2001ರಲ್ಲಿ ಪೂರ್ಣಗೊಂಡ ಸಿಟಿ ಮಾರುಕಟ್ಟೆಗೆ 26ವರ್ಷಗಳಲ್ಲಿ ಹಲವು ಸೌಲಭ್ಯಗಳನ್ನು ಒದಗಿಸಲಾಗಿದ್ದು, ನಿರ್ವಹಣೆ ಕೊರತೆಯಿಂದ ಕೊಂಚ ಸೊರಗಿದೆ. ಕುಡಿವ ನೀರು, ನೆರಳು, ವಿದ್ಯುತ್ ದೀಪ, ಇಂದಿರಾ ಕ್ಯಾಂಟೀನ್ ವ್ಯವಸ್ಥೆಯಿದೆ. ಮಾರುಕಟ್ಟೆಯಲ್ಲಿ ಸೌಲಭ್ಯಗಳ ಕೊರತೆಯಿಲ್ಲ ಆದರೆ ಸೌಲಭ್ಯಗಳ ನೆಪದಲ್ಲಿ ವ್ಯಾಪಾರಿಗಳು ವಿಳಂಬ ಧೋರಣೆ ಅನುಸರಿಸಿದ್ದೇ ಹೆಚ್ಚು. ಪ್ರಾಂಗಣದಲ್ಲಿ 36 ಚ.ಅಡಿಯ 200 ಮಳಿಗೆಗಳು, ಸೊಪ್ಪು ಮಾರಾಟದ ಕಟ್ಟೆಗಳು, ಹೈಮಾಸ್ಟ್ ದೀಪ, ತಳ್ಳು ಬಂಡಿಗಳನ್ನಿಡುವ ವಿಶಾಲ ಜಾಗ, ಮೀನು, ಮಾಂಸ ಮಾರಾಟಕ್ಕೆ ಪ್ರತ್ಯೇಕ ಸುಸಜ್ಜಿತ ಪ್ರಾಂಗಣ, ಶುದ್ಧ ಕುಡಿವ ನೀರಿನ ಘಟಕ, ಸಾರ್ವಜನಿಕ ಶೌಚಗೃಹ ಮತ್ತು ಒಣ ಕಸ ಮತ್ತು ಪ್ಲ್ಯಾಸ್ಟಿಕ್ ಪ್ರೇರಿತ ವಸ್ತುಗಳ ಸಂಗ್ರಹಕ್ಕೆ ಗೋದಾಮಿದೆ. ಪ್ರಾಂಗಣದ ನಾಲ್ಕೂ ದಿಕ್ಕಿನಲ್ಲೂ ಪ್ರವೇಶ ದ್ವಾರ ಮತ್ತು ರಕ್ಷಣೆಗೆ ಪ್ರಾಂಗಣ ಸುತ್ತಲೂ ಕಾಂಪೌಂಡ್ ನಿರ್ಮಿಸಲಾಗಿದೆ. ಮಾರುಕಟ್ಟೆ ಸಂಪರ್ಕದ ಮುಖ್ಯರಸ್ತೆ ಅಭಿವೃದ್ಧಿಯಾಗಬೇಕಿದೆ.