ವರವಾಗಬೇಕಿದ್ದ ಕೋಲ್ಡ್ ಸ್ಟೋರೇಜ್‌ಗೆ ಗರ

ಕುಕನೂರು ಎಪಿಎಂಸಿ ಆವರಣದಲ್ಲಿ ನಿರ್ಮಾಣಗೊಂಡ ಕೋಲ್ಡ್ ಸ್ಟೋರೇಜ್‌ಗೆ ಬೀಗ ಹಾಕಿರುವುದು.
ಕುಕನೂರು ಎಪಿಎಂಸಿ ಆವರಣದಲ್ಲಿ ನಿರ್ಮಾಣಗೊಂಡ ಕೋಲ್ಡ್ ಸ್ಟೋರೇಜ್‌ಗೆ ಬೀಗ ಹಾಕಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಬೆಳೆ ಸಂರಕ್ಷಣೆಗೆ ರೈತರ ಪರದಾಟ
  • ಉದ್ಘಾಟನೆಗೊಂಡರೂ ಸಿದ್ಧಗೊಳ್ಳದ ಮಾರ್ಗಸೂಚಿ
ಕುಕನೂರು: ಪಟ್ಟಣದಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಕೋಲ್ಡ್ ಸ್ಟೋರೇಜ್ (ಶೀತಲ ಗೃಹ) ಉದ್ಘಾಟನೆಗೊಂಡು ಒಂದೂವರೆ ತಿಂಗಳಾದರೂ ಬಳಕೆಗೆ ಮುಕ್ತಗೊಂಡಿಲ್ಲ. ಎಂಪಿಎಂಸಿ ಅಧಿಕಾರಿಗಳು ಮಾರ್ಗಸೂಚಿ ಕಾರಣ ನೀಡಿ ಕಾಲ ದೂಡುತ್ತಿದ್ದು ರೈತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದೆ.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ 2023-24ನೇ ಸಾಲಿನ ನಬಾರ್ಡ್ ಆರ್‌ಐಡಿಎಫ್‌ನ 7.28 ಕೋಟಿ ರೂ. ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಾಣಗೊಂಡಿದೆ. 2200 ಮೆ.ಟನ್ ಸಂಗ್ರಹಣೆ ಸಾಮರ್ಥ್ಯ ಹೊಂದಿದ್ದು ಒಟ್ಟು 8 ಕೋಲ್ಡ್ ರೂಮ್‌ಗಳಿದ್ದು, ಪ್ರತಿಯೊಂದೂ 275 ಮೆ.ಟನ್ ಸಂಗ್ರಹಣೆ ಸಾಮರ್ಥ್ಯ ಹೊಂದಿವೆ. ಆದರೆ, ಎಪಿಎಂಸಿಗೆ ಕೇಂದ್ರ ಕಚೇರಿಯಿಂದ ಮಾರ್ಗಸೂಚಿ ಬಾರದೆ ಶೀತಲ ಗೃಹ ರೈತರ ಪಾಲಿಗೆ ಇದ್ದೂ ಇಲ್ಲದಂತಾಗಿದೆ.
ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾಗಿದ್ದ ಶಿವಾನಂದ ಪಾಟೀಲ್ ಅವರು ಒಂದೂವರೆ ತಿಂಗಳ ಹಿಂದೆಯೇ ಶೀತಲ ಗೃಹ ಉದ್ಘಾಟನೆ ಮಾಡಿದ್ದರು. ಕೃಷಿ ಮಾರುಕಟ್ಟೆ ಇಲಾಖೆಯಿಂದ ಕೋಲ್ಡ್ ಸ್ಟೋರೇಜ್ ನಿರ್ವಹಣೆ ಮಾರ್ಗಸೂಚಿ ಇನ್ನೂ ಬಂದಿಲ್ಲ. ಇದರಿಂದ ರೈತರು ಕೇವಲ ಕಟ್ಟಡ ನೋಡಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಜಿಲ್ಲೆಯಲ್ಲೇ ಮೊದಲ ಬಾರಿಗೆ ಕುಕನೂರಿನಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಾಣಗೊಂಡಿದ್ದು, ಪಕ್ಕದ ಯಲಬುರ್ಗಾ ಪಟ್ಟಣದಲ್ಲೂ ನಿರ್ಮಾಣಗೊಳ್ಳುತ್ತಿದೆ. ಅವಳಿ ತಾಲೂಕಿನಲ್ಲಿ ಹೆಚ್ಚು ಮಳೆಯಾಶ್ರಿತ ಪ್ರದೇಶವಿದ್ದು, ಬೋರ್‌ವೆಲ್ ನೀರಿನಿಂದಲೇ ರೈತರು ತೋಟಗಾರಿಕೆ ಹಾಗೂ ತರಕಾರಿ ಬೆಳೆ ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಇವುಗಳನ್ನು ದೂರದ ಬೆಳಗಾವಿ, ಹುಬ್ಬಳ್ಳಿ, ಗದಗ ಇತರ ನಗರಗಳ ಮಾರುಕಟ್ಟೆಗೆ ಕಳುಹಿಸುತ್ತಾರೆ. ಒಮ್ಮೆ ಉತ್ತಮ ಬೆಲೆ ಸಿಕ್ಕರೆ ಮತ್ತೊಮ್ಮೆ ನಷ್ಟ ಅನುಭವಿಸುವ ಸ್ಥಿತಿ ಇದೆ. ಇದರಿಂದ ರೈತರನ್ನು ಪಾರುಮಾಡಲು ಕೋಲ್ಡ್ ಸ್ಟೋರೇಜ್ ತುಂಬ ಅವಶ್ಯವಿದ್ದು, ಉತ್ತಮ ಬೆಲೆ ಸಿಗುವವರೆಗೂ ಕೃಷಿ ಉತ್ಪನ್ನಗಳನ್ನು ಸ್ಟೋರ್ ಮಾಡಲು ಅನುಕೂಲವಾಗಿದೆ.

ಯಾವೆಲ್ಲ ಫಸಲು ಬೆಳೆಯುತ್ತಾರೆ..?

ಅವಳಿ ತಾಲೂಕಿನಲ್ಲಿ ತೋಟಗಾರಿಕೆ ಬೆಳೆಗಳಾದ ಮಾವು, ಪೇರಲ, ದಾಳಿಂಬೆ ಹಾಗೂ ತರಕಾರಿಗಳಾದ ಮೆಣಸಿನಕಾಯಿ, ಬದನೆಕಾಯಿ, ಚವಳಿಕಾಯಿ, ಬೆಂಡೆಕಾಯಿ, ಟೊಮ್ಯಾಟೊ ಇತರ ಬೆಳೆ ಅಧಿಕವಾಗಿ ಬೆಳೆಯಲಾಗುತ್ತಿದೆ. ಬೆಲೆ ಇಲ್ಲದಿದ್ದಾಗ ಇವುಗಳನ್ನು ಸಂಸ್ಕರಿಸಲು ಕೋಲ್ಡ್ ಸ್ಟೋರೇಜ್ ತುಂಬ ಅವಶ್ಯವಾಗಿದೆ. ಶೀಘ್ರವೇ ಮಾರ್ಗಸೂಚಿ ತರಿಸಿ ರೈತರ ಬೆಳೆಗಳ ಸಂಸ್ಕರಣೆಗೆ ಕೋಲ್ಡ್ ಸ್ಟೋರೇಜ್ ಮುಕ್ತಗೊಳಿಸಬೇಕೆಂಬುದು ಕೃಷಿಕರ ಒತ್ತಾಸೆಯಾಗಿದೆ.
"

ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಕೋಲ್ಡ್ ಸ್ಟೋರೇಜ್ ಶೀಘ್ರವೇ ರೈತರಿಗೆ ದೊರೆಯಬೇಕು. ಸರ್ಕಾರ ತಕ್ಷಣ ಮಾರ್ಗಸೂಚಿ ಹೊರಡಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು. ಕೇವಲ ಅನುದಾನ ಬಳಕೆ ಮಾಡಿ ಕಟ್ಟಡ ನಿರ್ಮಾಣ ಮಾಡುವುದಲ್ಲ. ಅದು ಸಾರ್ವಜನಿಕರಿಗೆ ಉಪಯೋಗವಾಗಬೇಕು.

— ನವೀನಕುಮಾರ ಗುಳಗಣ್ಣನವರ್ ಬಿಜೆಪಿ ಜಿಲ್ಲಾಧ್ಯಕ್ಷ, ಇಟಗಿ


"

ಕೋಲ್ಡ್ ಸ್ಟೋರೇಜ್ ಉದ್ಘಾಟನೆಗೊಂಡು ಒಂದೂವರೆ ತಿಂಗಳಾಗಿದೆ. ಈಗಾಗಲೇ ಕೇಂದ್ರ ಕಚೇರಿಗೆ ಮಾರ್ಗಸೂಚಿ ನೀಡುವಂತೆ ಪತ್ರ ಬರೆಯಲಾಗಿದೆ. ಮಾರ್ಗಸೂಚಿ ಬಂದ ತಕ್ಷಣ ಕಾರ್ಯರೂಪಕ್ಕೆ ತರಲಾಗುವುದು.

— ಸುರೇಶ ತಂಗನೂರ ಎಪಿಎಂಸಿ ಕಾರ್ಯದರ್ಶಿ, ಕುಕನೂರು


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net