ನಿವೇಶನ ಮತ್ತು ವಸತಿರಹಿತರ ಹೋರಾಟ ಸಮಿತಿಯಿಂದ ಸೋಮವಾರ ಗಂಗಾವತಿ ನಗರಸಭೆ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಯಿತು. ಸಮಿತಿ ಜಿಲ್ಲಾ ಕಾರ್ಯದರ್ಶಿ ಎ.ಎಲ್. ತಿಮ್ಮಣ್ಣ, ಜಿಲ್ಲಾಧ್ಯಕ್ಷ ಎ. ಹುಲುಗಪ್ಪ, ಪದಾಧಿಕಾರಿಗಳಾದ ಶೇಖಮ್ಮ ಹೊಸಳ್ಳಿ, ಲಕ್ಷ್ಮಣನಾಯಕ, ಹಂಪಸದುರ್ಗಾ, ತಾಯಮ್ಮ, ತಾಹೇರಾಬೇಗಂ, ಮಂಜುನಾಥ, ಗಂಗಮ್ಮ ಹೊಸಳ್ಳಿ, ನೂರಜಹಾಬೇಗಂ ಇತರರಿದ್ದರು.
ಗಂಗಾವತಿ: ವಸತಿ-ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ ವರ್ಷ ಕಳೆದರೂ ಅಧಿಕಾರಿಗಳು ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಹೋರಾಟ ಸಮಿತಿಯಿಂದ ಸೋಮವಾರ ನಗರಸಭೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.
ಅರ್ಜಿದಾರರು ನಗರಸಭೆ ಆವರಣದಲ್ಲಿ ಜಮಾಯಿಸಿ ನಗರಸಭೆ ವ್ಯವಸ್ಥಾಪಕ ಷಣ್ಮುಖಪ್ಪ ಅವರಿಗೆ ಬೇಡಿಕೆಗಳ ಮನವಿ ಪತ್ರ ಸಲ್ಲಿಸಲಾಯಿತು. ಸಮಿತಿ ಜಿಲ್ಲಾ ಕಾರ್ಯದರ್ಶಿ ಎ.ಎಲ್. ತಿಮ್ಮಣ್ಣ ಮಾತನಾಡಿ, ರಾಜೀವ್ ಗಾಂಧಿ ವಸತಿ ನಿಗಮಕ್ಕೆ ನಿವೇಶನ ಮತ್ತು ವಸತಿರಹಿತರು ವರ್ಷದ ಹಿಂದೆಯೇ ಅರ್ಜಿ ಸಲ್ಲಿಸಿದ್ದಾರೆ.
ಆದರೆ, ನಗರಸಭೆ ಸಿಬ್ಬಂದಿಯ ನಿರ್ಲಕ್ಷೃದಿಂದ ಇದುವರೆಗೂ ದತ್ತಾಂಶ ದಾಖಲಾತಿ ನಡೆದಿಲ್ಲ. 777 ಅರ್ಜಿಗಳು ಕ್ರಮಬದ್ಧವಾಗಿದ್ದರೂ ಪ್ರಕ್ರಿಯೆ ಸ್ಥಗಿತಗೊಂಡಿರುವುದು ಅರ್ಜಿದಾರರನ್ನು ಸಂಕಷ್ಟಕ್ಕೆ ದೂಡಿದೆ. ನಿಗಮದ ಕಾಯ್ದೆಯಂತೆ ಅರ್ಜಿ ಸಲ್ಲಿಸಿದ ಎಲ್ಲ ಅರ್ಜಿದಾರರ ಮಾಹಿತಿಯನ್ನು ಕೂಡಲೇ ದಾಖಲಿಸಬೇಕು. ಅಧಿಕಾರಿಗಳು ಸಮಸ್ಯೆ ಸರಿಪಡಿಸಬೇಕು. ಬೇಡಿಕೆಯನ್ನು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.