

ಪ್ರಮುಖ ಮುಖ್ಯಾಂಶಗಳು
ಕಾರಟಗಿ: ಶ್ರಾವಣಮಾಸದ ನಿಮಿತ್ತ ಶ್ರೀ ಶರಣಬಸವೇಶ್ವರ ಹಾಗೂ ಮಹದೇಶ್ವರ ಸೇವಾ ಟ್ರಸ್ಟ್‌ನಿಂದ ಪಟ್ಟಣ ಪರ್ಯಟನೆ ಮೂಲಕ ನಿತ್ಯ ಭಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಶರಣಬಸವೇಶ್ವರ ಭಾವಚಿತ್ರ ಹಾಗೂ ಈಶ್ವರ ಮೂರ್ತಿಯನ್ನು ಹೊತ್ತು ಬೆಳಗ್ಗೆ 6 ರಿಂದ 9ರವರೆಗೆ ಭಜನೆ ಮಾಡುತ್ತ ನಿತ್ಯ ಒಂದು ವಾರ್ಡ್‌ನಲ್ಲಿ ಸಂಚರಿಸಿ ಜನರಲ್ಲಿ ಭಕ್ತಿ ಮೂಡಿ ಸುತ್ತಿದ್ದಾರೆ. ಪ್ರತಿ ವಾರ್ಡ್‌ನಲ್ಲಿ ಮಹಿಳೆಯರು ಭಜನಾ ತಂಡ ಸಾಗುವ ರಸ್ತೆಯಲ್ಲಿ ನೀರು, ರಂಗೋಲಿ ಹಾಕಿ ಸ್ವಾಗತಿಸುತ್ತಿದ್ದಾರೆ.
ಆ.13ರಂದು ಭಜನೆ ಕಾರ್ಯಕ್ರಮ ಆರಂಭ ವಾಗಿದ್ದು, ಗುರುವಾರ ಜೆಪಿ ನಗರದಲ್ಲಿ ನಡೆಯಿತು ಎಂದು ತಿಳಿಸಿದ ಭಜನೆ ಮಂಡಳಿ ಮುಖ್ಯಸ್ಥ ಸಿದ್ರಾಮಯ್ಯಸ್ವಾಮಿ ಹಿರೇಮಠ ಅವರು, ತಿಂಗಳ ಕಾಲ ಭಜನಾ ಕಾರ್ಯಕ್ರಮ ದಿನ ಕ್ಕೊಂದು ವಾರ್ಡ್‌ನಲ್ಲಿ ನಡೆಯಲಿದೆ ಎಂದರು. ಜೆ.ಪಿ.ನಗರದಲ್ಲಿ ಪುರಸಭೆ ಸದಸ್ಯರಾದ ಸೋಮಶೇಖರ ಬೇರ‌್ಗಿ, ಬಸವರಾಜ ಕೊಪ್ಪದ ಸಾಥ್ ನೀಡಿದರೆ, ಉದ್ಯಮಿ ಕೆ.ನಾಗಪ್ಪ ಸ್ವಾಗತಿಸಿದರು.
ಕೊನೇ ದಿನ ಶರಣಬಸವೇಶ್ವರ ಹಾಗೂ ಮಹದೇಶ್ವರನಿಗೆ ಪೂಜೆ ಸಲ್ಲಿಸಿ, ಅನ್ನಸಂತರ್ಪಣೆ ನಡೆಸಿ ಭಜ ಮಂಗಲೋತ್ಸವ ನಡೆಯಲಿದೆ.
ಅರ್ಚಕ ಶರಣಯ್ಯಸ್ವಾಮಿ, ರುದ್ರಮುನಿ ಸ್ವಾಮಿ, ಮಂಜುನಾಥ ಶೀಲವಂತರ್, ಮಲ್ಲಪ್ಪ ಕೊಟಗಿ, ಶರಣಬಸವ ಕೊಟಗಿ, ರಾಜಶೇಖರ ಕೋರಿ, ಬಸವರಾಜ ಚಿನಿವಾಲರ್, ಅಮರೇಶ ಎಸ್. ಇತರರಿದ್ದರು.