ವಿಜಯನಗರ ಕಾಲುವೆಗೆ ದುರಸ್ತಿ ಭಾಗ್ಯ

ಗಂಗಾವತಿ ತಾಲೂಕಿನ ಸಣಾಪುರ ಕೆರೆಯಲ್ಲಿನ ಗೇಟ್ ದುರಸ್ತಿ ಕೈಗೊಂಡಿರುವುದು.
ಗಂಗಾವತಿ ತಾಲೂಕಿನ ಸಣಾಪುರ ಕೆರೆಯಲ್ಲಿನ ಗೇಟ್ ದುರಸ್ತಿ ಕೈಗೊಂಡಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಮೊದಲ ಹಂತದಲ್ಲಿ ಗೇಟ್‌ಗಳ ರಿಪೇರಿ
  • ಜಲಸಂಪನ್ಮೂಲ ಇಲಾಖೆಯಿಂದ ಕಾಮಗಾರಿ ನಿರ್ವಹಣೆ
ಗಂಗಾವತಿ: ತಾಲೂಕಿನ ಸಣಾಪುರ ಭಾಗದ ವಿಜಯನಗರ ಕಾಲುವೆಗಳ ದುರಸ್ತಿಗೆ ಜಲಸಂಪನ್ಮೂಲ ಇಲಾಖೆ ಮುಂದಾಗಿದ್ದು, ಮೊದಲ ಹಂತದಲ್ಲಿ ಗೇಟ್‌ಗಳ ದುರಸ್ತಿ ಕೈಗೆತ್ತಿಕೊಂಡಿದೆ.
ವಿಜಯನಗರ ಕಾಲುವೆಗಳ ದುರಸ್ತಿಗೆ ಹಿಂದಿನ ಬಿಜೆಪಿ ಆಡಳಿತಾವಧಿಯಲ್ಲಿ 371 ಕೋಟಿ ರೂ.ಮಂಜೂರಾಗಿತ್ತು. 2019ರಲ್ಲಿ ಕಾಮಗಾರಿ ಆರಂಭಿಸಿದ್ದರೂ ಕೋವಿಡ್, ಮಳೆಗಾಲ ಮತ್ತು ಕಾಲುವೆಗೆ ನೀರು ಹರಿಸುವ ನೆಪಲ್ಲಿ 6ವರ್ಷ ನಡೆದಿದ್ದರೂ ಕೆಲಸ ಮುಗಿದಿರಲಿಲ್ಲ. ಕೆಲವೆಡೆ ಅವೈಜ್ಞಾನಿಕವಾಗಿ ಕಾಮಗಾರಿ ನಿರ್ವಹಿಸಿರುವ ಬಗ್ಗೆ ರೈತರು ಆರೋಪವಾಗಿದ್ದು, ವಿತರಣೆ ಕಾಲುವೆಗಳ ಗೇಟ್ ಮತ್ತು ತೂಬುಗಳ ನಿರ್ವಹಣೆಯಲ್ಲಿ ಅಧಿಕಾರಿಗಳು ವಿಲವಾಗಿದ್ದಾರೆ ಎಂದು ಇಲಾಖೆಗೆ ದೂರಿದ್ದರು. ಟೆಂಡರ್ ಪಡೆದ ಗುತ್ತಿಗೆ ಕಂಪನಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದರಿಂದ ಜು.9ರಂದು ತಾಲೂಕಿನ ಸಣಾಪುರದಲ್ಲಿ ಕಾಡಾಧ್ಯಕ್ಷ ಹಸನ್‌ಸಾಬ್ ದೋಟಿಹಾಳ್ ಮತ್ತು ಜಲಸಂಪನ್ಮೂಲ ಇಂಜಿನಿಯರ್‌ಗಳ ಸಮ್ಮುಖದಲ್ಲಿ ಕಾಡಾ ಮಾಜಿ ಅಧ್ಯಕ್ಷ ಎಚ್.ಆರ್.ಶ್ರೀನಾಥ, ರೈತರ ಸಭೆ ಆಯೋಜಿಸಲಾಗಿತ್ತು.
ಕಾಲುವೆ ದುರಸ್ತಿ, ನಿರ್ವಹಣೆ ಬಗ್ಗೆ ರೈತರು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡಿದ್ದರಲ್ಲದೇ, ದುರಸ್ತಿಗೆ ಗಡವು ನೀಡಿದ್ದರು. ದೋಷ ಒಪ್ಪಿಕೊಂಡ ಕಾಡಾಧ್ಯಕ್ಷ ಹಸನ್‌ಸಾಬ್ ದೋಟಿಹಾಳ್, ದುರಸ್ತಿ ಭರವಸೆ ನೀಡಿದ್ದರು. ಮೊದಲ ಹಂತದಲ್ಲಿ ಸಣಾಪುರ ಕೆರೆಯಲ್ಲಿದ್ದ 30ವರ್ಷದ ಹಳೆಯದಾದ ಗೇಟ್ ದುರಸ್ತಿಗೆ ಇಲಾಖೆಗೆ ಮುಂದಾಗಿದೆ. ಪುರಾತತ್ವ ಇಲಾಖೆ ಸಹಯೋಗದಲ್ಲಿ ಕೆಲ ಕಾಲುವೆಗಳ ದುರಸ್ತಿಗೂ ಯೋಜನೆ ರೂಪಿಸಿದ್ದು, ಶೀಘ್ರವೇ ಆರಂಭಿಸುವ ಭರವಸೆ ಎಇ ಅಮರೇಶ ನೀಡಿದ್ದಾರೆ.
ಈ ಬಗ್ಗೆ ಕಾಡಾ ಮಾಜಿ ಅಧ್ಯಕ್ಷ ಎಚ್.ಅರ್. ಶ್ರೀನಾಥ ಮಾತನಾಡಿ, ತುಂಗಭದ್ರಾ ಜಲಾಶಯ ಮತ್ತು ಕಾಲುವೆ ರೈತರಿಗೆ ಸೇರಿದ್ದು, ಅವರ ನಿರ್ದೇಶನದಂತೆ ಕಾಮಗಾರಿ ನಿರ್ವಹಿಸಬೇಕಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಲುವೆ ಹೂಳು ತುಂಬಿದ್ದು, ಅರೆಬರೆ ಕಾಮಗಾರಿ ನಿರ್ವಹಿಸಲಾಗಿದೆ. ಇತ್ತೀಚೆಗೆ ಆಯೋಜಿಸಿದ್ದ ಸಭೆಯಿಂದ ಸ್ಪಂದನೆ ಸಿಕ್ಕಿದ್ದು, ಗೇಟ್‌ಗಳ ದುರಸ್ತಿ ನಡೆದಿದೆ. ವಿಜಯನಗರ ಕಾಲುವೆ ಅರೆಬರೆ ಕಾಮಗಾರಿ ಪೂರ್ಣಗೊಳ್ಳುವರೆಗೂ ವಿಶ್ರಮಿಸುವುದಿಲ್ಲ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net