ಚಿಂತಾಮಣಿಯಲ್ಲಿ ಭಕ್ತರ ದಂಡು

ಗಂಗಾವತಿ ತಾಲೂಕಿನ ಚಿಂತಾಮಣಿ ತುಂಗಭದ್ರ ನದಿ ತೀರದಲ್ಲಿ ಮಕರ ಸಂಕ್ರಾಂತಿ ಹಬ್ಬದ ಪುಣ್ಯಸ್ನಾನ ಮಾಡಿದರು.
ಗಂಗಾವತಿ ತಾಲೂಕಿನ ಚಿಂತಾಮಣಿ ತುಂಗಭದ್ರ ನದಿ ತೀರದಲ್ಲಿ ಮಕರ ಸಂಕ್ರಾಂತಿ ಹಬ್ಬದ ಪುಣ್ಯಸ್ನಾನ ಮಾಡಿದರು.
Published on
ಗಂಗಾವತಿ: ಮಕರ ಸಂಕ್ರಾಂತಿ ನಿಮಿತ್ತ ತಾಲೂಕಿನ ಆನೆಗೊಂದಿ ವ್ಯಾಪ್ತಿಯ ತುಂಗಭದ್ರಾ ನದಿ ತೀರದಲ್ಲಿ ವಿವಿಧ ಜಿಲ್ಲೆಗಳಿಂದ ಬಂದಿದ್ದ ಜನತೆ ಪರ್ವಕಾಲದ ಪುಣ್ಯಸ್ನಾನ ಮಾಡುವ ಮೂಲಕ ಸಂಕ್ರಮಣ ಹಬ್ಬ ಗುರುವಾರ ಆಚರಿಸಿದರು.
ತುಂಗಭದ್ರಾ ನದಿತೀರದಲ್ಲಿ ನೀರಿನ ಕೊರತೆಯಿದ್ದರೂ, ಜನಜಂಗುಳಿ ಕಡಿಮೆಯಾಗಿರಲಿಲ್ಲ. ಆನೆಗೊಂದಿ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆಯಿಂದ ಗಂಟೆಗಟ್ಟಲೇ ರಸ್ತೆಯಲ್ಲಿ ನಿಲ್ಲುವಂತ ಸ್ಥಿತಿ ಬಂದಿದ್ದು, ಚಿಂತಾಮಣಿ ಬಳಿ ವಾಹನ ಸಂಚಾರ ನಿಷೇಧಿಸಲಾಗಿತ್ತು.
ತಾಲೂಕಿನ ಆನೆಗೊಂದಿ ಚಿಂತಾಮಣಿ, ನವವೃಂದಾವನಗಡ್ಡಿ, ಹನುಮನಹಳ್ಳಿ ಋಷ್ಯಮುಖ ಪರ್ವತ, ವಿರುಪಾಪುರ ಗಡ್ಡಿ ಮತ್ತು ಗೂಗಿಬಂಡಿ ಕ್ಯಾಂಪ್ ಬಳಿ ತುಂಗಭದ್ರಾ ನದಿಯಲ್ಲಿ ಸ್ಥಳೀಯರು ಸೇರಿ ವಿವಿಧ ಜಿಲ್ಲೆಯ ಭಕ್ತರು ಜಮಾಯಿಸಿದ್ದು, ಅಂಜನಾದ್ರಿ ಬೆಟ್ಟದ ಬಳಿ ರಸ್ತೆ ಎರಡು ಬದಿಯಲ್ಲೂ ಅಂಗಡಿಗಳು ಹಾಕಿದ್ದರಿಂದ ಟ್ರಾಫಿಕ್ ಕಿರಿಕಿರಿಯಾಗಿದ್ದು, ನಿಯಂತ್ರಿಸುವಲ್ಲಿ ಪೊಲೀಸರು ಹರ ಸಾಹಸ ನಡೆಸಿದರು. ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ರಾಜ್ಯದ ಕಲಬುರಗಿ, ವಿಜಯಪುರ, ಬೀದರ್, ರಾಯಚೂರು, ಬಳ್ಳಾರಿ, ಕೊಪ್ಪಳ, ಗದಗ, ಹುಬ್ಬಳಿಯಿಂದಲೂ ಪುಣ್ಯಸ್ನಾನಕ್ಕಾಗಿ ಬಂದಿದ್ದರು.
ಸಂಪ್ರದಾಯ: ನದಿ ನೀರಲ್ಲಿ ಎಳ್ಳು ಮತ್ತು ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡಿದ ಭಕ್ತರು, ಮರಳು ಲಿಂಗ ಪ್ರತಿಷ್ಟಾಪಿಸಿ ಪೂಜೆ ನೆರವೇರಿಸಿದರು. ಸುಗ್ಗಿ ಹಬ್ಬದಂತೆ ಜೋಳ, ಸಜ್ಜೆ ರೊಟ್ಟಿ, ಎಣ್ಣೆ ಬದನೆ, ಕಾಳು ಸೇರಿ ದೇಸಿ ಖಾದ್ಯ ಸೇವಿಸಿ ಸಂಭ್ರಮಿಸಿದರು. ನಂತರ ಎಳ್ಳುಬೆಲ್ಲ ನೀಡುವದರೊಂದಿಗೆ ಶುಭಾಶಯ ವಿನಿಮಯ ಮಾಡಿಕೊಂಡರು. ಅಂಜನಾದ್ರಿ ಬೆಟ್ಟಕ್ಕೆ ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸಿದ್ದರಿಂದ ಸಂಚಾರಕ್ಕೆ ತೊಂದರೆಯಾಗಿದ್ದು, ಬೀದಿ ಬದಿ ಅಂಗಡಿಕಾರರಿಗೆ ಭರ್ಜರಿ ವ್ಯಾಪಾರವಾಯಿತು. ಆಂಧ್ರ ವಲಸಿಗ ಕ್ಯಾಂಪ್‌ನಲ್ಲಿ ಪೊಂಗಲ್ ಹೆಸರಿನಲ್ಲಿ ಹಬ್ಬ ಆಚರಿಸಿದ್ದು, ಗೋ ಭರಣಿ (ಕುಳ್ಳು) ಸುಡುವುದರ ಜತೆಗೆ ಚಿತ್ತಾರದ ರಂಗೋಲಿ ಹಾಕುವ ಮೂಲಕ ಹಬ್ಬವನ್ನು ಸ್ವಾಗತಿಸಿದರು.
ಮಕರ ಸಂಕ್ರಾಂತಿ ಹಬ್ಬದ ನಿಮಿತ್ತ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಕೋಳಿ ಪಂದ್ಯಕ್ಕೆ ಮಹತ್ವವಿದ್ದು, ತಾಲೂಕಿನ ಆಂಧ್ರ ಕ್ಯಾಂಪ್‌ನಲ್ಲೂ ಸಂಪ್ರದಾಯಕ ರೀತಿಯಲ್ಲಿ ಕೋಳಿ ಪಂದ್ಯ ಆಯೋಜಿಸಲಾಗಿತ್ತು.
ಲಯನ್ಸ್ ಕ್ಲಬ್: ಮಕರ ಸಂಕ್ರಾಂತಿ ನಿಮಿತ್ತ ನಗರದ ಲಯನ್ಸ್ ಮಾದರಿಯ ಹಿ.ಪ್ರಾ. ಮತ್ತು ಪ್ರೌಢಶಾಲೆಯಲ್ಲಿ ‘ಸುಗ್ಗಿ ಸಂಭ್ರಮ’ ಆಚರಿಸಲಾಯಿತು. ಹಳ್ಳಿಸೊಗಡಿನೊಂದಿಗೆ ಸುಗ್ಗಿ ಕಾಲದ ಸನ್ನಿವೇಶವನ್ನು ರಚಿಸಿ ಸಂಭ್ರಮಾಚರಣೆ ಮಾಡಿದರು. ಗುಡಿಸಲು, ಬಾವಿ, ಎತ್ತು, ಬಂಡಿ, ಸುಗ್ಗಿಯ ಕಣ ಮುಂತಾದವುಗಳನ್ನು ರಚಿಸಿ ಗೋಧಿ, ಭತ್ತ, ಜೋಳ, ರಾಗಿ ಮುಂತಾದ ಧಾನ್ಯಗಳ ರಾಶಿ ಪ್ರಾತ್ಯಕ್ಷ ನಡೆಯಿತು. ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ಸುಗ್ಗಿ ಹಾಡಿಗೆ ಹೆಜ್ಜೆ ಹಾಕಿದರು. ಸಂಪ್ರದಾಯ ಮತ್ತು ವೈಜ್ಞಾನಿಕ ಹಿನ್ನೆಲೆ ಕುರಿತು ಆಡಳಿತಾಧಿಕಾರಿ ಚಂದ್ರೇಗೌಡ ಪೊ.ಪಾಟೀಲ್ ಮಾತನಾಡಿದರು.
ಲಯನ್ಸ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ.ಜಿ.ಚಂದ್ರಪ್ಪ, ಕ್ಲಬ್ ತಾಲೂಕಾಧ್ಯಕ್ಷ ಡಾ.ಶಿವಕುಮಾರ ಮಾ.ಪಾಟೀಲ್, ಕಾರ್ಯದರ್ಶಿ ಶಿವಕುಮಾರ್ ಗಾಳಿ, ಮುಖ್ಯ ಶಿಕ್ಷಕರಾದ ಜಗನ್ನಾಥದಾಸ್, ಗುರುಪಾದಯ್ಯ ಹಿರೇಮಠ,ಪ್ರಭು ಹಿರೇಮಠ ಇತರರಿದ್ದರು.
ಜಾಗೃತಿ ಅಭಿಯಾನ: ತಾಲೂಕಿನ ಆನೆಗೊಂದಿ ಚಿಂತಾಮಣಿಯಲ್ಲಿ ಮಕರ ಸಂಕ್ರಾಂತಿ ಪುಣ್ಯಸ್ನಾನಕ್ಕಾಗಿ ಬರುವ ಜನರಲ್ಲಿ ತುಂಗಭದ್ರಾ ನದಿ ಸ್ವಚ್ಛತೆ ಕುರಿತು ಕಿಷ್ಕಿಂಧಾ ಯುವ ಚಾರಣ ಬಳಗ ಜಾಗೃತಿ ಅಭಿಯಾನ ನಡೆಸಿತು.
ಲಿವ್ ವಿತ್ ಹುಮ್ಯಾನಿಟಿ, ಹುಬ್ಬಳ್ಳಿಯ ವರದಶ್ರೀ ೌಂಡೇಷನ್, ಶ್ರೀ ರಂಗದೇವರಾಯಲು ೌಂಡೇಷನ್ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದು, ಸ್ನಾನಕ್ಕಾಗಿ ಬರುವ ಜನರಿಗೆ ಸೋಪು, ಶಾಂಪು ಬಳಸದೇ ಕಡಲೆ ಹಿಟ್ಟು ಉಪಯೋಗಿಸುವಂತೆ ಸಲಹೆ ನೀಡಲಾಯಿತು. ಕಡಲೆ ಹಿಟ್ಟಿನ ಪ್ಯಾಕೇಟ್‌ಗಳನ್ನು ಉಚಿತ ವಿತರಿಸಲಾಯಿತು. ಸ್ನಾನಕ್ಕಾಗಿ ಬಂದವರಿಂದ ಸೋಪು, ಶಾಂಪುಗಳನ್ನು ಪಡೆದು, ಕಡಲೆ ಹಿಟ್ಟು ನೀಡಲಾಯಿತು.ಚಾರಣ ಬಳದ ಸಂಚಾಲಕ ಜಿ.ಆರ್.ಅರ್ಜುನ ಮಾತನಾಡಿ, ನದಿ ಸ್ವಚ್ಛತೆಯ ಮೇಲೆ ಮನುಕುಲದ ಉಳಿವಿದ್ದು, ನೀರು ಕಲುಷಿತಗೊಳ್ಳುವ, ಜಲಚರಗಳಿಗೆ ಹಾನಿಯಾಗುವ ಯಾವುದೇ ರಾಸಾಯನಿಕ ವಸ್ತು ಬಳಸಬಾರದೆಂದರು. ರಾಜವಂಶಸ್ಥೆ ಲಲಿತಾರಾಣಿರಾಯಲು, ಬಳಗದ ಪದಾಧಿಕಾರಿಗಳಾದ ಸುದರ್ಶನ ವರ್ಮಾ, ವಿಷ್ಣುತೀರ್ಥ ನವಲಿ, ಮಂಜು ಇಂಡಿ, ಮಧು, ಸುರೇಶ ಸಮಗಂಡಿ, ಶ್ರೀಧರ, ಮುತ್ತು, ಕಲ್ಯಾಣ್, ದೇವರಾಜ್ ಹೇಮಗುಡ್ಡ, ಮಂಜುಳಾ, ವರ್ಷಾ, ವೈಷ್ಣವಿ ಗುಂಡೂರು, ಮದ್ದಾನಪ್ಪ, ಅಯ್ಯಣ್ಣ, ಪಂಪಾಪತಿ ಮುದಗಲ್, ಆಕಾಶ ನಾಗಲೀಕರ್, ಗುಂಡೂರು ಪವನಕುಮಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net