ಕ್ಷೇತ್ರದ ಸಮಸ್ಯೆ ಅಧಿವೇಶನದಲ್ಲಿ ಪ್ರಸ್ತಾಪಿಸಿ

ಸಿ.ವಿ. ಚಂದ್ರಶೇಖರ್​
ಸಿ.ವಿ. ಚಂದ್ರಶೇಖರ್​
Published on

ಪ್ರಮುಖ ಮುಖ್ಯಾಂಶಗಳು

  • ಸಿವಿ ಚಂದ್ರಶೇಖರ್​ ಆಗ್ರಹ

ಕೊಪ್ಪಳ : ಕ್ಷೇತ್ರದ ಪ್ರಮುಖ ಸಮಸ್ಯೆಗಳನ್ನು ವಿಧಾನಸಭೆ ಅಧಿವೇಶನದಲ್ಲಿ ಪರಿಣಾಮಕಾರಿಯಾಗಿ ಪ್ರಸ್ತಾಪಿಸಿ, ಸರ್ಕಾರದಿಂದ ಅವುಗಳಿಗೆ ಪರಿಹಾರ ದೊರಕಿಸುವಂತೆ ಶಾಸಕ ರಾಘವೇಂದ್ರ ಹಿಟ್ನಾಳ್​ ಕ್ರಮವಹಿಸಬೇಕು ಎಂದು ಜೆಡಿಎಸ್​ ರಾಜ್ಯ ಕೋರ್​ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್​ ಒತ್ತಾಯಿಸಿದ್ದಾರೆ.

ಮೂರನೇ ಬಾರಿ ಶಾಸಕರಾಗಿದ್ದರೂ ಕ್ಷೇತ್ರದ ಸಮಸ್ಯೆಗಳನ್ನು ಅಧಿವೇಶನದಲ್ಲಿ ಸಮರ್ಪಕವಾಗಿ ಚರ್ಚಿಸಿ ಸರ್ಕಾರದ ಗಮನ ಸೆಳೆದಿರುವುದು ಕಂಡುಬಂದಿಲ್ಲ. ಕಳೆದ ಅಧಿವೇಶನದಲ್ಲಿ ಕೈಗಾರಿಕೆಗಳಿಂದ ಉಂಟಾಗುತ್ತಿರುವ ಸಮಸ್ಯೆಗಳನ್ನು ನಾಮಕಾವಾಸ್ತೆ ಪ್ರಸ್ತಾಪಿಸಿ ಅದನ್ನೇ ದೊಡ್ಡ ಸಾಧನೆ ಎಂಬಂತೆ ಬಿಂಬಿಸಲಾಗಿದೆ. ಆದರೆ ಮಾಲಿನ್ಯ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.
ಕೇಂದ್ರ ಸಚಿವ ಎಚ್​.ಡಿ. ಕುಮಾರಸ್ವಾಮಿ ಅವರೊಂದಿಗೆ ಸಂಪರ್ಕದಲ್ಲಿದ್ದು, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಮೂಲಕ ಕ್ರಮ ಕೈಗೊಳ್ಳುವಂತೆ ಮಾಡದಿದ್ದರೆ ಕೊಪ್ಪಳದಲ್ಲಿ ಯಾವುದೇ ಕ್ರಮ ಆಗುತ್ತಿರಲಿಲ್ಲ. ಕ್ಷೇತ್ರದ ಅಭಿವೃದ್ಧಿ ಯೋಜನೆಗಳಿಗೆ ನೂರಾರು ಕೋಟಿ ರೂಪಾಯಿ ಬಿಡುಗಡೆಯಾಗಿದೆ ಎಂದು ಹೇಳಲಾಗುತ್ತಿದ್ದರೂ ಅಭಿವೃದ್ಧಿ ಕಾಣುತ್ತಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಗಳ ಸ್ಥಿತಿ ಹದಗೆಟ್ಟಿದ್ದು, ಬರದಿಂದ ರೈತರು ಗುಳೆ ಹೋಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ನೈರ್ಮಲ್ಯ ಹಾಗೂ ಮಾದಕ ವಸ್ತುಗಳ ಮಾರಾಟದ ಸಮಸ್ಯೆಗಳೂ ಹೆಚ್ಚಾಗುತ್ತಿವೆ ಎಂದರು.
ತಮ್ಮನ್ನು ಸಚಿವರನ್ನಾಗಿ ಮಾಡಲಿಲ್ಲ ಎಂಬ ಕಾರಣಕ್ಕೆ ಬರಗಾಲದ ಸಭೆ ಹಾಗೂ ಅಧಿವೇಶನಕ್ಕೆ ಗೈರುಹಾಜರಾಗದೆ, ತಮ್ಮನ್ನು ಆಯ್ಕೆ ಮಾಡಿದ ಮತದಾರರ ಹಿತಾಸಕ್ತಿಗೆ ಆದ್ಯತೆ ನೀಡಬೇಕು. ಕೈಗಾರಿಕೆಗಳ ಸಮಸ್ಯೆ ಹಾಗೂ ಜನರ ಬೇಡಿಕೆಗಳ ಕುರಿತು ತಮ್ಮ ನಿಲುವು ಏನು ಮತ್ತು ಕಳೆದ ಅಧಿವೇಶನದ ಬಳಿಕ ಬೇಡಿಕೆಗಳ ಈಡೇರಿಕೆಗೆ ಕೈಗೊಂಡ ಕ್ರಮಗಳೇನು ಎಂಬುದನ್ನು ಜನತೆಗೆ ಸ್ಪಷ್ಟಪಡಿಸಬೇಕು ಎಂದು ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net