ಅನ್ಯ ಕೋಮಿನ ಯುವಕರ ನೈತಿಕ ಪೊಲೀಸ್ ಗಿರಿ ಖಂಡಿಸಿ ಮತ್ತು ಹಿಂದೂ ಸಹೋದರರ ಮೇಲೆ ದಾಖಲಿಸಿರುವ ಸುಳ್ಳು ಪ್ರಕರಣ ಹಿಂಪಡೆಯುವಂತೆ ಒತ್ತಾಯಿಸಿ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಗಂಗಾವತಿ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಮಾಜಿ ಶಾಸಕ ಪರಣ್ಣಮುನವಳ್ಳಿ, ಮಾಜಿ ಸಂಸದ ಎಸ್.ಶಿವರಾಮನಗೌಡ, ಹಿಂದು ಜಾಗರಣಾ ವೇದಿಕೆ ಪ್ರಾಂತ ಸಂಚಾಲಕ ಶ್ರೀಕಾಂತ ಹೊಸ್ಕೇರಿ, ಸದಸ್ಯ ಅಯ್ಯನಗೌಡ ಹೇರೂರು ಇತರರಿದ್ದರು.
ಗಂಗಾವತಿಯಲ್ಲಿ ಹಿಂದೂ ಜಾಗರಣಾ ವೇದಿಕೆ, ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ
ಗಂಗಾವತಿ: ಅನ್ಯ ಕೋಮಿನ ಯುವಕರ ನೈತಿಕ ಪೊಲೀಸ್ ಗಿರಿ ಖಂಡಿಸಿ ಮತ್ತು ಹಿಂದೂ ಸಹೋದರರ ಮೇಲೆ ದಾಖಲಿಸಿರುವ ಸುಳ್ಳು ಪ್ರಕರಣ ಹಿಂಪಡೆಯಲು ಒತ್ತಾಯಿಸಿ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಗಾಂಧಿ ವೃತ್ತದಿಂದ ಬಿಜೆಪಿ ವಿವಿಧ ಮೋರ್ಚಾ ಪದಾಧಿಕಾರಿಗಳೊಂದಿಗೆ ಪ್ರತಿಭಟನೆ ರ‌್ಯಾಲಿ ಮೂಲಕ ವೃತ್ತಕ್ಕೆ ಆಗಮಿಸಿದ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ, ಸಂಚಾರ ತಡೆ ಪ್ರತಿಭಟನೆ ನಡೆಸಿದರು. ಇದರಿಂದ ವಾಹನ ಸಂಚಾರ ಗಂಟೆಗೂ ಹೆಚ್ಚು ಕಾಲ ಸ್ಥಗಿತಗೊಂಡಿದ್ದು, ಸಾರ್ವಜನಿಕರು ಪರದಾಡಿದರು. ಟೈರ್‌ಗೆ ಬೆಂಕಿ ಹಚ್ಚಲು ಕಾರ್ಯಕರ್ತರು ಮುಂದಾದಾಗ ಕೆಲಕಾಲ ಗದ್ದಲ ನಡೆಯಿತು. ಟೈರ್ ಕಸಿದುಕೊಳ್ಳಲು ಪೊಲೀಸರು ಯತ್ನಿಸಿದಾಗ ತಳ್ಳಾಟ ನಡೆಯಿತು. ಹಿಂದೂ ಸಹೋದರರ ಮೇಲೆ ದಾಖಲಿಸಿರುವ ಸುಳ್ಳು ಪ್ರಕರಣದ ಬಿ ರಿಪೋರ್ಟ್ ಹಾಕುವಂತೆ ಒತ್ತಾಯಿಸಿದರು.
ಮಾಜಿ ಶಾಸಕ ಪರಣ್ಣ ಮುನವಳ್ಳಿ ಮತ್ತು ಮಾಜಿ ಸಂಸದ ಎಸ್.ಶಿವರಾಮನಗೌಡ ಮಾತನಾಡಿ, ತಾಲೂಕಿನ ಬಸಾಪಟ್ಟಣದ ಅಮಾಯಕ ಯುವಕ ವೆಂಕಟೇಶನನ್ನು ಅನ್ಯಕೋಮಿನ ಯುವಕರು ಥಳಿಸಿದ್ದಾರೆ. ಅಲ್ಲದೇ ವೆಂಕಟೇಶ ಮತ್ತು ಆತನ ಸಹೋದರನ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಅನ್ಯಕೋಮಿನ ಯುವಕರ ವಿರುದ್ಧ ಪೊಲೀಸ್ ಇಲಾಖೆ ಮೃದುಧೋರಣೆ ತಾಳುತ್ತಿರುವುದು ಸರಿಯಲ್ಲ. ನೈತಿಕ ಪೊಲೀಸ್ ಗಿರಿ ನಿಯಂತ್ರಣಕ್ಕೆ ಪೊಲೀಸರು ಮುಂದಾಗಬೇಕಿದ್ದು, ಹಿಂದೂ ಸಹೋದರರ ಮೇಲೆ ಹಾಕಿರುವ ಪ್ರಕರಣ ಹಿಂಪಡೆಯಬೇಕು. ನಿರ್ಲಕ್ಷಿಸಿದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದರು.
ಹಿಂದೂ ಜಾಗರಣಾ ವೇದಿಕೆ ಪ್ರಾಂತ ಸಂಚಾಲಕ ಶ್ರೀಕಾಂತ ಹೊಸ್ಕೇರಿ ಮಾತನಾಡಿ, ಪೊಲೀಸರ ಮೇಲೆ ದೌರ್ಜನ್ಯ ನಡೆಸುತ್ತಿರುವ ಎಸ್‌ಡಿಪಿಐ ಕಾರ್ಯಕರ್ತರನ್ನು ಕೂಡಲೇ ಬಂಧಿಸಬೇಕಿದ್ದು, ಪ್ರಕರಣದಲ್ಲಿ ಭಾಗಿಯಾದವರನ್ನು ಪತ್ತೆ ಹಚ್ಚಬೇಕು. ಪ್ರಕರಣ ಹಿಂಪಡೆಯಲು ವಾರದ ಗಡುವು ನೀಡಲಾಗುತ್ತಿದ್ದು, ಸ್ಪಂದಿಸದಿದ್ದರೆ ಗಂಗಾವತಿ ಬಂದ್‌ಗೆ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು. ಬೇಡಿಕೆ ಮನವಿಯನ್ನು ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡಗೌಡರ್‌ಗೆ ಸಲ್ಲಿಸಲಾಯಿತು.
ನಗರಸಭೆ ಮಾಜಿ ಸದಸ್ಯರಾದ ವಾಸುದೇವ ನವಲಿ, ನವೀನ್ ಮಾ.ಪಾಟೀಲ್, ಬಿಜೆಪಿ ವಿವಿಧ ಮೋರ್ಚಾದ ಪದಾಧಿಕಾರಿಗಳಾದ ಚಂದ್ರು ಹೀರೂರ, ಯಮನೂರ ಚೌಡ್ಕಿ, ನಾಗರಾಜ ಚಳಗೇರಿ, ಕಾಶೀನಾಥ ಚಿತ್ರಗಾರ, ಡಾ.ಕೆ.ಅಮರೇಶ ಪಾಟೀಲ್, ಎಚ್.ಸಂಗಮೇಶ, ಮಹಾಲಿಂಗಪ್ಪ ಬನ್ನಿಕೊಪ್ಪ, ಶಿವಕುಮಾರ ಆದೋನಿ, ಮಂಜು ಕಟ್ಟಿಮನಿ, ಹಿಂದೂ ಜಾಗರಣಾ ವೇದಿಕೆ ಪ್ರತಿನಿಧಿಗಳಾದ ಅಯ್ಯನಗೌಡ ಹೇರೂರು, ವೀರೇಶ ಹಂಚಿನಾಳ್, ಕುಮಾರ ಹೂಗಾರ್, ವಿಠ್ಠಲ ನಾವಡೆ, ಮಡಿವಾಳ ಸಮಾಜದ ಮುಖಂಡರಾದ ತಿಪ್ಪಣ್ಣ ಮಡಿವಾಳ, ರಾಘವೇಂದ್ರ ಇತರರಿದ್ದರು.
ನಗರ ಠಾಣೆಗೆ ಮುತ್ತಿಗೆ ಯತ್ನ
ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡರೊಂದಿಗೆ ವಾಗ್ವಾದಕ್ಕಿಳಿದ ಕಾರ್ಯಕರ್ತರು, ಪ್ರಕರಣ ಹಿಂಪಡೆಯುವುದರ ಬಗ್ಗೆ ಹಿಂಬರಹ ನೀಡಲು ಒತ್ತಾಯಿಸಿದ್ದರಿಂದ ಗದ್ದಲ ನಡೆಯಿತು. ಪೊಲೀಸರು ಮಣಿಯದಿದ್ದರಿಂದ ನಗರ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಕಾರ್ಯಕರ್ತರ ಬೇಡಿಕೆಗೆ ಸ್ಪಂದಿಸಿದ ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡರ್‌ಗೆ ಬಿ ರಿಪೋರ್ಟ್ ಹಾಕಲು ವಾರದ ಕಾಲಾವಕಾಶ ಕೇಳಿದ್ದರಿಂದ ತಿಳಿಗೊಂಡಿತ್ತು.
"
ಬಸಾಪಟ್ಟಣದ ವೆಂಕಟೇಶ ಹಲ್ಲೆ ಪ್ರಕರಣದಲ್ಲಿ ಅನ್ಯಕೋಮಿನ ಏಳು ಜನರನ್ನು ಈಗಾಗಲೇ ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ. ಹಿಂದೂ ಸಹೋದರರ ಮೇಲಿನ ಪ್ರಕರಣದ ಕುರಿತು ಪರಿಶೀಲಿಸಲಾಗುತ್ತಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗುವುದು.