ವಿಜಯವಾಣಿ ಸುದ್ದಿಜಾಲ ಕುಷ್ಟಗಿ
ತಹಸಿಲ್ ಕಚೇರಿ ಸೇರಿ ವಿವಿಧ ಇಲಾಖೆಗಳನ್ನು ಹೊಂದಿರುವ ತಾಲೂಕಾಡಳಿತ ಸೌಧದಲ್ಲಿ ಸರ್ಕಾರಿ ಸೇವೆ ಪಡೆಯಲು ಬರುವ ಜನರಿಗೆ ಕನಿಷ್ಠ ಸೌಲಭ್ಯಗಳೂ ಇಲ್ಲವಾಗಿದ್ದು, ನಿತ್ಯ ಪರದಾಟ ಸಾಮಾನ್ಯವಾಗಿದೆ.
ಹನುಮಸಾಗರ ರಸ್ತೆಯ ಹತ್ತಿರ ತಾಲೂಕಾಡಳಿತ ಸೌಧ ನಿರ್ಮಿಸಲಾಗಿದೆ. ಇಲ್ಲಿ ತಹಸಿಲ್ ಕಚೇರಿ, ಭೂಮಾಪನ, ನೋಂದಣಿ, ಆಹಾರ, ಖಜಾನೆ ಇಲಾಖೆ ಸೇರಿ ಅನೇಕ ಕಚೇರಿಗಳು ಕಾರ್ಯನಿರ್ವಹಿಸುತ್ತವೆ.
ವಿವಿಧ ಕೆಲಸಗಳಿಗಾಗಿ ಪ್ರತಿದಿನ ಮಹಿಳೆಯರು, ಹಿರಿಯ ನಾಗರಿಕರು, ವಿದ್ಯಾರ್ಥಿಗಳು ಬರುವುದು ಸಾಮಾನ್ಯವಾಗಿದೆ. ಆದರೆ, ಕನಿಷ್ಠ ಶುದ್ಧ ಕುಡಿವ ನೀರು ಹಾಗೂ ಶೌಚಗೃಹ ವ್ಯವಸ್ಥೆ ಮಾಡದ ತಾಲೂಕು ಆಡಳಿತದ ಬಗ್ಗೆ ಗ್ರಾಮೀಣ ಭಾಗದ ಜನರು ರೋಸಿಹೋಗಿದ್ದಾರೆ.
ಪುರಸಭೆಯ ಅನುದಾನದಡಿ ತಾಲೂಕು ಕಚೇರಿ ಆವರಣದಲ್ಲಿ ನಿರ್ಮಾಣಗೊಂಡ ಎರಡು ಶೌಚಗೃಹಗಳು ನಿರ್ವಹಣೆ ಇಲ್ಲದೆ ಬೀಗ ಹಾಕಲಾಗಿದೆ. ಹೀಗಾಗಿ ತಾಲೂಕು ಕಚೇರಿಯ ಗೋಡೆ ಮರೆಯಲ್ಲಿ ಜಲಬಾಧೆ ತೀರಿಸಿಕೊಳ್ಳಬೇಕಾಗಿದೆ.
ಇನ್ನೂ ಮಹಿಳೆಯರ ಸ್ಥಿತಿ ಹೇಳತೀರದು. ಸಣ್ಣಪುಟ್ಟ ಕೆಲಸಗಳಿಗೆ ದೂರದಿಂದ ಬರುವ ಜನರಿಗೆ ಸೌಜನ್ಯಕ್ಕಾದರೂ ಶುದ್ಧ ಕುಡಿವ ನೀರಿನ ವ್ಯವಸ್ಥೆ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.
ಆವರಣದಲ್ಲಿರುವ ಆರ್‌ಒ ಪ್ಲಾಂಟ್ ಸ್ಥಗಿತಗೊಂಡು ಹಲವು ವರ್ಷಗಳೇ ಕಳಿದಿದ್ದು, ರಿಪೇರಿ ಮಾಡಿಸಿಲ್ಲ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಮಹಿಳಾ ಮತ್ತು ಪುರುಷರ ಶೌಚಗೃಹ ಮತ್ತು ಕುಡಿವ ನೀರಿನ ಘಟಕಗಳ ಸುತ್ತ ಗಿಡಗಂಟಿಗಳು ಬೆಳೆದು ನಿಂತಿವೆ. ದೈನಂದಿನ ಕೆಲಸಗಳ ಸಲುವಾಗಿ ವಿವಿಧ ಇಲಾಖೆಗೆ ಬರುವ ಜನರು, ಮೂಲಸೌಲಭ್ಯ ಒದಗಿಸದ ತಾಲೂಕು ಆಡಳಿತದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.