ಬೆಳೆ ಹಾನಿ ಸಮೀಕ್ಷೆ ವರದಿ ನಿಖರವಾಗಿರಲಿ

ಯಲಬುರ್ಗಾ ತಾಲೂಕಿನ ಸಂಗನಾಳದಲ್ಲಿ ಸಚಿವರಾದ ಬಸವರಾಜ ರಾಯರಡ್ಡಿ ಮತ್ತು ಶಿವರಾಜ ತಂಗಡಗಿ ಗುರುವಾರ ಭೇಟಿ ನೀಡಿ ಬರ ವೀಕ್ಷಣೆ ಮಾಡಿದರು.
ಯಲಬುರ್ಗಾ ತಾಲೂಕಿನ ಸಂಗನಾಳದಲ್ಲಿ ಸಚಿವರಾದ ಬಸವರಾಜ ರಾಯರಡ್ಡಿ ಮತ್ತು ಶಿವರಾಜ ತಂಗಡಗಿ ಗುರುವಾರ ಭೇಟಿ ನೀಡಿ ಬರ ವೀಕ್ಷಣೆ ಮಾಡಿದರು.
Published on

ಯಲಬುರ್ಗಾ: ಮಳೆ ಕೊರತೆಯಿಂದ ವಿವಿಧ ಬೆಳೆಗಳು ಹಾನಿಗೀಡಾದ ಹಿನ್ನೆಲೆಯಲ್ಲಿ ತಾಲೂಕಿನ ಸಂಗನಾಳ ಹಾಗೂ ರಾಜೂರು ಗ್ರಾಮಗಳಿಗೆ ಸಚಿವರಾದ ಬಸವರಾಜ ರಾಯರಡ್ಡಿ ಮತ್ತು ಶಿವರಾಜ ತಂಗಡಗಿ ಗುರುವಾರ ಜಂಟಿಯಾಗಿ ಭೇಟಿ ನೀಡಿ ಬರ ಪರಿಸ್ಥಿತಿಯನ್ನು ಪರಿಶೀಲಿಸಿದರು. ಅಧಿಕಾರಿಗಳು ಹಾಗೂ ರೈತರಿಂದ ಬೆಳೆ ಹಾನಿ ಕುರಿತು ಮಾಹಿತಿ ಪಡೆದು, ಸರ್ಕಾರದಿಂದ ಅಗತ್ಯ ಪರಿಹಾರ ಒದಗಿಸುವ ಭರವಸೆ ನೀಡಿದರು. 

ಸಚಿವ ಬಸವರಾಜ ರಾಯರಡ್ಡಿ ಮಾತನಾಡಿ, ರಾಜ್ಯದಲ್ಲಿ ಮಳೆ ಕೊರತೆಯಿಂದ ವ್ಯಾಪಕ ಬೆಳೆ ನಷ್ಟವಾಗಿದ್ದು, ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಹಾನಿಗೊಳಗಾದ ಪ್ರತಿಯೊಬ್ಬ ರೈತನಿಗೂ ಪರಿಹಾರ ದೊರೆಯುವಂತೆ ಕೃಷಿ ಇಲಾಖೆ ಅಧಿಕಾರಿಗಳು ತ್ವರಿತ ಹಾಗೂ ನಿಖರ ಸಮೀಕ್ಷೆ ನಡೆಸಿ ವರದಿಯನ್ನು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಸೂಚಿಸಿದರು.
ಯಾವುದೇ ರೈತ ಪರಿಹಾರದಿಂದ ವಂಚಿತರಾಗಬಾರದು. ಅಧಿಕಾರಿಗಳು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು. ರೈತರೊಂದಿಗೆ ಸರ್ಕಾರವಿದ್ದು, ಆತಂಕಪಡುವ ಅಗತ್ಯವಿಲ್ಲ. ಸರ್ಕಾರದ ಮಾರ್ಗಸೂಚಿಯಂತೆ ಅರ್ಹರ ಖಾತೆಗೆ ನೇರವಾಗಿ ಪರಿಹಾರ ಜಮೆಯಾಗಲಿದ್ದು, ಶೀಘ್ರ ಪರಿಹಾರ ದೊರೆಯುವಂತೆ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ಸಚಿವ ಶಿವರಾಜ ತಂಗಡಗಿ ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ಮಳೆ ಅಭಾವದಿಂದ ಮುಂಗಾರು ಬೆಳೆಗಳು ಹಾನಿಗೊಳಗಾಗಿವೆ. ಅಧಿಕಾರಿಗಳು ಬೆಳೆ ಹಾನಿಯ ಸಮೀಕ್ಷೆ ನಡೆಸುತ್ತಿದ್ದಾರೆ. ವರದಿ ಬಂದ ತಕ್ಷಣ ಸರ್ಕಾರದಿಂದ ಪರಿಹಾರ ಬಿಡುಗಡೆ ಮಾಡಲಾಗುವುದು. ಹೆಸರು, ಸೂರ್ಯಕಾಂತಿ, ಮೆಕ್ಕೆಜೋಳ ಸೇರಿದಂತೆ ಹಲವು ಬೆಳೆಗಳು ತೇವಾಂಶ ಕೊರತೆಯಿಂದ ಒಣಗಿವೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ನಾನು ಕೂಡ ಬೆಳೆ ಹಾನಿ ಪರಿಶೀಲಿಸಿದ್ದೇನೆ. ರೈತರಿಗೆ ಶೀಘ್ರ ಪರಿಹಾರ ಸಿಗುವಂತೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು. 
ಎಕರೆಗೆ 20 ಸಾವಿರ ರೂ.ಗೂ ಹೆಚ್ಚು ಖರ್ಚು ಮಾಡಿದ್ದು, ಮಳೆ ಕೊರತೆಯಿಂದ ನಷ್ಟವಾಗಿದೆ. ಸರ್ಕಾರ ಸೂಕ್ತ ಪರಿಹಾರ ನೀಡಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ರೈತರಾದ ಗವಿಸಿದ್ದಪ್ಪ ಚೋಳಿನ್, ಸಂಗಪ್ಪ ಗಡಾದ, ಅಡಿವೆಪ್ಪ ಲಕ್ಕಲಕಟ್ಟಿ ಹಾಗೂ ಶಿವಲಿಂಗಪ್ಪ ಕವಲೂರು ಸಚಿವರ ಎದುರು ಮನವಿ ಮಾಡಿದರು.
ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ, ಜಿಪಂ ಸಿಇಒ ವರ್ಣಿತ್ ನೇಗಿ, ಎಸ್ಪಿ ರಾಮ್ ಎಲ್. ಅರಸಿದ್ದಿ, ತಹಸೀಲ್ದಾರ್ ಪ್ರಕಾಶ ನಾಶಿ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣ ಉಕ್ಕುಂದ, ತಾಪಂ ಇಒಗಳಾದ ನೀಲಗಂಗಾ, ಬೆಟದೇಶ ಮಾಳೇಕೊಪ್ಪ, ಸಹಾಯಕ ಕೃಷಿ ನಿರ್ದೇಶಕ ಪ್ರಮೋದ್ ತುಂಬಳ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net