ದೌರ್ಜನ್ಯಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡ ಕನಕಗಿರಿ ಬಸವರಾಜರೆಡ್ಡಿ ಮನೆಗೆ ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಭೇಟಿ ನೀಡಿ ಮೃತನ ಪತ್ನಿ ರಾಧಿ ಅವರಿಗೆ ಸಾಂತ್ವಾನ ಹೇಳಿದರು. ಪ್ರಮುಖರಾದ ರತ್ನಕುಮಾರಿ, ಹುಲಿಗೆಮ್ಮ ಇತರರಿದ್ದರು.
ಕನಕಗಿರಿ: ರಾಜ್ಯದಲ್ಲಿ ಮಹಿಳೆಯರ ಮಾನ, ಪುರುಷರ ಜೀವಕ್ಕೆ ಬೆಲೆಯಿಲ್ಲವಾಗಿದೆ ಎಂದು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಆರೋಪಿಸಿದರು.
ಜಾಗದ ವಿಚಾರದಲ್ಲಿ ದೌರ್ಜನ್ಯಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡ ಬಸವರಾಜ ರೆಡ್ಡಿ ಮನೆಗೆ ಶನಿವಾರ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಸಾವಿನಲ್ಲಿ ರಾಜಕೀಯ ಮಾಡುವ ಇರಾದೆ ಬಿಜೆಪಿಗಿಲ್ಲ. ನಾವು ಮಾನವೀಯತೆ ದೃಷ್ಟಿಯಿಂದ ಸಾಂತ್ವನ ಹೇಳಲಿಕ್ಕೆ ಬಂದಿದ್ದೇವೆ. ಒಬ್ಬ ಮಹಿಳೆಯಾಗಿ ಗಂಡನನ್ನು ಕಳೆದುಕೊಂಡು ಇನ್ನೊಬ್ಬ ಮಹಿಳೆಯ ಸಂಕಷ್ಟವನ್ನು ಆಲಿಸಲು ಬಂದಿದ್ದೇನೆ.
ಸಚಿವ ಶಿವರಾಜ ತಂಗಡಗಿ ಅವರ ಮೇಲೆ ಗೌರವವಿದೆ. ಅವರ ಕ್ಷೇತ್ರದಲ್ಲಿ ಅವರ ಪಕ್ಷದ ಕಾರ್ಯಕರ್ತನ ಸಹೋದರನಿಗೆ ದೌರ್ಜನ್ಯ ನಡೆದು ಜೀವ ಕಳೆದುಕೊಂಡ ಘಟನೆ ನಡೆದಿದೆ. ಅವರು ಇದುವರೆಗೂ ಬಂದು ನೋವು ಆಲಿಸಲು ಮುಂದಾಗದಿರುವುದು ಬೇಸರದ ಸಂಗತಿ ಎಂದರು.
ಸಚಿವರು ಈ ಕುಟುಂಬಕ್ಕೆ ಪರಿಹಾರದ ಜತೆಗೆ, ಜಾಗದ ವಿವಾದವನ್ನು ಇತ್ಯರ್ಥಪಡಿಸಿ ಸಂತ್ರಸ್ತರಿಗೆ ಒದಗಿಸಬೇಕು. ಮೃತರ ಎರಡೂ ಮಕ್ಕಳಿಗೆ ಪದವಿವರೆಗೂ ಉಚಿತ ಶಿಕ್ಷಣ ನೀಡಬೇಕು. ಕುಟುಂಬಕ್ಕೆ ಸರ್ಕಾರಿ ನೌಕರಿ ನೀಡಬೇಕು ಎಂದು ಆಗ್ರಹಿಸಿದರು.
ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ, ನಿಕಟಪೂರ್ವ ಅಧ್ಯಕ್ಷ ಮಹಾಂತೇಶ ಸಜ್ಜನ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ವಾಗೇಶ ಹಿರೇಮಠ, ಪ್ರಮುಖರಾದ ರತ್ನಕುಮಾರಿ, ಹುಲಿಗೆಮ್ಮ, ಪುರುಷೋತ್ತಮರೆಡ್ಡಿ ಮಾದಿನಾಳ, ಅಯ್ಯನಗೌಡ ಇತರರಿದ್ದರು.