ಜಿಲ್ಲೆಯಿಂದ 50 ಸಾವಿರ ಕಾರ್ಯಕರ್ತರು ಭಾಗಿ

ಹಾಲಪ್ಪ ಆಚಾರ್
ಹಾಲಪ್ಪ ಆಚಾರ್
Published on
ಕುಕನೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ 50 ವರ್ಷ ಜನ ಸೇವೆ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಮೇ 9ರಂದು ಅಭಿಮಾನೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ತಿಳಿಸಿದರು.
ತಾಲೂಕಿನ ಮಸಬಹಂಚಿನಾಳ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು, ಚಿತ್ರದುರ್ಗದ ಮಾದರ ಚನ್ನಯ್ಯ ಗುರುಪೀಠ ಪಕ್ಕದಲ್ಲಿ ಮೇ 8ರ ಸಂಜೆ 6ಕ್ಕೆ ವಿವಿಧ ಕಲಾ ತಂಡಗಳಿಂದ ಭವ್ಯ ಮೆರವಣಿಗೆ ಮೂಲಕ ಬಿಎಸ್‌ವೈ ಸ್ವಾಗತಿಸಲಾಗುವುದು. ಮೇ 9ರ ಬೆಳಗ್ಗೆ 11ಕ್ಕೆ ಬೃಹತ್ ಕಾರ್ಯಕ್ರಮ ನಡೆಯಲಿದ್ದು, ಕೇಂದ್ರ ಗೃಹ ಸಚಿವ ಅಮೀತ್ ಷಾ ಆಗಮಿಸುವುದು. ರಾಜ್ಯದ 1 ಸಾವಿರಕ್ಕೂ ಅಧಿಕ ಮಠಾಧೀಶರು ಭಾಗವಹಿಸಲಿದ್ದಾರೆ. ಜಿಲ್ಲೆಯಿಂದ 40 ರಿಂದ 50 ಸಾವಿರ ಕಾರ್ಯಕರ್ತರು ಆಗಮಿಸಲಿದ್ದು, ಬಸ್ ವ್ಯವಸ್ಥೆ ಕಲ್ಪಿಸಲಾಗುವುದು. ಇದಲ್ಲದೇ ಸ್ವಯಂ ಪ್ರೇರಣೆಯಿಂದ ಪಾಲ್ಗೊಳ್ಳುವ ಅಭಿಮಾನಿಗಳು ಹೆಚ್ಚಿದ್ದಾರೆಂದು ತಿಳಿಸಿದರು.
ಬಿಎಸ್‌ವೈ ರಾಜ್ಯ ಕಂಡ ಧೀಮಂತ ನಾಯಕ. ಪುರಸಭೆಯಿಂದ ಆಯ್ಕೆಗೊಳ್ಳುವ ಮೂಲಕ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿರುವ ಅವರು ನಾಲ್ಕು ಬಾರಿ ರಾಜ್ಯವನ್ನಾಳಿದ್ದಾರೆ. ಹುಟ್ಟು ಹೋರಾಟಗಾರರಾದ ಅವರ ಮಾರ್ಗದರ್ಶನ ಯುವಜನತೆಗೆ ಅಗತ್ಯವಿದೆ ಎಂದರು.
ಅಭಿವೃದ್ಧಿ ಮರೆತ ಕಾಂಗ್ರೆಸ್ ಕೇವಲ ಅಧಿಕಾರಕ್ಕೆ ಕೆಲಸ ಮಾಡುತ್ತಿದೆ. ಇಂತಹ ಸರ್ಕಾರದಿಂದ ಏನನ್ನೂ ನಿರೀಕ್ಷಿಸಲಾಗದು. ಹಿಂದಿನ ಬಿಜೆಪಿ ಸರ್ಕಾರ ಕ್ಷೇತ್ರದಲ್ಲಿ ಹಲವು ಯೋಜನೆ ಜಾರಿಗೊಳಿಸಿದ್ದು, ಅವುಗಳನ್ನು ಪೂರ್ಣಗೊಳಿಸುತ್ತಿಲ್ಲ. ಕಾಂಗ್ರೆಸ್ ಸರ್ಕಾರ ದಿವಾಳಿಯತ್ತ ಸಾಗುತ್ತಿದೆ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಮಾರುತಿ ಗಾವರಾಳ, ಮಾಜಿ ತಾಪಂ ಉಪಾಧ್ಯಕ್ಷ ಶಿವಕುಮಾರ ನಾಗಲಾಪುರಮಠ, ಪಪಂ ಸದಸ್ಯರಾದ ಸಿದ್ದು ಉಳ್ಳಾಗಡ್ಡಿ, ಬಾಲರಾಜ ಗಾಳಿ, ಶಿವರಾಜಗೌಡ ಯಲ್ಲಪ್ಪಗೌಡ್ರ, ಪ್ರಮುಖರಾದ ಶರಣಪ್ಪ ಬಣ್ಣದಬಾವಿ, ಮಹಾಂತೇಶ ಹೂಗಾರ, ವೀರೇಶ ಸಬರದ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net