ಕೊಪ್ಪಳ: ಕ್ಷಯ ಮಾರಣಾಂತಿಕ ಕಾಯಿಲೆ. ಸೂಕ್ತ ಚಿಕಿತ್ಸೆ ಪಡೆದಲ್ಲಿ ಗುಣವಾಗಬಹುದು. ಈ ಬಗ್ಗೆ ಎಲ್ಲರೂ ಜಾಗೃತರಾಗಿ ಕ್ಷಯ ಮುಕ್ತ ಕೊಪ್ಪಳ ಮಾಡಲು ಸಹಕರಿಸುವಂತೆ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ ಮನವಿ ಮಾಡಿದರು.
ನಗರದ ಹಳೇ ಜಿಲ್ಲಾಸ್ಪತ್ರೆ ಸಭಾಂಗಣದಲ್ಲಿ ವಿಶ್ವ ಕ್ಷಯ ರೋಗ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿಂದೆ ಕ್ಷಯ ಮಾರಣಾಂತಿಕವಾಗಿತ್ತು. ಸೂಕ್ತ ಚಿಕಿತ್ಸೆ ಇರದೆ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಸದ್ಯ ಉತ್ತಮ ಚಿಕಿತ್ಸೆ ಇದೆ. ಜನರಲ್ಲೂ ಹೆಚ್ಚು ಜಾಗೃತಿ ಕಾಣುತ್ತಿದೆ. ಸರಿಯಾಗಿ ಚಿಕಿತ್ಸೆ ಪಡೆದಲ್ಲಿ ಸಂಪೂರ್ಣ ಗುಣವಾಗಬಹುದು. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಹಕರಿಸಬಹುದೆಂದರು.
ಜಿಲ್ಲಾ ಕ್ಷಯ ರೋಗ ನಿಮೂರ್ಲನಾಧಿಕಾರಿ ಡಾ.ಶಶಿಧರ ಎ. ಮಾತನಾಡಿ, ಕಳೆದ ವರ್ಷ ರೋಗ ಪತ್ತೆ, ಚಿಕಿತ್ಸೆ ಕೊಡಿಸುವಲ್ಲಿ ಜಿಲ್ಲೆ ಉತ್ತಮ ಸಾಧನೆ ಮಾಡಿದೆ. ವಿನೂತನ ಯೋಜನೆ ಹಮ್ಮಿಕೊಂಡು ಜಾಗೃತಿ ಮೂಡಿಸಲಾಗುತ್ತಿದೆ. ಡಿಸಿ, ಎಸ್ಪಿ, ಜಿಪಂ ಸಿಇಒಗಳು ತಲಾ ಇಬ್ಬರು ಕ್ಷಯ ರೋಗಿಗಳನ್ನು ದತ್ತು ಪಡೆದು ಆರು ತಿಂಗಳ ಪೌಷ್ಟಿಕ ಆಹಾರ ಕೊಡಿಸುವ ಮೂಲಕ ಮಾದರಿಯಾಗಿದ್ದಾರೆಂದು ತಿಳಿಸಿದರು.
ಡಿಎಚ್ಒ ಡಾ.ಟಿ.ಲಿಂಗರಾಜು ಮಾತನಾಡಿ, ರೋಗ ಪತ್ತೆಯಲ್ಲಿ ನಮ್ಮ ಜಿಲ್ಲೆ ಮುಂದಿದೆ. ಕೆಕೆಆರ್ಡಿಬಿಯಿಂದ ಜಿಲ್ಲೆಗೆ 4 ಸಿಬಿನಾಟ್ ಯಂತ್ರ ಬಂದಿದ್ದು ಅನುಕೂಲವಾಗಿದೆ. ಸಿಬ್ಬಂದಿ ಉತ್ತಮವಾಗಿ ಕೆಲಸ ಮಾಡಿ ಇನ್ನಷ್ಟು ಪ್ರಗತಿ ಸಾಧಿಸಿ ಎಂದು ಹುರಿದುಂಬಿಸಿದರು.
ಕಾರ್ಯಕ್ರಮಕ್ಕು ಮುನ್ನಾ ನಗರದಲ್ಲಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಯಿತು. ರಾಷ್ಟ್ರೀಯ ಕ್ಷಯರೋಗ ನಿಮೂರ್ಲನಾ ಕಾರ್ಯಕ್ರಮದಡಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು.