ಕನಕಗಿರಿಯ ಶ್ರೀ ಕನಕಾಚಲ ದೇವಸ್ಥಾನಕ್ಕೆ ಆಗಮಿಸಿದ್ದ ಹುಲಿಗೆಮ್ಮ ದೇವಿ ದೇವಸ್ಥಾನ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶಗೆ ಸ್ಥಳೀಯರು ಮನವಿ ಸಲ್ಲಿಸಿದರು. ಶಿರಸ್ತೇದಾರ್ ಅನಿತಾ ಇಂಡಿ, ಉಪ ತಹಸೀಲ್ದಾರ್ ಶರಣಪ್ಪ, ಪ್ರಮುಖರಾದ ಅಯ್ಯನಗೌಡರೆಡ್ಡಿ, ಸುದರ್ಶನರೆಡ್ಡಿ, ಸೋಮನಾಥ ಮಲ್ಲಾಪುರ, ಲಕ್ಷ್ಮಣ ಇತರರಿದ್ದರು.
ಕನಕಗಿರಿ: ಶ್ರೀ ಕನಕಾಚಲ ಜಾತ್ರೆಯಲ್ಲಿ ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯಗಳನ್ನು ಮುಂದುವರೆಸಬೇಕು ಎಂದು ಆಗ್ರಹಿಸಿ ಪರಿಶೀಲನೆಗಾಗಿ ಆಗಮಿಸಿದ್ದ ಹುಲಿಗೆಮ್ಮ ದೇವಸ್ಥಾನ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶಗೆ ಬುಧವಾರ ಸ್ಥಳೀಯರಿಂದ ಮನವಿ ಸಲ್ಲಿಸಲಾಯಿತು.
ಪ್ರಸಕ್ತ ವರ್ಷದ ಜಾತ್ರೋತ್ಸವದ ಕಾರ್ಯಕ್ರಮಗಳು ಮಾ.3ರಿಂದ ಆರಂಭಗೊಂಡಿದ್ದು, ಧ್ವಜಾರೋಹಣ ಕಾರ್ಯಕ್ರಮದಲ್ಲಿ ಹೂವಿನ ಹಾರ ಹರಿದಿದ್ದು, ಅದೇ ಹಾರವನ್ನು ಸರಿಪಡಿಸಿ ಬಳಸಲಾಗಿದೆ. ಪುರಾತನ ಕಾಲದಿಂದಲೂ ಕಲ್ಯಾಣೋತ್ಸವ ನಡೆಯುತ್ತಿದ್ದ ಸ್ಥಳದ ಬದಲಾಗಿ ಮಧ್ಯರಂಗದಲ್ಲಿ ಆಚರಿಸಲಾಗಿದೆ.
ನಾಡಿಗೆ ಒಳಿತಿಗಾಗಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸ್ಥಳದಲ್ಲೇ ಜಾತ್ರೆ ನಡೆಸಬೇಕು ಎನ್ನುವ ದೂರುಗಳು ಧಾರ್ಮಿಕ ದತ್ತಿ ಇಲಾಖೆಯ ಕೇಂದ್ರ ಕಚೇರಿಗೆ ತಲುಪಿದ್ದರಿಂದ ದೇವಸ್ಥಾನಕ್ಕೆ ಹುಲಿಗೆಮ್ಮ ದೇವಿ ದೇವಸ್ಥಾನ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಆಗಮಿಸಿ ಸ್ಥಳೀಯರೊಂದಿಗೆ ಚರ್ಚಿಸಿದರು.
ನಂತರ ಮಾತನಾಡಿ, ಕಮಿಷನರ್ ಕಚೇರಿಗೆ ವ್ಯಾಟ್ಸ್‌ಪ್ ಮೂಲಕ ದೂರು ಸಲ್ಲಿಸಿದ್ದರಿಂದ ಮೇಲಧಿಕಾರಿಗಳ ಆದೇಶದಂತೆ ದೇವಸ್ಥಾನಕ್ಕೆ ಆಗಮಿಸಿ ಪರಿಶೀಲಿಸಲಾಗಿದೆ. ಸಂಪ್ರದಾಯದಂತೆ ಜಾತ್ರೆ ಆಚರಿಸಲು ತಿಳಿಸಲಾಗಿದ್ದು, ಜಾತ್ರೆಯ ಬಳಿಕ ಸಭೆ ನಡೆಸಿ ದೇವಸ್ಥಾನದ ಸಮಸ್ಯೆಗಳನ್ನು ಪರಿಹರಿಸಲಾಗುವುದು. ಕಲ್ಯಾಣೋತ್ಸವ ಕಾರ್ಯಕ್ರಮವನ್ನು ಯಥಾ ಪ್ರಕಾರ ನೆರವೇರಿಸಲಾಗುವುದು. ಇದಕ್ಕೆ ಸ್ಥಳೀಯರು ಬೇಡ ಎಂದರೆ ತಹಸೀಲ್ದಾರರು ನಿರ್ಧರಿಸಲಿದ್ದಾರೆ.