ಕೊಪ್ಪಳ: ಭಾಗ್ಯನಗರದ ಓಜನಳ್ಳಿ ಕ್ರಾಸ್ನಿಂದ ಕೊಪ್ಪಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಯನ್ನು ಶಾಸಕ ರಾಘವೇಂದ್ರ ಹಿಟ್ನಾಳ್ ಅವರು ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಕಾಮಗಾರಿಯನ್ನು ಗುಣಮಟ್ಟದಿಂದ ಮತ್ತು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಗುರುವಾರ ಭಾಗ್ಯನಗರದ ಕುವೆಂಪು ವೃತ್ತದ ಬಳಿ ನಡೆಯುತ್ತಿರುವ ರಸ್ತೆ ಕಾಮಗಾರಿ ವಿಕ್ಷೀಸಿ ಮಾತನಾಡಿದರು
ರಸ್ತೆ ನಿಮಾರ್ಣಕ್ಕೆ ಒಟ್ಟು 5 ಕೋಟಿ ರೂ. ವೆಚ್ಚವಾಗಲಿದ್ದು, ಈಗಾಗಲೇ ನಮ್ಮ ಸರ್ಕಾರದಿಂದ 4 ಕೋಟಿ ರೂ. ಮಂಜೂರು ಮಾಡಲಾಗಿದೆ. ಸದ್ಯ 4 ಕೋಟಿ ರೂ. ಮೊತ್ತದ ಡಾಂಬರೀಕರಣ ಹಾಗೂ ಡೆನೇಜ್ ಕಾಮಗಾರಿಗಳು ಪ್ರಗತಿಯಲ್ಲಿವೆ. ಬಾಕಿ ಉಳಿದ 1 ಕೋಟಿ ರೂ. ಹಣವನ್ನು ಮುಂದಿನ ಬಜೆಟ್ನಲ್ಲಿ ಬಿಡುಗಡೆ ಮಾಡಲಾಗುವುದು ಎಂದರು.
ಸ್ವಾಮಿ ವಿವೇಕಾನಂದ ಶಾಲೆಯ ಸಮೀಪವಿರುವ ರೈಲ್ವೆ ಕೆಳಸೇತುವೆ ಕಿರಿದಾಗಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಅದನ್ನು ಅಗಲೀಕರಣ ಮಾಡಲು ಅಥವಾ ಅದರ ಪಕ್ಕದಲ್ಲೇ ಮತ್ತೊಂದು ಅಂಡರ್ಪಾಸ್ ನಿರ್ಮಿಸಲು ಸಂಸದರಿಗೆ ಪತ್ರ ಬರೆಯಲಾಗುವುದು.
ಸಂಬಂಧಪಟ್ಟ ಇಲಾಖೆಗಳೊಂದಿಗೆ ಚರ್ಚಿಸಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಗಡಾದ, ಮಾಜಿ ಅಧ್ಯಕ್ಷ ಶ್ರೀನಿವಾಸ ಗುಪ್ತ, ಭಾಗ್ಯನಗರ ಪಟ್ಟಣ ಪಂಚಾಯತ ಅಧ್ಯಕ್ಷ ರಮೇಶ ಹ್ಯಾಟಿ, ನಗರಸಭೆ ಪೌರಾಯುಕ್ತ ವೆಂಕಟೇಶ ನಾಗನೂರು, ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ಶರಣಪ್ಪ, ಗುತ್ತಿಗೆದಾರ ಕೃಷ್ಣ ಇಟ್ಟಂಗಿ ಇತರರಿದ್ದರು.