ಗಂಗಾವತಿಯಲ್ಲಿ ಪರಿಸರ ಜಾಗೃತಿ ಅಭಿಯಾನವನ್ನು ಸಸಿ ನೆಡುವ ಮೂಲಕ ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡರ್ ಚಾಲನೆ ನೀಡಿದರು. ಲಯನ್ಸ್ ಕ್ಲಬ್ ತಾಲೂಕು ಅಧ್ಯಕ್ಷ ಡಾ.ಜಿ.ದೇವರಾಜ, ಪದಾಧಿಕಾರಿಗಳಾದ ಡಾ.ಮಲ್ಲನಗೌಡ, ಚೇತನ್ ಹಿರೇಮಠ ಇತರರಿದ್ದರು.
ಗಂಗಾವತಿ: ಜಾಗತಿಕ ತಾಪಮಾನ ನಿಯಂತ್ರಣಕ್ಕೆ ಪರಿಸರ ಸಂರಕ್ಷಣೆಯೊಂದೇ ಮಾರ್ಗ. ವೃತ್ತಿ ಜತೆಗೆ ಮರಗಳನ್ನು ಸಂರಕ್ಷಿಸುವ ಪ್ರವೃತ್ತಿ ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡರ್ ಹೇಳಿದರು.
ಚಂದ್ರಹಾಸ ಥಿಯೇಟರ್ ಸಂಪರ್ಕ ರಸ್ತೆಯಲ್ಲಿ ನಗರಸಭೆ ಮತ್ತು ಲಯನ್ಸ್ ಕ್ಲಬ್ ತಾಲೂಕು ಘಟಕ ಭಾನುವಾರ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು. ಮರಗಳ ಸಂಖ್ಯೆ ಕಡಿಮೆಯಾದ ಪರಿಣಾಮ ಮಳೆ ಪ್ರಮಾಣದಲ್ಲೂ ಕೊರತೆಯಾಗಿದೆ. ಜಲಾಶಯದಲ್ಲಿ ನೀರು ತಗ್ಗಿದರೆ, ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಲಿದೆ. ಪ್ರತಿಯೊಬ್ಬರೂ ಗಿಡಗಳನ್ನು ಬೆಳೆಸುವುದರ ಜತೆಗೆ ಪರಿಸರ ಸಂರಕ್ಷಣೆಗೆ ಸಮಯ ಮೀಸಲಿಡಬೇಕೆಂದು ಸಲಹೆ ನೀಡಿದರು.
ಲಯನ್ಸ್ ಕ್ಲಬ್ ತಾಲೂಕು ಅಧ್ಯಕ್ಷ ಡಾ.ಜಿ.ದೇವರಾಜ ಮಾತನಾಡಿ, ನಗರದ ಪ್ರತಿ ರಸ್ತೆ ಪಕ್ಕದಲ್ಲಿ ಗಿಡಗಳನ್ನು ಬೆಳೆಸುವ ಸಂಕಲ್ಪ ಮಾಡಿದ್ದು, ಸಸಿ ನೆಡುವುದು ಮಾತ್ರವಲ್ಲ, ಸಾರ್ವಜನಿಕರಿಗೆ ಆರೈಕೆ ಜವಾಬ್ದಾರಿ ನೀಡಲಾಗುವುದು. ವರ್ಷವಿಡೀ ಪರಿಸರ ಸಂರಕ್ಷಣೆ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ತ್ಯಾಜ್ಯ ವೈಜ್ಞಾನಿಕ ವಿಲೇವಾರಿ ಕುರಿತು ನಗರಸಭೆ ಪರಿಸರ ಇಂಜಿನಿಯರ್ ಶರಣಪ್ಪ ಮಾಹಿತಿ ನೀಡಿದರು. ಮೇಲ್ವಿಚಾರಕ ಯೂಸ್ೂ, ಮೋಯಿನ್ ಪಟೇಲ್, ಲಯನ್ಸ್ ಕ್ಲಬ್ ಪದಾಧಿಕಾರಿಗಳಾದ ಡಾ.ಮಲ್ಲನಗೌಡ, ಡಾ.ಹನುಮಂತಪ್ಪ, ಸುರೇಶ ಬಂಬ್, ಚೇತನ್ ಹಿರೇಮಠ, ಡಾ.ಕೆ.ಎನ್.ಮಧುಸೂದನ್ ಇತರರಿದ್ದರು.