತವಾಗಿದೆ. ಜಂತು ರಹಿತ ಮಕ್ಕಳು ದೇಶದ ಸಂಪತ್ತು. ಆರೋಗ್ಯವಂತ ಸಮಾಜ ನಿಮಾರ್ಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶ, ಕಿನ್ನಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ವಿದ್ಯಾಶ್ರೀ, ಶಾಲೆ ಮುಖ್ಯ ಶಿಕ್ಷಕ ಪ್ರಕಾಶ ತಗಡಿನಮನಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ.ಪಿ, ಪ್ರಮುಖರಾದ ಸುನಿತಾ ಹಾಗೂ ಎಸ್​ಡಿಎಂಸಿ ಉಪಾಧ್ಯಕ್ಷ, ಸದಸ್ಯರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net