ಯುಗಾದಿ ಹಬ್ಬದ ರಂಗೇರಿಸಿ ಬಣ್ಣದಾಟ

ಕಾರಟಗಿಯಲ್ಲಿ ಚಿಕ್ಕಮಕ್ಕಳು ಪರಸ್ಪರ ಬಣ್ಣಗಳನ್ನು ಎರಚಾಡುತ್ತ ಶುಕ್ರವಾರ ಓಕುಳಿ ಆಡಿ ಸಂಭ್ರಮಿಸಿದರು.
ಕಾರಟಗಿಯಲ್ಲಿ ಚಿಕ್ಕಮಕ್ಕಳು ಪರಸ್ಪರ ಬಣ್ಣಗಳನ್ನು ಎರಚಾಡುತ್ತ ಶುಕ್ರವಾರ ಓಕುಳಿ ಆಡಿ ಸಂಭ್ರಮಿಸಿದರು.
Published on
ಕಾರಟಗಿ: ಪಟ್ಟಣ ಸೇರಿದಂತೆ ತಾಲೂಕಿನ ನಾನಾ ಗ್ರಾಮಗಳಲ್ಲಿ ಯುವಕರು, ಯುವತಿಯರು ಹಾಗೂ ಚಿಕ್ಕಮಕ್ಕಳು ಪರಸ್ಪರ ಬಣ್ಣಗಳನ್ನು ಎರಚಾಡುತ್ತ ಶುಕ್ರವಾರ ಓಕುಳಿಯಾಡಿ ಸಂಭ್ರಮಿಸಿದರು.
ಯುಗಾದಿ ಹಬ್ಬದ ಮಾರನೇ ದಿನದಂದು ಬಣ್ಣದಾಟವಾಡುವ ವಾಡಿಕೆಯಿದ್ದು, ಬೆಳಗ್ಗೆಯಿಂದಲೇ ಯುವಕರು ಮತ್ತು ಚಿಕ್ಕಮಕ್ಕಳು ಹಲಗೆ ವಾದನಕ್ಕೆ ತಕ್ಕಂತೆ ಕುಣಿದು ಸಂಭ್ರಮಿಸುತ್ತ ರಸ್ತೆಗಳೆಲ್ಲೆಲ್ಲ ತಿರುಗಾಡುತ್ತಾ ಸ್ನೇಹಿತರಿಗೆ, ಪರಿಚಿತರಿಗೆ ಬಣ್ಣಗಳನ್ನು ಹಚ್ಚುತ್ತಾ ಸಂಭ್ರಮಿಸಿದರು.
ಬಣ್ಣ ಹಾಗೂ ಬಣ್ಣ ತುಂಬಿದ ನೀರಿನ ಬಾಟಲ್‌ಗಳನ್ನು ಹಿಡಿದು ಕೆಲವರು ತಮ್ಮ ಸ್ನೇಹಿತರ ಮನೆಗಳಿಗೆ ಹೋಗಿ ಬಣ್ಣ ಹಚ್ಚುವ ಜತೆಗೆ ಸ್ನೇಹಿತರನ್ನು ಬೀದಿಗೆ ಕರೆದುಕೊಂಡು ಬಂದು ಓಕುಳಿ ಆಡಿದರು. ಇನ್ನು ಕೆಲ ಯುವಕರು ಕೋಳಿ ಮೊಟ್ಟೆ, ಟೊಮ್ಯಾಟೊ ತಲೆಯ ಮೇಲೆ ಒಡೆದು ಮತ್ತೆ ಅದಕ್ಕೆ ಬಣ್ಣ ಹಾಕುತ್ತಿದ್ದರೆ, ಕೆಲವೆಡೆ ಗುಲಾಲ್ ಜತೆ ಪೇಂಟ್ ಬಳಕೆಮಾಡುತ್ತಿದ್ದರು. ಮೈತುಂಬಾ ಬಣ್ಣಗಳನ್ನು ಎರಚಿಕೊಂಡು ಕೇಕೆ ಹಾಕುತ್ತ ಹಲಗೆ, ತಮಟೆ ವಾದನದ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ಗುಂಪು ಗುಂಪಾಗಿ ಕಣಿದಾಡಿದರು.
ಬಣ್ಣದಾಟದಿಂದಾಗಿ ಪಟ್ಟಣದ ಬಹುತೇಕ ಅಂಗಡಿ-ಮುಂಗಟ್ಟು, ಹೋಟೆಲ್‌ಗಳು ಸೇರಿದಂತೆ ಇತರ ವ್ಯಾಪಾರ ವಹಿವಾಟುಗಳು ಮಧ್ಯಾಹ್ನದವರೆಗೂ ಬಂದ್ ಮಾಡಲಾಗಿತ್ತು. ಸಂಜೆ ನಂತರ ಕೆಲ ವ್ಯಾಪಾರಸ್ಥರು ವಹಿವಾಟು ನಡೆಸಲು ಆರಂಭಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net