ಐದು ತಿಂಗಳ ಹಿಂದೆ ಇವರ ಮದುವೆ ನಿಶ್ಚಿತಾರ್ಥ ನಡೆದಿದೆ. ಪ್ರಿವೆಡ್ಡಿಂಗ್ ಶೂಟ್ ಮಾಡಲೆಂದು ಕೊಪ್ಪಳ ತಾಲೂಕಿನ ಮುನಿರಾಬಾದ್ ಸುತ್ತಮುತ್ತಲಿನ ಜಾಗಗಳಿಗೆ ತೆರಳಿದ್ದರು. ಬಗೆ ಬಗೆ ಫೋಟೋ, ವಿಡಿಯೋ ಮಾಡಿಕೊಂಡು ಸಂಭ್ರಮಿಸಿದ್ದರು. ಶೂಟಿಂಗ್ ಮುಗಿಸಿಕೊಂಡು ಗಂಗಾವತಿ ಮಾರ್ಗವಾಗಿ ಮುಷ್ಟೂರಿಗೆ ಬೈಕಿನಲ್ಲಿ ತೆರಳುತ್ತಿದ್ದರು. ಬೆಣಕಲ್ ಸಮೀಪ ಯಮನಂತೆ ಎದುರು ಬಂದ ಲಾರಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಇದೇ ಡಿ.21ರಂದು ಮದುವೆ ಕಾರ್ಯಕ್ರಮ ನಿಗದಿಯಾಗಿದೆ. ಅದರ ಖುಷಿಯಲ್ಲಿದ್ದ ವಧು-ವರರ ಕುಟುಂಬದವರು ಹಸೆಮಣೆ ಏರಬೇಕಾದವರನ್ನು ಕಳೆದುಕೊಂಡು ರೋಧಿಸುವಂತಾಗಿದೆ. ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.