88 ಎಕರೆ ವಿಸ್ತಾರ ಹೊಂದಿದ ಕೆರೆ ನೂರಾರು ವರ್ಷಗಳ ಇತಿಹಾಸ ಹೊಂದಿದೆ. ಕೊಪ್ಪಳ ಕೋಟೆಗೆ ಹೊಂದಿಕೊಂಡಿದ್ದು, ಪ್ರಾಕೃತಿಕ ಸೌಂದರ್ಯ ಹೊಂದಿದೆ. ನಿರ್ವಹಣೆ ಕೊರತೆ ಕಾರಣ ವರ್ಷದಿಂದ ವರ್ಷಕ್ಕೆ ಅತಿಕ್ರಮವಾಗುತ್ತಿದೆ. ಬಲದಂಡೆ ಭಾಗದಲ್ಲಿ ಶಿವರಾತ್ರೇಶ್ವರ ದೇವಾಲಯವಿದೆ. ಹಿಂಭಾಗದಲ್ಲಿ ಮಸೀದಿ ಮಾಡಲಾಗಿದೆ. ದಾರಿ ಮಾಡುವ ಉದ್ದೇಶದಿಂದ ಕೆರೆ ಕೋಡಿ ಬಗೆದು ತುಂಬಿದ್ದ ಕೆರೆ ನೀರು ಖಾಲಿ ಮಾಡಲಾಗಿದೆ. ಬೇಸಿಗೆ ಸಮೀಪಿಸಿದ್ದು, ಈ ಹಂತದಲ್ಲಿ ಕೆರೆ ನೀರು ಬರಿದಾಗಿಸಲಾಗಿದೆ. ಬಳಿಕ ಶಿವರಾತ್ರೇಶ್ವರ ದೇವಾಲಯಕ್ಕೆ ಹೊಂದಿಕೊಂಡು ಕೆರೆ ಮಧ್ಯ ಭಾಗದಲ್ಲಿ 15 ಅಡಿ ಅಗಲದ ರಸ್ತೆ ನಿರ್ಮಿಸಲಾಗಿದೆ. ಈ ಬಗ್ಗೆ ನಗರಸಭೆ, ಜಿಲ್ಲಾಧಿಕಾರಿಗಳಿಗೂ ಮಾಹಿತಿ ನೀಡಿಲ್ಲವೆಂದು ವಿಪ ಸದಸ್ಯೆ ಹೇಮಲತಾ ನಾಯಕ, ಬಿಜೆಪಿ ರಾಜ್ಯಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್ ಆಕ್ರೋಶ ವ್ಯಕ್ತಪಡಿಸಿದರು.