ಅನುಪಾಲನಾ ಗೃಹದಲ್ಲಿ ಬುದ್ಧಿಮಾಂದ್ಯ ಸಾವು

ಕೊಪ್ಪಳದಲ್ಲಿರುವ ನಿರಾಶ್ರಿತ ಬುದ್ಧಿಮಾಂದ್ಯ ಪುರುಷರ ಅನುಪಾಲನಾ ಗೃಹ.
ಕೊಪ್ಪಳದಲ್ಲಿರುವ ನಿರಾಶ್ರಿತ ಬುದ್ಧಿಮಾಂದ್ಯ ಪುರುಷರ ಅನುಪಾಲನಾ ಗೃಹ.
Published on

ಪ್ರಮುಖ ಮುಖ್ಯಾಂಶಗಳು

  • * 9 ತಿಂಗಳಲ್ಲಿ 6 ಮಂದಿ ಸಾವು
ಕೊಪ್ಪಳ: ನಗರದ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಡಿಯಲ್ಲಿ ನಡೆಯುತ್ತಿರುವ ನಿರಾಶ್ರಿತ ಬುದ್ಧಿಮಾಂದ್ಯ ಪುರುಷರ ಅನುಪಾಲನಾ ಗೃಹದಲ್ಲಿ ಮಂಗಳವಾರ ಬೆಂಗಳೂರು ಮೂಲದ ಬಬ್ಲೂ (35) ಮೃತಪಟ್ಟಿದ್ದಾರೆ. ಕೇವಲ ಒಂಬತ್ತು ತಿಂಗಳ ಹಿಂದೆಯಷ್ಟೇ ಆರಂಭವಾದ ಈ ಕೇಂದ್ರದಲ್ಲಿ ಈವರೆಗೆ ಆರು ಮಂದಿ ಸಾವಿಗೀಡಾಗಿದ್ದಾರೆ.
ಕ್ಯಾನ್ಸರ್ ಹಾಗೂ ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಬಬ್ಲೂ ಅವರನ್ನು ಚಿಕಿತ್ಸೆಗಾಗಿ ಆಗಾಗ ಕೊಪ್ಪಳ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಇತ್ತೀಚೆಗೆ ಆತನ ಸ್ಥಿತಿ ಗಂಭೀರವಾಗಿದ್ದನ್ನು ಗಮನಿಸಿದ್ದ ವೈದ್ಯರು, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ದಾಖಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಆದರೆ, ಅಧಿಕಾರಿಗಳು ವೈದ್ಯರ ಈ ತುರ್ತು ನಿರ್ದೇಶನವನ್ನು ಪಾಲಿಸುವಲ್ಲಿ ವಿಳಂಬ ಮಾಡಿದ್ದರಿಂದ ಮಂಗಳವಾರ ಬೆಳಗ್ಗೆ ಅನುಪಾಲನಾ ಗೃಹದಲ್ಲೇ ಯುವಕ ಕೊನೆಯುಸಿರೆಳೆದಿದ್ದಾನೆ.
ಆರಂಭದಲ್ಲಿ ಬೆಂಗಳೂರಿನಿಂದ ಸುಮಾರು 20 ಜನರನ್ನು ಇಲ್ಲಿಗೆ ಕರೆತರಲಾಗಿತ್ತು. ಆದರೆ ನಿರ್ವಹಣಾ ವೈಫಲ್ಯದಿಂದಾಗಿ ಈಗಾಗಲೇ ಆರು ಮಂದಿ ಮೃತಪಟ್ಟಿದ್ದಾರೆ. ಕಳೆದ ಫೆಬ್ರವರಿಯ ಒಂದೇ ವಾರದಲ್ಲಿ ಇಬ್ಬರು ಮೃತಪಟ್ಟಿರುವುದು ಇಲ್ಲಿನ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ನಿವಾಸಿಗಳಿಗೆ ಪೌಷ್ಟಿಕ ಆಹಾರ, ಶುದ್ಧ ಕುಡಿವ ನೀರು ಹಾಗೂ ಅನಾರೋಗ್ಯಕ್ಕೊಳಗಾದವರಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ಎನ್ನಲಾಗಿದೆ. ಕೇಂದ್ರವನ್ನು ಸಮರ್ಪಕವಾಗಿ ನಡೆಸಲು ಅಗತ್ಯವಿರುವಷ್ಟು ಸಿಬ್ಬಂದಿ ಸಹ ಇಲ್ಲಿಲ್ಲ.
"

ವಾರದ ಹಿಂದೆ ಯುವಕನನ್ನು ಆಸ್ಪತ್ರೆಗೆ ಕರೆದೊಯ್ದಗ ಹುಬ್ಬಳ್ಳಿಗೆ ಕರೆದೊಯ್ಯಲು ವೈದ್ಯರು ಹೇಳಿದ್ದರು. ಆದರೆ ನಮ್ಮ ಅಧಿಕಾರಿಗಳು ಬೆಂಗಳೂರಿಗೆ ಹೋಗಿದ್ದರಿಂದ ತಕ್ಷಣ ಕರೆದೊಯ್ಯಲು ಸಾಧ್ಯವಾಗಲಿಲ್ಲ. ಮಂಗಳವಾರ ಬೆಳಗ್ಗೆ ಆತ ಮೃತಪಟ್ಟಿದ್ದಾನೆ.

"

ನಿರಾಶ್ರಿತ ಬುದ್ಧಿಮಾಂದ್ಯರನ್ನು ಅನುಪಾಲನಾ ಗೃಹಕ್ಕೆ ಕಳಿಸಿದ್ದಾರೆ. ಯುವಕನಿಗೆ ಕ್ಯಾನ್ಸರ್ ಹಾಗೂ ಬಹುಅಂಗಾಂಗ ವೈಫಲ್ಯವಿತ್ತು. ಚಿಕಿತ್ಸೆ ಕೊಡಿಸಿದ್ದೆವು. ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕೇಂದ್ರದ ಬಹುತೇಕರಿಗೆ ಅನಾರೋಗ್ಯ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net