ಕೊಪ್ಪಳ : ಜಿಲ್ಲೆ ಬರ ಪರಿಸ್ಥಿತಿಯ ಪರಿವೀಕ್ಷಣೆಗೆ ಸರ್ಕಾರದಿಂದ ನೇಮಕಗೊಂಡಿರುವ ಸಚಿವ ಶಿವರಾಜ್ ತಂಗಡಗಿ ಬುಧವಾರದಿಂದಲೇ ಎಲ್ಲಾ ತಾಲೂಕುಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಬೇಕು ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್ ಆಗ್ರಹಿಸಿದ್ದಾರೆ.
ಪರಿವೀಕ್ಷಣೆ ವರದಿಯನ್ನು ಶೀಘ್ರದಲ್ಲೇ ಸಿಎಂ, ಡಿಸಿಎಂಗೆ ಸಲ್ಲಿಸುವಂತೆ ಸರ್ಕಾರ ಸೂಚಿಸಿರುವ ಹಿನ್ನೆಲೆಯಲ್ಲಿ ಸಚಿವರು ವಿಳಂಬ ಮಾಡದೆ ಜಿಲ್ಲೆಯ ವಾಸ್ತವ ಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಬೇಕು. ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಲ್ಲಿ ವಾಡಿಕೆಗಿಂತ ಶೇ.48ರಷ್ಟು ಮಳೆ ಕೊರತೆಯಾಗಿದ್ದು, 1.24 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯೇ ಆಗಿಲ್ಲ. ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿಯೂ 56 ಸಾವಿರ ಹೆಕ್ಟೇರ್ನಲ್ಲಿ ಭತ್ತದ ಬಿತ್ತನೆ ನಡೆದಿಲ್ಲ. ಬಿತ್ತನೆಯಾದ ಬೆಳೆಗಳೂ ಮಳೆಯ ಕೊರತೆಯಿಂದ ಒಣಗುತ್ತಿದ್ದು, ಜಾನುವಾರುಗಳ ಖರೀದಿ-ಮಾರಾಟದ ಮೇಲೂ ಬರದ ತೀವ್ರ ಪರಿಣಾಮ ಬೀರಿದೆ ಎಂದರು.
ತುಂಗಭದ್ರಾ ನೀರು ಬಿಡುಗಡೆಗೆ ರೈತರು ಹೋರಾಟ ನಡೆಸುತ್ತಿದ್ದು, ಹಿಂಗಾರು ಬೆಳೆಗಳಿಗೆ ಪರ್ಯಾಯ ಬಿತ್ತನೆ ಬೀಜವನ್ನು ಉಚಿತವಾಗಿ ವಿತರಿಸಬೇಕು ಎಂಬ ಬೇಡಿಕೆ ವ್ಯಕ್ತವಾಗಿದೆ. ಜಿಲ್ಲೆಯನ್ನು ತಕ್ಷಣ ಬರಪೀಡಿತ ಜಿಲ್ಲೆ ಎಂದು ಘೋಷಿಸಿದರೆ ಮಾತ್ರ ಅಗತ್ಯ ತಾಂತ್ರಿಕ ಹಾಗೂ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ.
ಜೆಡಿಎಸ್ ಸೇರಿದಂತೆ ವಿವಿಧ ಸಂಘಟನೆಗಳು ತಮ್ಮ ಬೇಡಿಕೆಗಳನ್ನು ಈಗಾಗಲೇ ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದು, ಅವುಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಜಿಲ್ಲೆಯಿಂದ ಇಬ್ಬರು ಸಚಿವರು ಇರುವುದರಿಂದ ರೈತರಿಗೆ ಹೆಚ್ಚಿನ ನೆರವು ದೊರೆಯುವ ನಿರೀಕ್ಷೆಯಿದ್ದು, ಸಚಿವರು ರೈತರ ಸಂಕಷ್ಟಕ್ಕೆ ತ್ವರಿತವಾಗಿ ಸ್ಪಂದಿಸಬೇಕು ಎಂದು ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.